EPFO 3.0 ಜಾರಿಗೆ ಸಿದ್ಧ: PF ಹಣ ತೆಗೆಯುವ ಮುನ್ನ ತಿಳಿಯಬೇಕಾದ 5 ಪ್ರಮುಖ ನಿಯಮಗಳು
ಉದ್ಯೋಗಿಗಳ ಭವಿಷ್ಯ ನಿಧಿ (EPFO) ಖಾತೆದಾರರು ಇದೊಂದು ದೊಡ್ಡ ಸುದ್ದಿ ತಿಳಿಯಬೇಕು. ಶೀಘ್ರದಲ್ಲೇ ದೊಡ್ಡ ಬದಲಾವಣೆಯೊಂದು ಬರಲಿದೆ. ನಿಮ್ಮ PF ಹಣವನ್ನು UPI ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಪಡೆಯುವ ಅವಕಾಶ ಸಿಗಲಿದೆ. ಉದ್ಯೋಗದಾತರ ಅನುಮೋದನೆಗಾಗಿ ಕಾಯುವುದು, ಅರ್ಜಿ ಪ್ರಕ್ರಿಯೆಯ ವಿಳಂಬ, ದಾಖಲೆಗಳ ಪರಿಶೀಲನೆ ಇತ್ಯಾಾದಿ ಸಮಸ್ಯೆೆಗಳು ಬಹುತೇಕ ಕಡಿಮೆಯಾಗಲಿವೆ.
ಆದರೆ ಈ ಹೊಸ ವ್ಯವಸ್ಥೆ ಬಂದ ಬಳಿಕ ಅನೇಕ ಉದ್ಯೋಗಿಗಳಲ್ಲಿ ಒಂದು ಪ್ರಶ್ನೆ ಮೂಡಿದೆ: UPI ಮೂಲಕ PF ಹಣ ತೆಗೆದುಕೊಂಡರೆ ತೆರಿಗೆ ಕಟ್ಟಬೇಕಾಗುತ್ತದೆಯೇ? ಇದಕ್ಕೆೆ ಉತ್ತರ ತಿಳಿಯಲು ಮೊದಲು EPFO 3.0 ಬಗ್ಗೆ ತಿಳಿದುಕೊಳ್ಳೋಣ.

EPFO 3.0 ಎಂದರೇನು?
EPFO 3.0 ಎನ್ನುವುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಜಾರಿಗೆ ತರಲಿರುವ ಹೊಸ ಡಿಜಿಟಲ್ ವ್ಯವಸ್ಥೆ. ಈ ವ್ಯವಸ್ಥೆೆಯ ಮೂಲಕ PF ಹಣವನ್ನು ತ್ವರಿತವಾಗಿ ಹಿಂಪಡೆಯಬಹುದು. ಕಾಗದದ ದಾಖಲೆಗಳ ಅಗತ್ಯ ಕಡಿಮೆಯಾಗುತ್ತದೆ. ಯುಪಿಐ ಸೌಲಭ್ಯ ಮೂಲಕ ಹಣ ಪಡೆಯಬಹುದು. ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿರುತ್ತದೆ. ಹಣ ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಸರ್ಕಾರದ ಪ್ರಕಾರ, ಈ ವ್ಯವಸ್ಥೆೆಯ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.
ಯುಪಿಐ ಮೂಲಕ ಪಿಎಫ್ ಹಣ ಪಡೆಯುವುದು ಹೇಗೆ?
ಹೊಸ ವ್ಯವಸ್ಥೆಯಲ್ಲಿ ಸದಸ್ಯರು ಯುಪಿಐ ಆಪ್ ಬಳಸಬಹುದು. ಅದರಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಪಿಎಫ್ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು. ಇದರಿಂದ ಹಲವು ದಿನಗಳ ನಿರೀಕ್ಷೆ ತಪ್ಪಿ, ಕೆಲವೇ ನಿಮಿಷಗಳಲ್ಲಿ ಅಥವಾ ಅತಿ ಕಡಿಮೆ ಸಮಯದಲ್ಲಿ ಹಣ ಪಡೆಯುವ ಅವಕಾಶ ಸಿಗಬಹುದು.
ಪಿಎಫ್ ಖಾತೆಯಿಂದ ಎಷ್ಟು ಹಣ ತೆಗೆಯಬಹುದು? ಇಪಿಎಫ್ಒ 3.0 ಅಡಿಯಲ್ಲಿ ಸದಸ್ಯರು ತಮ್ಮ ಪಿಎಫ್ ಸಂಗ್ರಹದ 50% ರಿಂದ 75% ವರೆಗೆ ಹಣ ಹಿಂಪಡೆಯಲು ಅವಕಾಶ ಸಿಗುವ ಸಾಧ್ಯತೆಯಿದೆ.
