ಯುಕೆಯ ರೂಪಾಂತರಿತ ಕೊರೊನಾ ವೈರಸ್ ಭಾರತದಲ್ಲಿ ಪತ್ತೆಯಾಗಿಲ್ಲ: ನೀತಿ ಆಯೋಗ
ನವದೆಹಲಿ, ಡಿಸೆಂಬರ್ 22: ಬ್ರಿಟನ್‌ನಲ್ಲಿ ಕಂಡುಬಂದಿರುವ ರೂಪಾಂತರಿತ ಕೊರೊನಾ ವೈರಸ್ ಭಾರತದಲ್ಲಿ ಇದುವರೆಗೂ ಪತ್ತೆಯಾಗಿಲ್ಲ ಎಂದು ನೀತಿ ಆಯೋಗ ಸ್ಪಷ್ಟಪಡಿಸಿದೆ.
ಈ ಕೊರೊನಾ ವೈರಸ್ ಯುಕೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಆದರೆ ಭಾರತದಲ್ಲಿ ಇಲ್ಲಿಯವರೆಗೂ ಅಂತಹ ಪ್ರಕರಣ ಪತ್ತೆಯಾಗಿಲ್ಲ.
ಇಂತಹ ಹೊಸ ಪ್ರಬೇಧದ ಕೊರೊನಾ ಸೋಂಕು ಬಹುಬೇಗ ಮತ್ತೊಬ್ಬರಿಗೆ ಹರಡುತ್ತದೆ. ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ಅವರ ಪ್ರಕಾರ ಭಾರತದಲ್ಲಿ ಪ್ರಕರಣ ಕಂಡುಬಂದಿಲ್ಲ. ರೂಪಾಂತರಿತ ಕೊರೊನಾ ಸೋಂಕಿನ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ..

ಡಿಸೆಂಬರ್ 31ರವರೆಗೆ ವಿಮಾನಗಳ ಹಾರಾಟ ರದ್ದು
ಕೊರೊನಾ ಲಾಕ್ ಡೌನ್ ನಂತರ ವಿಮಾನ ಹಾರಾಟ ಆರಂಭವಾಗಿದೆ. ಆದರಿದೀಗ ಪುನಃ ಲಂಡನ್‍ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ಡಿಸೆಂಬರ್ 22ರಿಂದ 31ರ ವರೆಗೆ ರದ್ದು ಮಾಡಬೇಕೆಂದು ಆದೇಶ ಹೊರಡಿಸಿದೆ. ಅಲ್ಲದೇ ಅಮೆರಿಕದಿಂದ ಭಾರತಕ್ಕೆ ಬರುವ ವಿಮಾನಗಳ ಹಾರಾಟವನ್ನು ಕೂಡ ಡಿಸೆಂಬರ್ 22 ರಿಂದ 31ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಹಾಗೂ ಅಮೇರಿಕದಲ್ಲಿ ಕೊರೊನಾ ವೈರಸ್ನ ಹೊಸ ರೂಪವನ್ನು ಕಂಡು ಹಿಡಿಯಲಾಗಿದೆ, ಆದ್ದರಿಂದ ಆತಂಕಪಡುವ ಅಗತ್ಯವಿಲ್ಲವೆಂದು ಹರ್ಷವರ್ಧನ್ ತಿಳಿಸಿದ್ದಾರೆ.
ಇದರಿಂದ ಅಮೇರಿಕದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್‍ನ ಕುರಿತು ಕೇಂದ್ರ ಸರ್ಕಾರವು ಸಹ ಕಟ್ಟೆಚ್ಚರ ವಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ತಿಳಿಸಿದ್ದಾರೆ.

ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ
ಡಿಸೆಂಬರ್ 21 ರಿಂದ 23ರ ನಡುವೆ UKಯಿಂದ ಬಂದ ಎಲ್ಲಾ ಪ್ರಯಾಣಿಕರು RT-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಒಂದು ವೇಳೆ ಪರೀಕ್ಷಾ ಫಲಿತಾಂಶವು ಪಾಸಿಟಿವ್ ಎಂದಾದರೇ, ವ್ಯಕ್ತಿಯು ಸ್ಪೈಕ್ ಜೀನ್-ಆಧಾರಿತ RT-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ಇತಿಹಾಸದ ಬಗ್ಗೆ ಘೋಷಿಸಬೇಕು. RT-ಪಿಸಿಆರ್ ಪರೀಕ್ಷೆಯನ್ನು ಬಳಸಿಕೊಂಡು COVID-19 ಗಾಗಿ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲು ಸ್ವಯಂ ಘೋಷಣಾ ನಮೂನೆಯನ್ನು ಭರ್ತಿ ಮಾಡಬೇಕು. ಕೊರೊನಾ ಪಾಸಿಟಿವ್ ಪರೀಕ್ಷೆ ಮಾಡುವ ಪ್ರಯಾಣಿಕರನ್ನು ಆಯಾ ರಾಜ್ಯ ಪ್ರಾಧಿಕಾರಗಳು ಸಾಂಸ್ಥಿಕ ಪ್ರತ್ಯೇಕತೆಯ ಸೌಲಭ್ಯಕ್ಕೆ ಕಳುಹಿಸಬೇಕು.

ಕೊರೊನಾ ರೂಪಾಂತರ ಬೇರೆ ದೇಶಗಳಲ್ಲೂ ಇರಬಹುದು ಎಂದ WHO
ಕೊರೊನಾ ವೈರಸ್ನ ಹೊಸ ರೂಪಾಂತರ ತಳಿ ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ವೈರಸ್‌ನ ಉಳಿದ ಸ್ವರೂಪಗಳನ್ನು ವೇಗವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇದು ಅನೇಕ ದೇಶಗಳಲ್ಲಿ ಈಗಾಗಲೇ ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ರೂಪಾಂತರಿ ವೈರಸ್ ಶೇ 70ರಷ್ಟು ಹೆಚ್ಚು ಸೋಂಕು ಹರಡಬಲ್ಲದು ಎಂದು ಆರಂಭಿಕ ದತ್ತಾಂಶಗಳು ಹೇಳುತ್ತವೆ ಮತ್ತು ಹಾಲಿ ಇರುವ ಕೋವಿಡ್ ಲಸಿಕೆಗಳಲ್ಲಿ ಒಂದರ ಪ್ರತಿರಕ್ಷಣಾ ವ್ಯವಸ್ಥೆಯ ಸ್ಪಂದನೆ ಮೇಲೆ ಪರಿಣಾಮ ಬೀರಬಹುದು ಎಂಬ ಹೇಳಿಕೆಗಳ ಬಗ್ಗೆ ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನಿಂದ ಭಾರತಕ್ಕೆ ಬಂದ 138 ಮಂದಿ
ಬ್ರಿಟನ್ ನಲ್ಲಿ ಪತ್ತೆಯಾಗಿರುವ, ಅತಿ ವೇಗವಾಗಿ ಹರಡಬಲ್ಲ ಕೊರೊನಾ ವೈರಸ್ SARS-CoV-2 ರೂಪಾಂತರ ಆತಂಕಕ್ಕೆ ಕಾರಣವಾಗಿದ್ದು, ಸದ್ಯಕ್ಕೆ ಬ್ರಿಟನ್ ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕಳೆದ ಹದಿನೈದು ದಿನಗಳಲ್ಲಿ ಬ್ರಿಟನ್ ನಿಂದ ಕರ್ನಾಟಕಕ್ಕೆ ಸುಮಾರು 138 ಮಂದಿ ಬಂದಿದ್ದು, ಇವರನ್ನು ಪತ್ತೆ ಹಚ್ಚುವುದು ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ. ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೇ, ನಿಲ್ದಾಣದಲ್ಲೂ ಪರೀಕ್ಷೆಗೆ ಒಳಗಾಗದೆ ಇವರು ಬಂದಿದ್ದು, ಸದ್ಯಕ್ಕೆ ಈ ಎಲ್ಲರನ್ನೂ ಪತ್ತೆ ಹಚ್ಚುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. 138 ಮಂದಿ ಬೆಂಗಳೂರಿನ ಹಲವೆಡೆಗಳಲ್ಲಿದ್ದಾರೆ












Click it and Unblock the Notifications