ಮೆಗಾ ಸ್ಟೋರ್ ಗಳ ಮೇಲೆ ಬಿಜೆಪಿ ಗದಾ ಪ್ರಹಾರ?
ನವದೆಹಲಿ, ಮೇ.28: ಬಹು ಬ್ರಾಂಡ್ ಚಿಲ್ಲರೆ ಕ್ಷೇತ್ರದಲ್ಲಿ ಎಫ್‌ಡಿಐಗೆ ಎನ್ ಡಿಎ ಸರ್ಕಾರ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಪ್ರಣಾಳಿಕೆಯಲ್ಲಿ ಸೂಚಿಸಿದಂತೆ ನಡೆದುಕೊಳ್ಳುತ್ತೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಹಾಯಕ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿದೇಶಿ ಹೂಡಿಕೆದಾರರು ದೇಶದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತಾದರೆ ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದು ನಿರ್ಮಲಾ ಅವರು ತಿಳಿಸಿದ್ದಾರೆ. ಅವರೊಂದಿಗೆ ಸಣ್ಣ ಪ್ರಮಾಣದ ರೈತರಿಗೂ ತೊಂದರೆ ಆಗಲಿದೆ ಎಂದು ನಿರ್ಮಲಾ ನೀಡಿರುವ ಹೇಳಿಕೆ ಈಗಾಗಲೇ ಸಂಚಲನ ಸೃಷ್ಟಿಸುತ್ತಿದೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಪ್ರಕಟಣೆಗೆ ಬದ್ಧವಾಗಿರುತ್ತದೆ. ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೊಸ ವಿಷಯವಲ್ಲ. ಆದರೆ, ದೇಶದ ಚಿಲ್ಲರೆ ಕ್ಷೇತ್ರ, ಮಲ್ಟಿ ಬ್ರ್ಯಾಂಡ್ ರೀಟೈಲ್ ನಲ್ಲಿ ಎಫ್ ಡಿಐ ಜಾರಿಗೊಂಡರೆ ದೇಶದ ಸಣ್ಣ ಉದ್ಯಮಿಗಳ ಬದುಕಿಗೆ ಮಾರಕವಾಗಲಿದೆ. ಸದ್ಯದ ಪರಿಸ್ಥಿತಿ ಮೆಗಾ ಸ್ಟೋರ್ ಗಳಿಗೆ ಮಣೆ ಹಾಕುವುದಿಲ್ಲ. ಯುಪಿಎ ಸರ್ಕಾರ ಎಫ್ ಡಿಐ ಬಗ್ಗೆ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಲ್ಟಿ ಬ್ರ್ಯಾಂಡ್ ರೀಟೈಲ್ ಕ್ಷೇತ್ರವನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಎಫ್ ಡಿಐಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಇದರಿಂದ ಹೆಚ್ಚಿನ ಉದ್ಯೋಗವಕಾಶ ಕೂಡಾ ಸಿಗಲಿದೆ. ಯುಪಿಎ ಸರ್ಕಾರ ಮಲ್ಟಿ ಬ್ರ್ಯಾಂಡ್ ರೀಟೈಲ್ ಕ್ಷೇತ್ರದಲ್ಲಿ ಶೇ 51 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆವಕಾಶ ನೀಡಿದ್ದರೂ ಯುಕೆ ಮೂಲದ ಟೆಸ್ಕೋ ಕಂಪನಿ ಮಾತ್ರ ಈ ಸೌಲಭ್ಯ ಪಡೆದುಕೊಂಡಿದೆ. ಹೀಗಾಗಿ ಈ ಬಗ್ಗೆ ಚರ್ಚೆ ಅಗತ್ಯ ಎಂದು ನಿರ್ಮಲಾ ಹೇಳಿದ್ದಾರೆ.
ಏನಿದು ಬಹು ಬ್ರ್ಯಾಂಡ್ ರಿಟೇಲ್ : ಪ್ರಸ್ತುತ ವಿದೇಶಿ ಕಂಪನಿಗಳು ಮಳಿಗೆ ತೆರೆದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಆದರೆ, ಬಹುಬ್ರಾಂಡ್ ರಿಟೇಲ್ ಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಕಿರಾಣಿ ಅಂಗಡಿ ನಡೆಸುತ್ತಿರುವ ಸುಮಾರು 2.5 ಲಕ್ಷ ಜನರಿಗೆ ತೊಂದರೆ ಉಂಟಾಗಲಿದೆ. ಹೇರ್ ಪಿನ್ ನಿಂದ ಮೊಬೈಲ್ ಫೋನ್ ವರಗೆ ಎಲ್ಲಾ ವಸ್ತುಗಳನ್ನು ವಿದೇಶಿ ಕಂಪನಿಗಳು ಒಂದೇ ಮಳಿಗೆಯಲ್ಲಿ ಮಾರಾಟ ಮಾಡುತ್ತವೆ. ಇದರಿಂದ ಚಿಲ್ಲರೆ ಅಂಗಡಿ ನಂಬಿ ಬದುಕು ನಡೆಸುತ್ತಿರುವ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. (ಎಫ್ ಡಿಐ ನಿಂದ ಲಾಭವೋ? ನಷ್ಟವೋ?)












Click it and Unblock the Notifications