ಪ್ರಮುಖ ನಿಯಮಗಳು
1. ಗರಿಷ್ಠ ಹಿಂಪಡೆಯುವ ಮಿತಿ: ಸಾಮಾನ್ಯವಾಗಿ ನಿಮ್ಮ ಒಟ್ಟು ಪಿಎಫ್ ಮೊತ್ತದ ಕನಿಷ್ಠ 50%, ಗರಿಷ್ಠ 75%ವರೆಗೆ ಹಿಂಪಡೆಯಬಹುದು.
2. 25% ಹಣ ಕಡ್ಡಾಯವಾಗಿ ಉಳಿಯಬೇಕು: ನಿಮ್ಮ ಪಿಎಫ್ ಖಾತೆಯಲ್ಲಿ ಕನಿಷ್ಠ 25% ಮೊತ್ತ ಕಡ್ಡಾಯವಾಗಿ ಉಳಿಯಬೇಕು. ಇದು ಭವಿಷ್ಯದ ಆರ್ಥಿಕ ಭದ್ರತೆಗಾಗಿ ಇಡಲಾಗಿರುವ ಸುರಕ್ಷತಾ ವ್ಯವಸ್ಥೆಯಾಗಿದೆ.
ಮಿತಿ ಹೆಚ್ಚಳ
ಇದುವರೆಗೆ ಇಪಿಎಫ್‌ಒ ಅರ್ಜಿಗಳ ಸ್ವಯಂ ಅನುಮೋದನಾ ಮಿತಿ ₹1 ಲಕ್ಷವಾಗಿತ್ತು. ಈಗ ಅದನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ, ಮದುವೆ, ಮನೆ ಖರೀದಿ, ಮನೆ ನಿರ್ಮಾಣ ಇತ್ಯಾದಿ ಅಗತ್ಯಗಳಿಗಾಗಿ ಪಿಎಫ್ ಹಣವನ್ನು ಬಹಳ ವೇಗವಾಗಿ ಪಡೆಯಬಹುದು. ಅನೇಕ ಸಂದರ್ಭಗಳಲ್ಲಿ ಮೂರು ದಿನಗಳೊಳಗೆ ಹಣ ಖಾತೆಗೆ ಬರಬಹುದು.
ಹಣ ಹಿಂಪಡೆದರೆ ತೆರಿಗೆ ಕಟ್ಟಬೇಕೆ?
ಇದು ಬಹಳ ಮುಖ್ಯವಾದ ಪ್ರಶ್ನೆ. ಒಳ್ಳೆಯ ಸುದ್ದಿ ಏನೆಂದರೆ ಇಪಿಎಫ್‌ಒ 3.0 ಬಂದರೂ ತೆರಿಗೆ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ನೀವು ನಿರಂತರವಾಗಿ 5 ವರ್ಷಗಳಿಗಿಂತ ಹೆಚ್ಚು ಕಾಲ ಉದ್ಯೋಗದಲ್ಲಿದ್ದು ಪಿಎಫ್ ಖಾತೆ ನಿರ್ವಹಿಸಿದ್ದರೆ ಹಿಂಪಡೆಯುವ ಮೊತ್ತ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ. ಅಂದರೆ ಆದಾಯ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. 5 ವರ್ಷ ಪೂರ್ಣಗೊಳ್ಳುವ ಮೊದಲು ಪಿಎಫ್ ಹಣ ಹಿಂಪಡೆದರೆ ತೆರಿಗೆ ನಿಯಮಗಳು ಅನ್ವಯವಾಗಬಹುದು.
ಟ್ಯಾಕ್ಸ್ ಯಾವಾಗ ಕಟ್ ಆಗುತ್ತದೆ?
₹50,000ಕ್ಕಿಂತ ಹೆಚ್ಚು ಮೊತ್ತವನ್ನು ಅಥವಾ 5 ವರ್ಷಗಳೊಳಗೆ ಹಿಂಪಡೆದರೆ ತೆರಿಗೆ ಅನ್ವಯವಾಗಬಹುದು.
ಯಾವ ಸಂದರ್ಭಗಳಲ್ಲಿ ತೆರಿಗೆ ವಿನಾಯಿತಿ?
ಕೆಲವು ವಿಶೇಷ ಸಂದರ್ಭಗಳಲ್ಲಿ 5 ವರ್ಷಗಳಿಗಿಂತ ಮುಂಚೆಯೇ ಪಿಎಫ್ ಹಣ ತೆಗೆದುಕೊಂಡರೂ ತೆರಿಗೆ ಅನ್ವಯವಾಗುವುದಿಲ್ಲ.
- ಆರೋಗ್ಯ ಸಮಸ್ಯೆ
- ಉದ್ಯೋಗಿ ಗಂಭೀರ ಅನಾರೋಗ್ಯಕ್ಕೆ ಒಳಗಾದರೆ.
