Vande Bharat Express: ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ವಿಘ್ನ- ವೇಗದಲ್ಲಿ ಇಳಿಕೆ
ಚೆನ್ನೈ ಜನವರಿ 1: ವಂದೇ ಭಾರತ್ ರೈಲು ಈಗಾಗಲೇ ದೇಶದ ಹಲವೆಡೆ ಸಂಚಾರ ಮಾಡುತ್ತಿದೆ. ಪ್ರಸ್ತುತ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಸಂಚಾರ ಮಾಡಲು ಸಿದ್ಧವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಈ ರೈಲು ಸಂಚರಿಸಲಿದೆ. ಆದರೆ ಇದಕ್ಕೆ ವಿಘ್ನವೊಂದು ಎದುರಾಗಿದೆ. ಅದೆಂದರೆ ಸ್ಲೀಪರ್ ಕೋಚ್ ರೈಲುಗಳು ನಿರೀಕ್ಷೆಯಂತೆ ವೇಗದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ.
ಹೌದು... ವಂದೇ ಭಾರತ್ ರೈಲು ಸಾಮಾನ್ಯ ರೈಲುಗಳಿಗಿಂತ ಹೆಚ್ಚು ವೇಗವಾಗಿ ಸಂಚಾರ ಮಾಡುತ್ತದೆ. ವಂದೇ ಭಾರತ್ ಗಂಟೆಗೆ 130 ರಿಂದ 180 ಕಿಮೀ ವೇಗದಲ್ಲಿ ಸಂಚಾರ ಮಾಡುತ್ತದೆ. ಆದರೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಈ ವೇಗದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ವೇಳೆ ಈ ವಿಫಲತೆ ರೈಲಿನಲ್ಲಿ ಕಂಡು ಬಂದಿದೆ. ಇದಕ್ಕೆ ಕಾರಣ ಏನು?

ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಮೂಲಗಳ ಪ್ರಕಾರ ರೈಲು ನಿರೀಕ್ಷಿತ ವೇಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ವಂದೇ ಭಾರತ್ ಚೇರ್ ಕಾರ್‌ಗಳಿಗಾಗಿ ವಿನ್ಯಾಸಗೊಳಿಸಲಾದ ರೈಲಿಗೆ ಸ್ಲೀಪರ್ ಬರ್ತ್‌ಗಳನ್ನು ಸೇರಿಸಲಾಗಿದೆ. ಜೊತೆಗೆ ಹೆಚ್ಚಿನ ನೀರು ಸಂಗ್ರಹಿಸಲು ಮಾರ್ಪಾಡುಗಳನ್ನೂ ಮಾಡಲಾಗಿದೆ.
ಈ ಬದಲಾವಣೆಗಳು ಕೋಚ್‌ಗಳ ತೂಕವನ್ನು ಹೆಚ್ಚಿಸಿವೆ. ಪರಿಣಾಮವಾಗಿ ರೈಲು ತನ್ನ ನಿರೀಕ್ಷಿತ ವೇಗವನ್ನು (130-180 ಕಿಮೀ / ಗಂ) ತಲುಪಲು ಸಾಧ್ಯವಾಗುವುದಿಲ್ಲ ಎಂದು ಪೆರಂಬೂರ್ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲುಗಳ ವೇಗವನ್ನು ಈಗ 130 ಕಿಮೀ/ಗಂಟೆಗೆ ಮಿತಿಗೊಳಿಸಲಾಗಿದೆ.

