Explainer: ಪರಿಸರ ರಕ್ಷಿಸುವ ಎಥೆನಾನ್ ಪೆಟ್ರೋಲಿಗ್ಯಾಕೆ ಇಷ್ಟು ವಿರೋಧ?
ಹೊಸದಿಲ್ಲಿ: ಇಂಧನ ಸ್ವಾವಲಂಬನೆ ಹೆಚ್ಚಿಸುವ ದೃಷ್ಟಿಯಿಂದ ಆತ್ಮ ನಿರ್ಭರ ಭಾರತದ ಭಾಗವಾಗಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಸರಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಮುಂದಾಗಿದೆ. ಅನ್ಯ ದೇಶಗಳ ಮೇಲೆ ಇಂಧನ ಅವಲಂಬನೆ ಕಡಿಮೆ ಮಾಡುವುದಲ್ಲದೇ, ಪರಿಸರ ಸಂರಕ್ಷಣಾ ದೃಷ್ಟಿಯಿಂದಲೂ ಇದು ಸಾಕಷ್ಟು ನೆರವಾಗಲಿದ್ದು, ಇಂಧನ ಸ್ವಾವಲಂಬನೆ ಒಂದೇ ಅಲ್ಲ, ರೈತರ ಆದಾಯ ಹೆಚ್ಚಳಕ್ಕೂ ಇದ ಸಹಕಾರಿಯಾಗಲಿದೆ. ಕೃಷಿ ತ್ಯಾಜ್ಯದ ಬಳಕೆ ಹೆಚ್ಚುವುದರಿಂದ ಕೃಷಿಕರಿಗೆ ತ್ಯಾಜ್ಯದಿಂದಲೂ ಹಣ ಸಂಪಾದಿಸುವ ದಾರಿ ತೆರೆದುಕೊಳ್ಳಲಿದೆ. ಆದರೂ ಜನರು ಈ ಪೆಟ್ರೋಲ್ ಬಳಕೆ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
ಭಾರತದಲ್ಲಿ ಹೊಸತನ್ನು ಪರಚಯಿಸಲು ಮುಂದಾದಾಗ ಇಂಥದ್ದೊಂದು ವಿರೋಧ ವ್ಯಕ್ತವಾಗುವುದು ಸಹಜ. ಅಮೆರಿಕ, ಕೆನಡಾ ಸೇರಿ ಹಲವು ಮುಂದುವರಿದ ದೇಶಗಳು ಈಗಾಗಲೇ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುತ್ತಿದ್ದು, ಅಲ್ಲಿ ವ್ಯಕ್ತವಾಗದ ವಿರೋಧ ನಮ್ಮ ದೇಶದಲ್ಲಿ ಕೇಳಿ ಬರುತ್ತಿದೆ. ವಾಹನಗಳ ಕಾರ್ಯ ಕ್ಷಮತೆ ಕಡಿಮೆ ಆಗುವ ಜೊತೆಗೆ, ಎಂಜಿನ್ ಅನ್ನು ಹಾಳು ಮಾಡಲಿದೆ ಎಂಬ ಆತಂಕ ವಾಹನ ಸವಾರರನ್ನು ಕಾಡುತ್ತಿದೆ.

ಆತಂಕಕ್ಕೆ ಮೂಲ ಕಾರಣ:
ಆಟಾರ್ನಿ ಜನರಲ್ ಆರ್.ವೆಂಕಟರಮಣಿ ಭಾರತದಲ್ಲಿ ಇ20 ಇಂಧನವನ್ನು 'ಪ್ರಾಯೋಗಿಕವಾಗಿ' ಬಳಸಲಾಗುತ್ತಿದ್ದು, ಮುಂದಿನ ವರ್ಷ ಹೊತ್ತಿಗೆ ಅಗತ್ಯ ಫಲಿತಾಂಶ ಹೊರಹೊಮ್ಮಬಹುದು ಎಂದು ಕೋರ್ಟಿಗೆ ಹೇಳಿಕೆ ನೀಡಿದ ವಾರದ ನಂತರ ಇದೀಗ ಈ ಇಂಧನ ಬಳಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಇಂಥ ಹೇಳಿಕೆ ನೀಡಿಲ್ಲವೆಂದು ಸರಕಾರ ಸ್ಪಷ್ಟಪಡಿಸಿದ್ದು, ಕೋರ್ಟಿನಿಲ್ಲಿ ಆಟಾರ್ನಿ ಜನರ್ ಮಾಡುತ್ತಿರುವ ವಾದದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪರ, ವಿರೋಧ ಚರ್ಚೆಗಳು ಹುಟ್ಟಿಕೊಳ್ಳುತ್ತಿದೆ. ಒಟ್ಟಿನಲ್ಲಿ ಪ್ರಾಯೋಗಿಕ ಎಂಬ ಪದ ಬಳಕೆಯೇ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತುವಂತೆ ಮಾಡಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ವೆಂಕಟರಮಣಿ ಅವರು, ಪ್ರಾಯೋಗಿಕ ಎಂಬ ಪದವನ್ನು ಪೆಟ್ರೋಲ್ ಪೂರೈಕೆಗೆ ಸಂಬಂಧಿಸಿದಂತೆ ಬಳಸಿದ್ದೇ ಹೊರತು, ಎಥೆನಾಲ್ ಪಾಲಿಸಿಗೆ ಸಂಬಂಧಿಸಿದಂತೆ ಹೇಳಿದ್ದಲ್ಲ ಎಂದಿದ್ದಾರೆ.
