EPFO: ಇಪಿಎಫ್‌ಒ ಮೆಸೇಜ್ ಬಂದಿದೆಯೇ? : ಯಾಕೆ.. ಏನಿದು ಹೊಸ ಸಮೀಕ್ಷೆ?
ನವದೆಹಲಿ, ಜನವರಿ 31: ಈ ವಾರದಲ್ಲಿ ಹಲವು ಮಂದಿ ಉದ್ಯೋಗಿಗಳಿಗೆ 'ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ' (ಇಪಿಎಫ್‌ಒ) ವತಿಯಿಂದ ಮೆಸೇಜ್ ಒಂದು ಬಂದಿದೆ. ಇದು ಹಲವರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಿಎಫ್ ಖಾತೆ ಇರುವ ಉದ್ಯೋಗಿಗಳಿಗೆ ಈ ಮೆಸೇಜ್ ಕಳುಹಿಸಲಾಗಿದ್ದು, ಸಮೀಕ್ಷೆಯೊಂದರ ಲಿಂಕ್ ಇದರಲ್ಲಿ ಹಂಚಿಕೊಳ್ಳಲಾಗಿದೆ.
ಈ ಮೆಸೇಜ್‌ನಲ್ಲಿ ಬಂದಿರುವ ಸಮೀಕ್ಷೆಯ ಲಿಂಕ್ ಕ್ಲಿಕ್ ಮಾಡಿದರೆ, ಫಾರಂ ಒಂದು ಓಪನ್ ಆಗುತ್ತದೆ. ಇದನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ಫಾರ್ಮ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ಬಗ್ಗೆ ಹಲವು ಪ್ರಶ್ನೆಗಳಿವೆ. ದೇಶಾದ್ಯಂತ ಕೆಲಸದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಈ ಮೂಲಕ ವಿವರಗಳನ್ನು ಪಡೆಯಲಾಗುತ್ತಿದೆ.

ಹೊಸ ಸಮೀಕ್ಷೆ ಆರಂಭಿಸಿದ ಇಪಿಎಫ್‌ಒ!
ಇಪಿಎಫ್‌ಒ "ಕೆಲಸದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು" ಎಂಬ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಕೆಲಸದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ನಿರ್ಣಯಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಯೋಜನೆಯಾಗಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
ಜನವರಿ 30 ರಂದು ದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ವಿಮೆನ್ ಇನ್ ವರ್ಕ್‌ಸ್ಪೇಸ್ ಫಾರ್ ವಿಕ್ಷಿತ್ ಭಾರತ್" ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಸಮೀಕ್ಷೆಯನ್ನು ಪ್ರಕಟಿಸಲಾಗಿದೆ. ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಭೂಪೇಂದರ್ ಯಾದವ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
EPFO ಸಮೀಕ್ಷೆಯಲ್ಲಿ ಏನೇನು ಪ್ರಶ್ನೆಗಳಿವೆ?
ಈ ಸಮೀಕ್ಷೆಯ ಭಾಗವಾಗಿ, ಇಪಿಎಫ್‌ಒ ತನ್ನ ಚಂದಾದಾರರಿಂದ ದೇಶಾದ್ಯಂತ ಕೆಲಸದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರಗಳನ್ನು ಪಡೆಯುತ್ತಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆಗಾಗಿ ಇರುವ ಸಮಿತಿಯ ಜೊತೆಗೆ ಕೆಲಸದ ಸಮಯ, ಸೌಲಭ್ಯ, ಸಾರಿಗೆಯ ವಿವರಗಳನ್ನು ಕೇಳಲಾಗಿದೆ.

ಫಾರ್ಮ್‌ನ ಮೊದಲ ಭಾಗದಲ್ಲಿ ಕೆಲಸ ಮಾಡುವ ಸಂಸ್ಥೆಯ ವಿವರಗಳನ್ನು ಪಡೆಯಲಾಗಿದೆ. ಸಂಸ್ಥೆಯ ಹೆಸರು, ವಿಳಾಸ, ರಾಜ್ಯ, ಜಿಲ್ಲೆ, ಪಿನ್‌ಕೋಡ್ ವಿವರಗಳನ್ನು ತುಂಬಿಸಲು ತಿಳಿಸಲಾಗಿದೆ. ಎರಡನೇ ಭಾಗದಲ್ಲಿ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆಗಾಗಿ ಆಂತರಿಕ ದೂರುಗಳ ಸಮಿತಿ (POSH) ಇದೆಯೇ ಎಂದು ಪ್ರಶ್ನಿಸಲಾಗಿದೆ.
ಇದರ ಜೊತೆಗೆ, ಶಿಶು ವಿಹಾರದ ಸೌಲಭ್ಯ, ಸಮಾನ ಕೆಲಸಕ್ಕೆ ಸಮಾನ ವೇತನ, ಮಹಿಳೆಯರಿಗೆ ಹೊಂದಿಕೊಳ್ಳುವ ಅಥವಾ ಫ್ಲೈಕ್ಸಿಬಲ್ ಕೆಲಸದ ಸಮಯ, ತಡವಾದ ಸಮಯದಲ್ಲಿ ಸಾರಿಗೆ ಸೌಲಭ್ಯಗಳು ಮತ್ತು ಸಮೀಕ್ಷೆಯಲ್ಲಿ ಭಾಗಿಯಾದವರ ಜೆಂಡರ್ ಬಗ್ಗೆಯೂ ಪ್ರಶ್ನೆ ಮಾಡಲಾಗಿದೆ.
ವರದಿಗಳ ಪ್ರಕಾರ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಏಜೆನ್ಸಿಗಳು ಮತ್ತು ಟ್ರೇಡ್ ಯೂನಿಯನ್‌ಗಳಿಂದ ದೇಶದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆಯ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ಸಮೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.
ಇನ್ನು, ನಿಮಗೆ EPFO ಮೆಸೇಜ್ ಬಂದಿಲ್ಲವಾದರೆ, ಸಮೀಕ್ಷೆಯಲ್ಲಿ ಭಾಗವಹಿಸಲು ಆಸಕ್ತಿ ನಿಮಗಿದ್ದರೆ ಅಧಿಕೃತ ವೆಬ್‌ಸೈಟ್ myscheme.gov.in ನಲ್ಲಿ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಆರ್ಥಿಕ ವರ್ಷ 2022-23 ರ ವಾರ್ಷಿಕ ವರದಿಯ ಪ್ರಕಾರ ಭಾರತದಲ್ಲಿ 21.23 ಲಕ್ಷ ಸಂಸ್ಥೆಗಳಲ್ಲಿ EPFO ಸುಮಾರು 30 ಕೋಟಿ ಸದಸ್ಯರನ್ನು ಹೊಂದಿದೆ.












Click it and Unblock the Notifications