FASTag: ಫಾಸ್ಟ್ಯಾಗ್ ಬಳಕೆದಾರರೇ ಎಚ್ಚರ, ಈ ಕೆಲಸ ಮಾಡದಿದ್ರೆ ನಿಮ್ಮ ಖಾತೆಯಿಂದ ಹಣ ಕಡಿತ
ರಾಷ್ಟ್ರೀಯ ಹೆದ್ದಾರಿ ಬಳಕೆದಾರರಲ್ಲಿ ಫಾಸ್ಟ್ಯಾಗ್ (FASTag) ಇಂದು ಸಾಮಾನ್ಯವಾಗಿದೆ. ಆದರೆ, ಫಾಸ್ಟ್ಯಾಗ್ ಬಳಕೆಯಲ್ಲಿನ ತಾಂತ್ರಿಕ ದೋಷಗಳು ಮತ್ತು ತಪ್ಪಾಗಿ ಟೋಲ್ ಕಡಿತಗಳು ಕೂಡ ಹೆಚ್ಚಾಗಿ ಸಂಭವಿಸುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸುಮಾರು 18 ಲಕ್ಷ ಫಾಸ್ಟ್ಯಾಗ್ ಪ್ರಕರಣಗಳಲ್ಲಿ ತಪ್ಪಾಗಿ ಕಡಿತಗೊಂಡ ಟೋಲ್ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ಮರುಪಾವತಿ ಮಾಡಿದೆ.
ಎನ್‌ಹೆಚ್‌ಎಐ ಮಾಹಿತಿ ಪ್ರಕಾರ ಫಾಸ್ಟ್ಯಾಗ್ ವ್ಯವಹಾರಗಳಲ್ಲಿ ಹೆಚ್ಚುವರಿ ಟೋಲ್ ಹಣ ತಪ್ಪಾಗಿ ಕಡಿತಗೊಂಡ ಹಲವು ಪ್ರಕರಣಗಳು ಪತ್ತೆಯಾಗಿವೆ. ಈ ದೋಷಗಳು ಪರಿಶೀಲನೆ ಹಾಗೂ ಬಳಕೆದಾರರ ದೂರುಗಳ ಮೂಲಕ ಬೆಳಕಿಗೆ ಬಂದಿವೆ. ಆದರೆ, ಆತಂಕಕಾರಿ ವಿಷಯವೆಂದರೆ ಅನೇಕ ಪ್ರಯಾಣಿಕರು ತಮ್ಮ ಫಾಸ್ಟ್ಯಾಗ್ ವಾಲೆಟ್‌ನಿಂದ ಹೆಚ್ಚುವರಿ ಹಣ ಕಡಿತಗೊಂಡಿರುವುದನ್ನು ಬಹಳ ತಡವಾಗಿ ಅಥವಾ ಸಂಪೂರ್ಣವಾಗಿ ಗಮನಿಸದೇ ಇರುವ ಪ್ರಕರಣಗಳು ಕೂಡ ಇವೆ.

