ಭಾರತದಲ್ಲಿ ವಿದೇಶಿ ಪ್ರಜೆಗಳಿಗೆ ಕೊರೊನಾ ಲಸಿಕೆ ನೀಡಲು ಅನುಮತಿ
ನವದೆಹಲಿ, ಆಗಸ್ಟ್ 09: ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಲಾಗಿದ್ದು, ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ತಿಳಿಸಿದೆ.
ಕೊರೊನಾ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ತಮ್ಮ ಪಾಸ್‌ಪೋರ್ಟ್ ಅನ್ನು ಗುರುತಿನ ಚೀಟಿಯಾಗಿ ಬಳಸಿಕೊಳ್ಳಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ.
"ಭಾರತದಲ್ಲಿ ಗಣನೀಯ ಸಂಖ್ಯೆಯಲ್ಲಿ ವಿದೇಶಿ ಪ್ರಜೆಗಳು ನೆಲೆಸಿದ್ದಾರೆ. ಅದರಲ್ಲಿಯೂ ಮೆಟ್ರೋಪಾಲಿಟನ್ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಕೊರೊನಾ ಹರಡುವ ಪ್ರಮಾಣವೂ ಹೆಚ್ಚಿರುತ್ತದೆ. ಈ ರೀತಿಯ ಸಾಧ್ಯತೆಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಲಸಿಕೆ ನೀಡುವುದು ಅವಶ್ಯಕವಾಗಿದೆ. ಹೀಗಾಗಿ ಇಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗ ಲಸಿಕೆ ನೀಡಲಾಗುತ್ತಿದೆ" ಎಂದು ಸಚಿವಾಲಯ ಮಾಹಿತಿ ನೀಡಿದೆ.

"ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಸುರಕ್ಷೆಯನ್ನು ಖಾತ್ರಿಪಡಿಸುವುದು ನಮ್ಮ ಕರ್ತವ್ಯ. ಜೊತೆಗೆ ಕೊರೊನಾ ಹರಡುವಿಕೆ ತಡೆಯಲು ದೇಶದಲ್ಲಿ ಲಸಿಕೆಯನ್ನು ಎಲ್ಲರಿಗೂ ನೀಡುವುದು ಅವಶ್ಯಕ" ಎಂದು ಉಲ್ಲೇಖಿಸಿದೆ.
ಕಳೆದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 205 ದಿನಗಳೇ ಕಳೆದಿದ್ದು, ಕಳೆದ 24 ಗಂಟೆಗಳಲ್ಲಿ 16,11,590 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಶನಿವಾವಾರದ ವೇಳೆಗೆ ಒಟ್ಟು 50,86,64,759 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಕೊರೊನಾವೈರಸ್ ಲಸಿಕೆಯ ಶೇ.75ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರವೇ ಕಂಪನಿಗಳಿಂದ ನೇರವಾಗಿ ಖರೀದಿಸುತ್ತದೆ. ಹೀಗೆ ಖರೀದಿಸಿದ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಗುತ್ತಿದೆ.
2021ರ ಆಗಸ್ಟ್ 09ರ ಅಂಕಿ-ಅಂಶಗಳ ಪ್ರಕಾರ, 52,40,60,890 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ.
ಭಾರತದಲ್ಲಿ ಸೋಮವಾರ 35,499 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 4,02,188 ಸಕ್ರಿಯ ಪ್ರಕರಣಗಳಿವೆ, ಶೇ.97.40ಯಷ್ಟು ಚೇತರಿಕೆ ಪ್ರಮಾಣವಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 52.40 ಕೋಟಿ ಡೋಸ್ ಕೊರೋನಾ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,19,69,954ಕ್ಕೆ ಏರಿಕೆಯಾಗಿದೆ. ಈವರೆಗೂ 3,11,37,457 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,02,188 ಸಕ್ರಿಯ ಪ್ರಕರಣಗಳಿವೆ.
ದೇಶದ ಪರೀಕ್ಷೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 13,71,871 ಪರೀಕ್ಷೆಗಳನ್ನು ನಡೆಸಲಾಗಿದೆ.
"ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ ಟೆಸ್ಟ್-ಟ್ರ್ಯಾಕ್-ಟ್ರಿಟ್- ವ್ಯಾಕ್ಸಿನೇಟ್-ಕೊರೊನಾ ನಿರ್ವಹಣೆ ಸೂಕ್ತ ನಡವಳಿಕೆ- ಈ ಐದು ತಂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಸರ್ಕಾರಗಳು ಖಾತ್ರಿಪಡಿಸಿಕೊಳ್ಳಬೇಕು. ಇದರಲ್ಲಿ ಸಡಿಲತೆಯಾದರೆ ಸಾಂಕ್ರಾಮಿಕ ನಿರ್ವಹಣೆಯಲ್ಲಿ ನಮ್ಮ ದೇಶ ಇದುವರೆಗೆ ಕಾಯ್ದುಕೊಂಡಿದ್ದ ಜಾಗ್ರತೆಯನ್ನು ಕಳೆದುಕೊಳ್ಳಬಹುದು ಎಂದು ಹೇಳಿದೆ.
ಕೊರೊನಾ ಸೋಂಕಿನಿಂದ ದೈನಂದಿನ ಸಾವಿನ ಪ್ರಕರಣಗಳು ಸಕಾರಾತ್ಮಕವಾಗಿ ಬದಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕೊರೊನಾ ಮೂರನೇ ಅಲೆ ಕೆಟ್ಟದಾಗಿ ತಿರುವು ಪಡೆಯಬಹುದು ಎಂದು ಕೇಂದ್ರ ಎಚ್ಚರಿಕೆ ನೀಡಿದೆ.
ವಿಶ್ವದೆಲ್ಲೆಡೆ ಒಟ್ಟು 203,678,201ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 4,311,989ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 182,993,877 ಪ್ರಕರಣಗಳು ಮುಕ್ತಾಯಗೊಂಡಿವೆ.












Click it and Unblock the Notifications