RDSO ಪ್ರಸ್ತುತ ರೈಲ್ವೆ ಸುರಕ್ಷತಾ ಕಾರ್ಯವಿಧಾನಗಳನ್ನು ಅಂತಿಮಗೊಳಿಸುತ್ತಿದೆ. ಪ್ರಯಾಣಿಕರ ತೂಕವನ್ನು ಅನುಕರಿಸಲು ಕೋಚ್‌ಗಳಿಗೆ ಮರಳು ಚೀಲಗಳನ್ನು ತುಂಬುವ ಮೂಲಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ, ರೈಲು ಪ್ರಯಾಣಕ್ಕೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಗುತ್ತದೆ. ಬಳಿಕ ಎಲ್ಲಾ ಸಂಬಂಧಿತ ದಾಖಲಾತಿಗಳನ್ನು ರೈಲ್ವೇ ಸುರಕ್ಷತಾ ಆಯುಕ್ತರಿಗೆ ಹಸ್ತಾಂತರಿಸಲಾಗುವುದು, ನಂತರ ಅವರು ಗರಿಷ್ಠ ವೇಗದಲ್ಲಿ ಪ್ರಾಯೋಗಿಕ ರನ್ ನಡೆಸುತ್ತಾರೆ. ಈ ಪ್ರಕ್ರಿಯೆಯ ನಂತರವೇ ರೈಲನ್ನು ಭಾರತೀಯ ರೈಲ್ವೆಗೆ ಹಸ್ತಾಂತರಿಸಲಾಗುವುದು.
ವಂದೇ ಭಾರತ್ ಸ್ಲೀಪರ್ ಕೋಚ್ ರೈಲು 16 ಕೋಚ್‌ಗಳನ್ನು ಒಳಗೊಂಡಿದೆ. ಎಸಿ3ಟೈರ್‌ನ 11 ಬೋಗಿಗಳು 611 ಆಸನಗಳನ್ನು ಹೊಂದಿರುತ್ತವೆ. ಎಸಿ2ಟೈರ್್ನ 4 ಬೋಗಿಗಳು 188 ಆಸನಗಳನ್ನು ಹೊಂದಿರುತ್ತವೆ. ಜೊತೆಗೆ ಮೊದಲ ದರ್ಜೆ ಎಸಿಯ ಒಂದು ಬೋಗಿ 24 ಆಸನಗಳನ್ನು ಹೊಂದಿರುತ್ತದೆ. ಒಟ್ಟು 823 ಆಸನಗಳು ಹಾಗೂ 16 ಬೋಗಿಗಳನ್ನು ಈ ರೈಲು ಹೊಂದಿರುತ್ತದೆ.
ವಿಶೇಷತೆಗಳು:-
ನಿದ್ರಿಸಲು ಆರಾಮದಾಯಕ ಮಂಚ, ಅತ್ಯುತ್ತಮ ಒಳಾಂಗಣ, ಏರೋಡೈನಾಮಿಕ್ ಬಾಹ್ಯನೋಟ, ಅಗ್ನಿ ಅಪಾಯದ ಮಟ್ಟ ಅತಿಕಡಿಮೆ, ಅಂಗವಿಕಲರಿಗೆ ವಿಶೇಷ ಆಸನ ಮತ್ತು ಶೌಚಾಲಯ ವ್ಯವಸ್ಥೆ,ಸ್ವಯಂ ಚಾಲಿತ ಬಾಗಿಲುಗಳು, ಬೋಗಿಗಳ ಮಧ್ಯೆ ಸೆನ್ಸರ್ ಆಧಾರಿತ ಬಾಗಿಲುಗಳು, ರೈಲಿನ ಕೊನೆ ಬೋಗಿಯಲ್ಲಿ ದೂರದಿಂದಲೇ ಕಾರ್ಯ ನಿರ್ವಹಿಸುವ ಬೆಂಕಿ ತಡೆಗೋಡೆ ಬಾಗಿಲುಗಳು, ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ, ಚಾಲನಾ ಸಿಬ್ಬಂದಿಗೆ ಶೌಚಾಲಯ, ಪ್ರಥಮ ದರ್ಜೆ ಎಸಿ ಕಾರಿನಲ್ಲಿ ಸ್ನಾಕ್ಕೆ ಬಿಸಿನೀರಿನ ವ್ಯವಸ್ಥೆ, ಯುಎಸ್‌ಬಿ ಚಾರ್ಜಿಂಗ್, ರೀಡಿಂಗ್ ಲೈಟ್, ಸಾರ್ವಜನಿಕ ಪ್ರಕಟನೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ, ವಿಶಾಲವಾದ ಲಗೇಜ್ ಕೊಠಡಿ ಇತ್ಯಾದಿ ವಂದೇ ಭಾರತ್ ಸ್ಲೀಪರ್ ವಿಶೇಷತೆಗಳಾಗಿವೆ.












Click it and Unblock the Notifications