EPFO: ಈ ವರ್ಷ ಶೇಕಡಾ 4.62 ರಷ್ಟು ಉದ್ಯೋಗವಕಾಶ ಹೆಚ್ಚಳ: ನನಸಾಗುತ್ತೇ ಮೋದಿ ಕನಸು?
ಬೆಂಗಳೂರು, ಫೆಬ್ರವರಿ 21: ಭಾರತದಲ್ಲಿ ಪ್ರಧಾನಿ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಈ ವಿಷಯ ಆಗಾಗ ಮುನ್ನೆಲೆ ಬರುತ್ತಿರುತ್ತದೆ. ಇದೀಗ ಇದಕ್ಕೆ ಪೂರಕವಾಗಿ ದೇಶದಲ್ಲಿ ಉದ್ಯೋಗವಕಾಶ ಹೆಚ್ಚಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಭಾರತದಂತ ಅಭಿವೃದ್ದೀ ಹೊಂದಿರುವ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆ ಆಗಿದೆ ಎಂಬ ಮಾಹಿತಿಯನ್ನು ಸರ್ಕಾರಿ ಸಂಸ್ಥೆಯೊಂದರ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹಾಗಿದರೆ ಆ ಸಂಸ್ಥೆ ಯಾವುದು ಎಂಬುದನ್ನು ಇಲ್ಲಿ ತಿಳಿಯೋಣ.

ದೇಶದಲ್ಲಿ ಉದ್ಯೋಗಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮಂಗಳವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಬೆಳಕಿಗೆ ಬಂದಿವೆ. ಅಂಕಿ ಅಂಶದ ಪ್ರಕಾರ, ಡಿಸೆಂಬರ್ 2023 ರಲ್ಲಿ 15.62 ಲಕ್ಷ ಸದಸ್ಯರು EPFOಗೆ ಸೇರಿದ್ದಾರೆ. ಇದು ಕಳೆದ 3 ತಿಂಗಳಲ್ಲೇ ಗರಿಷ್ಠ ಸಂಖ್ಯೆ ಆಗಿದೆ. ಇದರಿಂದ ದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ.
ಶೇಕಡಾ 4.62 ರಷ್ಟು ಹೆಚ್ಚಳ
ಡಿಸೆಂಬರ್ 2022ಕ್ಕೆ ಹೋಲಿಸಿದರೆ ಈ ಅಂಕಿ ಅಂಶದಲ್ಲಿ ಶೇಕಡಾ 4.62 ರಷ್ಟು ಹೆಚ್ಚಳವಾಗಿದೆ. ಅಂದರೆ ಉದ್ಯೋಗ ಹೊಂದುತ್ತಿರುವವ ಸಂಖ್ಯೆ ಏರಿಕೆ ಆದರೆ, ವಿರುದ್ಧವಾಗಿ ನಿರುದ್ಯೋಗಿಗಳ ಸಮಸ್ಯೆ ಕಡಿಮೆ ಆಗುತ್ತಿದೆ. ಕಾರ್ಮಿಕ ಸಚಿವಾಲಯದ ಪ್ರಕಾರ, ಡಿಸೆಂಬರ್ 2023 ರಲ್ಲಿ 8.41 ಲಕ್ಷ ಹೊಸ ಸದಸ್ಯರು EPFOಗೆ ಸೇರಿದ್ದಾರೆ. ನವೆಂಬರ್ 2023 ಕ್ಕೆ ಹೋಲಿಸಿದರೆ ಈ ಅಂಕಿ ಅಂಶವು ಶೇಕಡಾ 11.97 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.
ಯಾವ ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ?
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ಹರಿಯಾಣದಿಂದ ಗರಿಷ್ಠ 58.33 ಪ್ರತಿಶತ ಸದಸ್ಯರು ಉದ್ಯೋಗಿಗಳಾಗಿದ್ದಾರೆ. ಅಂದರೆ ಇಪಿಎಫ್‌ಒ ಸದಸ್ಯರಾಗಿದ್ದಾರೆ. ಕಳೆದ ವರ್ಷ ನವೆಂಬರ್ 2023ಕ್ಕೆ ಹೋಲಿಸಿದರೆ ಇಪಿಎಫ್‌ಒಗೆ ಮರುಸೇರ್ಪಡೆಗೊಳ್ಳುವವರ ಸಂಖ್ಯೆಯು ಶೇಕಡಾ 12.61 ರಷ್ಟು ಏರಿಕೆ ಆಗಿದೆ.
EPFO ಬಂದ ಗರಿಷ್ಠ ಸದಸ್ಯರು ಕಬ್ಬಿಣ ಮತ್ತು ಉಕ್ಕು, ಕಟ್ಟಡ ಮತ್ತು ನಿರ್ಮಾಣ, ಮಾನವಶಕ್ತಿ ಪೂರೈಕೆ, ಭದ್ರತಾ ಸೇವೆಗಳು ಮತ್ತು ಸಾಮಾನ್ಯ ವಿಮಾ ಕ್ಷೇತ್ರಗಳಲ್ಲಿ ತೊಡಗಿದವರೇ ಆಗಿದ್ದಾರೆ ಎಂಬುದು ಮತ್ತೊಂದು ವಿಶೇಷ ಎನ್ನಬಹುದು.