ಇಂತಹ ಸಂದರ್ಭಗಳಲ್ಲಿ ಫಾಸ್ಟ್ಯಾಗ್ ಪಾವತಿ ಅಲರ್ಟ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಎಸ್‌ಎಂಎಸ್ ಅಥವಾ ಮೊಬೈಲ್ ಆಪ್ ಮೂಲಕ ಬರುವ ರಿಯಲ್-ಟೈಮ್ ಅಲರ್ಟ್‌ಗಳು ಯಾವ ಟೋಲ್ ಪ್ಲಾಜಾದಲ್ಲಿ, ಯಾವ ಸಮಯದಲ್ಲಿ, ಎಷ್ಟು ಮೊತ್ತ ಕಡಿತಗೊಂಡಿದೆ ಎಂಬ ಸಂಪೂರ್ಣ ವಿವರ ನೀಡುತ್ತವೆ. ಈ ಮಾಹಿತಿ ತಕ್ಷಣ ಸಿಕ್ಕರೆ, ತಪ್ಪಾಗಿ ಹಣ ಕಡಿತವಾದರೆ ಕೂಡಲೇ ಸಂಬಂಧಿತ ಬ್ಯಾಂಕ್, ವಾಲೆಟ್ ಸಂಸ್ಥೆ ಅಥವಾ ಎನ್‌ಹೆಚ್‌ಎಐಗೆ ದೂರು ನೀಡಲು ಸಾಧ್ಯವಾಗುತ್ತದೆ.
ಟೋಲ್ ದೋಷಗಳು ಸಾಮಾನ್ಯವಾಗಿ ಹಲವು ಕಾರಣಗಳಿಂದ ಸಂಭವಿಸುತ್ತವೆ. ಲೇನ್ ಸಮಸ್ಯೆಗಳು, ತಾಂತ್ರಿಕ ದೋಷಗಳು, ಕೆಲವೊಮ್ಮೆ ಒಂದೇ ಟೋಲ್‌ನಲ್ಲಿ ಎರಡು ಬಾರಿ ಹಣ ಕಡಿತಗೊಳ್ಳುವ ಪ್ರಕರಣಗಳೂ ಕಂಡುಬರುತ್ತವೆ. ಕೆಲ ಸಂದರ್ಭಗಳಲ್ಲಿ ಕಾರುಗಳಿಗೆ ಲಾರಿ ಅಥವಾ ಬಸ್ ವರ್ಗದ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಇಂತಹ ದೋಷಗಳು ಸಾಬೀತಾದ ನಂತರ ಪ್ರಾಧಿಕಾರವೇ ಮರುಪಾವತಿ ಮಾಡುತ್ತದೆ. ಆದರೆ, ಇದಕ್ಕೆ ಬಳಕೆದಾರರು ಸಮಯಕ್ಕೆ ಸರಿಯಾಗಿ ದೂರು ದಾಖಲಿಸುವುದು ಬಹಳ ಮುಖ್ಯ ಎಂದು ಎಚ್ಚರಿಸಿದೆ.
FASTag ಅಲರ್ಟ್ ಸಕ್ರಿಯಗೊಳಿಸುವುದು ಹೇಗೆ?
ಫಾಸ್ಟ್ಯಾಗ್ ಪಾವತಿ ಅಲರ್ಟ್‌ಗಳನ್ನು ಸಕ್ರಿಯಗೊಳಿಸುವುದು ತುಂಬಾ ಸುಲಭ. ಬಹುತೇಕ ಎಲ್ಲ ಫಾಸ್ಟ್ಯಾಗ್ ನೀಡುವ ಬ್ಯಾಂಕ್‌ಗಳು ಮತ್ತು ಡಿಜಿಟಲ್ ವಾಲೆಟ್‌ಗಳು ಎಸ್‌ಎಂಎಸ್ ಹಾಗೂ ಆಪ್ ಆಧಾರಿತ ಅಲರ್ಟ್ ಸೌಲಭ್ಯ ಒದಗಿಸುತ್ತವೆ.ಅವುಗಳನ್ನು ಫಾಸ್ಟ್ಯಾಗ್ ನೀಡುವ ಸಂಸ್ಥೆಯ ಮೊಬೈಲ್ ಆಪ್‌ನಲ್ಲಿ ಗ್ರಾಹಕ ಸೇವಾ ಸಂಖ್ಯೆಗೆ ಸಂಪರ್ಕಿಸಿ, ನೆಟ್ ಬ್ಯಾಂಕಿಂಗ್ ಅಥವಾ ವಾಲೆಟ್ ಸೆಟ್ಟಿಂಗ್‌ಗಳ ಮೂಲಕವೂ ಸಕ್ರಿಯಗೊಳಿಸಬಹುದು. ಇದಕ್ಕಾಗಿ ನಿಮ್ಮ ಫಾಸ್ಟ್ಯಾಗ್ ಖಾತೆಗೆ ಸರಿಯಾದ ಮೊಬೈಲ್ ಸಂಖ್ಯೆ ನೋಂದಣಿಯಾಗಿರಬೇಕು.

ಪಾವತಿ ಅಲರ್ಟ್ ಇಲ್ಲದಿದ್ದರೆ ಸಣ್ಣ-ಸಣ್ಣ ತಪ್ಪು ಹಣ ಕಡಿತಗಳು ಕಾಲಕ್ರಮೇಣ ದೊಡ್ಡ ಮೊತ್ತವಾಗಿ ಪರಿವರ್ತನೆಯಾಗಬಹುದು. ಆದ್ದರಿಂದ ಹೆದ್ದಾರಿ ಪ್ರಯಾಣದ ನಂತರ ಫಾಸ್ಟ್ಯಾಗ್ ಸ್ಟೇಟ್‌ಮೆಂಟ್ ಪರಿಶೀಲಿಸುವುದು ಒಳ್ಳೆಯದು. ಯಾವುದೇ ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ, ಟೋಲ್ ಪ್ಲಾಜಾ ಹೆಸರು, ದಿನಾಂಕ ಮತ್ತು ಟ್ರಾನ್ಸಾಕ್ಷನ್ ಐಡಿ ಜೊತೆಗೆ ತಕ್ಷಣ ದೂರು ನೀಡಬೇಕು. ಈ ನಿಮ್ಮ ಹಣದ ಮೇಲೆ ನಿಗಾ ಇರಬೇಕಾದರೆ, ಈ ಫಾಸ್ಟ್ಯಾಗ್ ಪಾವತಿ ಅಲರ್ಟ್‌ಗಳನ್ನು ಈಗಲೇ ಸಕ್ರಿಯಗೊಳಿಸುವುದು ಅತ್ಯಂತ ಸುರಕ್ಷಿತ ಕ್ರಮ ಎಂದು ಸಲಹೆ ನೀಡಿದೆ.












Click it and Unblock the Notifications