ಕೇಂದ್ರ ಸಚಿವರ ಸ್ಪಷ್ಟನೆ ಏನು?
ಈ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ಮಾತನಾಡಿ, ಎಥೆನಾಲ್ ಪೆಟ್ರೋಲನ್ನು ರೇಸ್ ಕಾರಿಗೂ ಸಹ ಬಳಸಲಾಗುತ್ತಿದ್ದು, ಕಾರ್ಯಕ್ಷಮತೆ ಬಗ್ಗೆ ಯಾವುದೇ ಗೊಂದಲವಿಲ್ಲ. ಮೈಲೇಜ್ ಸ್ವಲ್ಪ ಕಡಿಮೆ ಆಗಬಹುದೆಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಶ್ವದ ದ್ವಿ ಚಕ್ರ ವಾಹನದ 2ನೇ ಅತೀ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಇಂಥದ್ದೊಂದು ವಿವಾದ ಸೃಷ್ಟಿಯಾಗಿದ್ದು, ದೇಶದ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತೊಡಕಾಗಲಿದೆ.
ವಿಜ್ಞಾನಿಗಳು ಹೇಳುವುದೇನು?
ಈಗಾಗಲೇ ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ವಾಹನಗಳಿಗೆ ಸ್ವಲ್ಪ ಮಟ್ಟಿಗೆ ತೊಡಕಾದರೂ, ಅದೇ ಕಂಟಿನ್ಯೂ ಆಗುವುದಿಲ್ಲ. ಎಂಜಿನ್ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯೂ ಇಲ್ಲ. ಅಷ್ಟೇ ಇಲ್ಲದೇ ಈಗ ತಯಾರಾಗುತ್ತಿರುವ ಕಾರುಗಳನ್ನು ಇ20 ಇಂಧನ ಬಳಕೆಗೆ ಸೂಕ್ತವಾಗಿಯೇ ತಯಾರಿಸಲಾಗುತ್ತಿದೆ, ಮೈಲೇಜ್ ಹಾಗೂ ಕಾರ್ಯ ಕ್ಷಮತೆ ಸಹ ಹೆಚ್ಚಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ, ಆಗಾಗ ವಾಹನವನ್ನು ತಾಪಾಸಣೆಗೊಳಪಡಿಸುವುದು ಒಳ್ಳೇಯ ಅಭ್ಯಾಸ ಎನ್ನುವುದು ತಜ್ಞರ ಸಲಹೆ.
ಯಾವ ದೇಶದಲ್ಲಿ ಇ-ಪೆಟ್ರೋಲ್ ಈಗಾಗಲೇ ಬಳಕೆಯಲ್ಲಿದೆ?
ಅಮೆರಿಕ: ಈ ದೇಶದೆಲ್ಲೆಡೆ ಪ್ರಮಾಣಿತ ಮಿಶ್ರಣವು E10 (10% ಎಥೆನಾಲ್) ಬಳಸುತ್ದಿದ್ದು, E15 ವಿಸ್ತರಣೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಾಹನಗಳಳ್ಲಿ ಅನೇಕವು E85 (85% ಎಥೆನಾಲ್) ವರೆಗೆ ಚಲಿಸುವ ಸಾಮರ್ಥ್ಯ ಹೊಂದಿವೆ.
ಬ್ರೆಜಿಲ್: ಇಂಥದ್ದೊಂದು ಪರಿಸರ ಸ್ನೇಹಿ ಇಂಧನ ಬಳಸುವಲ್ಲಿ ಬ್ರೆಜಿಲ್ ಮುಂಚೂಣಿಯಲ್ಲಿದ್ದು, E27 ಪ್ರಮಾಣಿತ ಮಿಶ್ರಣವನ್ನು (27% ಎಥೆನಾಲ್) ಕಡ್ಡಾಯಗೊಳಿಸಿದೆ. 100% ಎಥೆನಾಲ್‌ವರೆಗೆ ಬಳಸಬಲ್ಲ ಫ್ಲೆಕ್ಸ್-ಫ್ಯುಯಲ್ ವಾಹನಗಳೂ ಈ ದೇಶದಲ್ಲಿವೆ.