ಅನೇಕ ಕಂಪನಿಗಳು ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಮುಂದೆ ಬರುತ್ತಿವೆ. ಡೇಟಾ ಪ್ರಕಾರ, ಡಿಸೆಂಬರ್ 2023 ರಲ್ಲಿ, EPFO ಯೋಜನೆಗಳಿಂದ ಹೊರಗೆ ಹೋಗಿದ್ದ ಸುಮಾರು 12.02 ಲಕ್ಷ ಸದಸ್ಯರು ಹಿಂತಿರುಗಿದ್ದಾರೆ. ಕೆಲಸ ಬಿಟ್ಟ ನಂತರ ಬೇರೆ ಕಡೆ ಕೆಲಸಕ್ಕೆ ಸೇರುವುದರಿಂದ ಈ ರೀತಿ ಏರಿಕೆ ಆಗುತ್ತದೆ.
EPFO ವೇತನದಾರರ ಮಾಹಿತಿಯ ಪ್ರಕಾರ, ಈ ಅವಧಿಯಲ್ಲಿ ಸೇರಿಸಲಾದ ಒಟ್ಟು ಹೊಸ ಸದಸ್ಯರಲ್ಲಿ 18 ರಿಂದ 25 ವಯೋಮಾನದವರ ಪಾಲು ಶೇಕಡಾ 57.18 ರಷ್ಟಿದೆ. ದೇಶದ ಸಂಘಟಿತ ವಲಯದಲ್ಲಿ ಕೆಲಸಕ್ಕೆ ಸೇರುವ ಹೆಚ್ಚಿನ ಸದಸ್ಯರು ಯುವಕರಿದ್ದಾರೆ ಎಂದು ಅಂಕಿ ಅಂಶಗಳು ತೋರಿಸುತ್ತವೆ.
ಪ್ರತಿ ತಿಂಗಳು EPFO ಸದಸ್ಯರ ಹೆಚ್ಚಳ
ಕಳೆದ ವರ್ಷ 2023 ರ ಡಿಸೆಂಬರ್ ನಲ್ಲಿ ಒಟ್ಟು 2.90 ಲಕ್ಷ ಮಹಿಳೆಯರು EPFO ಸದಸ್ಯರಾಗಿದ್ದಾರೆ. ನವೆಂಬರ್, 2023 ಕ್ಕೆ ಹೋಲಿಸಿದರೆ ಶೇಕಡಾ 3.54 ರಷ್ಟು ಹೆಚ್ಚಳವಾಗಿದೆ. ಅಂಕಿ ಅಂಶಗಳ ಪ್ರಕಾರ, ಪ್ರತಿ ತಿಂಗಳು ಹೊಸ ಸದಸ್ಯರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಉದ್ಯೋಗವನ್ನು ಪಡೆದಿದ್ದಾರೆ.
ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರ ಸೇರ್ಪಡೆ
ಹೊಸದಾಗಿ ಸೇರ್ಪಡೆಯಾದ 8.41 ಲಕ್ಷ ಸದಸ್ಯರಲ್ಲಿ ಸುಮಾರು 2.09 ಲಕ್ಷ ಮಹಿಳೆಯರು ಇಪಿಎಫ್‌ಒಗೆ ಸೇರಿದ್ದು ಇದೇ ಮೊದಲ ಬಾರಿ. ಸೆಪ್ಟೆಂಬರ್ 2017 ರಿಂದ ಇಪಿಎಫ್‌ಒ ಪ್ರತಿ ತಿಂಗಳು ಈ ಡೇಟಾವನ್ನು ಬಿಡುಗಡೆ ಮಾಡುತ್ತದೆ.ಇಪಿಎಫ್‌ಒ ಸದಸ್ಯರನ್ನು ಆಧಾರ್ ಮೂಲಕ ಸಾರ್ವತ್ರಿಕ ಖಾತೆ ಸಂಖ್ಯೆ (UAN) ಮೂಲಕ ಸಂಖ್ಯೆ ಮಾಡಲಾಗುತ್ತದೆ.












Click it and Unblock the Notifications