ದೇಶದ ದಕ್ಷಿಣದ ಜನರಲ್ಲೇ ಏಡ್ಸ್ ಸೋಂಕು ಅಧಿಕ
ಬೆಂಗಳೂರು, ಡಿ.1: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಎಚ್ಐವಿ ಸೋಂಕುಪೀಡಿತರ ಅಂಕಿ ಅಂಶ ಪ್ರಕಟಿಸಲಾಗಿದೆ. ದೇಶದ ಅರ್ಧಕ್ಕೂ ಅಧಿಕ ಸೋಂಕು ಪೀಡಿತರು ದಕ್ಷಿಣ ಭಾಗದಲ್ಲೇ ಇದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಶೇ.50ರಷ್ಟು ಎಚ್‌ಐವಿ ಪ್ರಕರಣ ಪತ್ತೆಯಾಗಿವೆ. 2014 ಮೇ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದೇಶದ ಒಟ್ಟು 7.7 ಲಕ್ಷ ಎಚ್‌ಐವಿ ಸೋಂಕಿತರಲ್ಲಿ ಶೇ.50ರಷ್ಟು ಎಚ್‌ಐವಿ ಪೀಡಿತರು ದಕ್ಷಿಣ ಭಾರತದ ಈ ನಾಲ್ಕು ರಾಜ್ಯದವರೇ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಲಾಖೆ ತಿಳಿಸಿದೆ.
ಸೋಂಕು ಪ್ರಮಾಣ ಇಳಿಕೆ: ಆದರೆ, ದೇಶದೆಲ್ಲೆಡೆ ಲೆಕ್ಕಾಚಾರದಲ್ಲಿ ಎಚ್ ಐವಿ ಸೋಂಕಿತರ ಪ್ರಮಾಣ ಶೇ 57ರಷ್ಟು ಇಳಿಕೆಯಾಗಿದೆ. ಸಾವಿನ ಸಂಖ್ಯೆ ಶೇ 25ರಷ್ಟು ತಗ್ಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ. [ಮುಚ್ಚಿಟ್ಟ ಲೈಂಗಿಕತೆಯಿಂದ ಹೆಚ್ಚುತ್ತಿರುವ ಏಡ್ಸ್]

ದಕ್ಷಿಣ ಭಾರತದ ಲೆಕ್ಕಾಚಾರದಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ 1.7 ಲಕ್ಷ ಎಚ್‌ಐವಿ ಸೋಂಕಿತರಿದ್ದರೆ, ಮಹಾರಾಷ್ಟ್ರದಲ್ಲಿ 1.43 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ. ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದು, ಇತರೆ ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಕಡಿಮೆ ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದಾರೆ. ಇಡೀ ದೇಶದಲ್ಲಿ ಎಚ್ ಐವಿ ಪ್ರಮಾಣ ಇಳಿಕೆಯಾಗಿದ್ದರೂ ಕೆಲ ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ.
ಎಚ್ ಐವಿ ಹಾಗೂ ಏಡ್ಸ್ ಕುರಿತಂತೆ ಕೇಂದ್ರ ಸರ್ಕಾರ ಸಹಾಯವಾಣಿ(ಸಂಖ್ಯೆ 1097 )ಯನ್ನು ಬಿಡುಗಡೆ ಮಾಡಿದೆ. 2007ರಿಂದ ಲೆಕ್ಕ ತೆಗೆದುಕೊಂಡರೆ ಸಾವಿನ ಸಂಖ್ಯೆ ಶೇ 30ರಷ್ಟು ಇಳಿಕೆಯಾಗಿದೆ. 1986ರಲ್ಲಿ ಮೊದಲ ಬಾರಿಗೆ ಎಚ್ ಐವಿ ಸೋಂಕು ಇರುವುದು ಪತ್ತೆಯಾಗಿತ್ತು.












Click it and Unblock the Notifications