ಭಾರತ: ತನ್ನ ರಾಷ್ಟ್ರೀಯ ಜೈವಿಕ ಇಂಧನ ಬಳಕೆಯನ್ನು ವಿಸ್ತರಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಇತ್ತೀಚೆಗೆ ದೇಶಾದ್ಯಂತ E20 ಪ್ರಮಾಣಿತ ಮಿಶ್ರಣವನ್ನು ಬಳಸುತ್ತಿದೆ .
ಪರಾಗ್ವೆ: E24 ಮತ್ತು E30 ನಡುವಿನ ಮಿಶ್ರಣಗಳನ್ನು ಕಡ್ಡಾಯಗೊಳಿಸುತ್ತದೆ.
ಥೈಲ್ಯಾಂಡ್: ಸಿಹಿಗೆಣಸು (ಕ್ಯಾಸಾವಾ) ಮತ್ತು ಕಬ್ಬಿನ ತ್ಯಾಜ್ಯದಿಂದ ಬಳಸುವ E10, E20, ಮತ್ತು E85 ಮಿಶ್ರಣಗಳನ್ನು ಬಳಸುತ್ತದೆ.
ಯುರೋಪಿಯನ್ ಒಕ್ಕೂಟ: ಬಹುತೇಕ ರಾಷ್ಟ್ರಗಳು (ಫ್ರಾನ್ಸ್ ಮತ್ತು ಜರ್ಮನಿ ಸೇರಿ) ಗೋಧಿ ಮತ್ತು ಸಕ್ಕರೆ ಬೀಟ್‌ನಿಂದ ಉತ್ಪಾದಿಸಲಾದ E10 ವರೆಗಿನ ಮಿಶ್ರಣಗಳನ್ನು ಕಡ್ಡಾಯಗೊಳಿಸುತ್ತವೆ.
ಕೆನಡಾ: ಸಾಮಾನ್ಯವಾಗಿ E10 ರಿಂದ E15 ಮಿಶ್ರಣಗಳನ್ನು ಕಡ್ಡಾಯಗೊಳಿಸುತ್ತದೆ.
ಏನು ಮಾಡಿದರೆ ಒಳ್ಳೇದು?
-ವಾಹನವನ್ನು ಸುದೀರ್ಘ ಕಾಲದವರೆಗೂ ನಿಲ್ಲಿಸಬಾರದು.
-ಕಂಪನಿ ಶಿಫಾರಸು ಮಾಡಿದ ಇಂಧನವನ್ನೇ ಬಳಸಿ.
- ಫ್ಯುಯೆಲ್ ಫಿಲ್ಟರ್ ಹಾಗೂ ಪಂಪ್‌ಗಳನ್ನು ಸಮಯಕ್ಕೆ ಸರಿಯಾಗಿ ಬಳಸಿ.
- ಹಳೆಯ ವಾಹನಗಳ ರಬ್ಬರ್ ಹೋಸ್ ಪೈಪ್ ಹಾಗೂ ಸೀಲ್‌ಗಳನ್ನು ಕಾಲಕಾಲಕ್ಕೆ ಬದಲಾಯಿಸಿದರೆ ಒಳ್ಳೇದು.
- ನಿಯಮಿತ ನಿರ್ವಹಣೆಯನ್ನು ಅಧಿಕೃತ ಸರ್ವಿಸ್ ಡೀಲರ್ಸ್ ಹತ್ತಿರವೇ ಮಾಡಿಸುವುದು ಒಳ್ಳೇದು.
- ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಲವು ಊಹಾಪೋಹಗಳು ಹುಟ್ಟುತ್ತಿದ್ದು, ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
ಒಟ್ಟಿನಲ್ಲಿ ಎಥೆನಾಲ್‌ನಲ್ಲಿ ಆಮ್ಲಜನಕ ಹೆಚ್ಚಿದ್ದು, ಇಂಧನ ಸಮರ್ಪಕವಾಗಿ ದಹಿಸುತ್ತದೆ. ಹೊಸ ವಾಹನಗಳಲ್ಲಿ ಎಂಜಿನ್ ಕಾರ್ಯಕ್ಷಮತೆ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಆಟೋಮೊಬೈಲ್ ಇಂಡಸ್ಟ್ರಿ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.













Click it and Unblock the Notifications