- ಕಂಪನಿ ಮುಚ್ಚಿದರೆ
- ಉದ್ಯೋಗದಾತರ ಸಂಸ್ಥೆ ಅಥವಾ ವ್ಯವಹಾರ ಮುಚ್ಚಿದರೆ.
- ಉದ್ಯೋಗಿಯ ನಿಯಂತ್ರಣದ ಹೊರಗಿನ ಕಾರಣಗಳು
- ಉದ್ಯೋಗಿ ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿಗಳಿಂದ ಉದ್ಯೋಗ ಕಳೆದುಕೊಂಡರೆ.
- ಆದಾಯ ತೆರಿಗೆ ಮಿತಿಗಿಂತ ಕಡಿಮೆ ಆದಾಯ ಇದ್ದರೆ. ಪಿಎಫ್ ಹಣ ಸೇರಿಸಿ ಒಟ್ಟು ಆದಾಯ ಮೂಲ ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆ ಇದ್ದರೆ ತೆರಿಗೆ ಹೊರೆ ಇರುವುದಿಲ್ಲ.
₹2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆಗೆ ತೆರಿಗೆ ಇದೆ. 2021ರ ಏಪ್ರಿಲ್ 1ರಿಂದ ಜಾರಿಯಲ್ಲಿರುವ ನಿಯಮದ ಪ್ರಕಾರ ಒಬ್ಬ ಉದ್ಯೋಗಿಯ ವಾರ್ಷಿಕ ಪಿಎಫ್ ಕೊಡುಗೆ ₹2.5 ಲಕ್ಷ ಮೀರಿದರೆ, ಆ ಹೆಚ್ಚುವರಿ ಮೊತ್ತದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಅನ್ವಯವಾಗುತ್ತದೆ. ಈ ನಿಯಮ ಐದು ವರ್ಷಗಳ ಷರತ್ತಿಗೆ ಸಂಬಂಧಿಸಿಲ್ಲ. ಅಂದರೆ, ಮೂಲ ಪಿಎಫ್ ಮೊತ್ತ ತೆರಿಗೆ ಮುಕ್ತವಾಗಿರಬಹುದು. ಆದರೆ ₹2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆಯ ಮೇಲಿನ ಬಡ್ಡಿಗೆ ತೆರಿಗೆ ಬರಬಹುದು.
ಎನ್‌ಪಿಎಸ್‌ಗೆ ವರ್ಗಾವಣೆ ಮಾಡಿದರೆ?
ನಿಮ್ಮ ಸಂಪೂರ್ಣ ಪಿಎಫ್ ಮೊತ್ತವನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಗೆ ವರ್ಗಾಯಿಸಿದರೆ ಅದನ್ನು ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯಿತಿಯ ವರ್ಗಾವಣೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಯಾವುದೇ ಹೆಚ್ಚುವರಿ ತೆರಿಗೆ ಬಾಧ್ಯತೆ ಇರುವುದಿಲ್ಲ.
ಪಿಎಫ್ ಮೇಲೆ ಜನರ ವಿಶ್ವಾಾಸ ಏಕೆ ಹೆಚ್ಚಿದೆ?
ಪ್ರಸ್ತುತ ಪಿಎಫ್ ಸುಮಾರು ₹28 ಲಕ್ಷ ಕೋಟಿ ನಿಧಿಯನ್ನು ನಿರ್ವಹಿಸುತ್ತಿದೆ. ಕೋಟ್ಯಂತರ ಉದ್ಯೋಗಿಗಳು ಪಿಎಫ್ ಮೇಲೆ ವಿಶ್ವಾಾಸ ಇಡುವುದಕ್ಕೆೆ ಮುಖ್ಯ ಕಾರಣಗಳು- ಸುರಕ್ಷಿತ ಹೂಡಿಕೆ, ಸರ್ಕಾರದ ಬೆಂಬಲ, ಸ್ಥಿರ ಬಡ್ಡಿದರ, ಅನೇಕ ಸಂದರ್ಭಗಳಲ್ಲಿ ತೆರಿಗೆ ವಿನಾಯಿತಿ, ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಇವೆಲ್ಲ.
ಒಟ್ಟಾರೆಯಾಗಿ, ಇಪಿಎಫ್‌ಒ 3.0 ಜಾರಿಯಾದ ನಂತರ ಪಿಎಫ್ ಹಣ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಲಿದೆ. ಯುಪಿಐ ಮೂಲಕ ನೇರವಾಗಿ ಪಿಎಫ್ ಹಣ ಪಡೆಯುವ ವ್ಯವಸ್ಥೆ ಸದಸ್ಯರಿಗೆ ದೊಡ್ಡ ಅನುಕೂಲ ನೀಡಲಿದೆ. ಆದರೆ ಒಂದು ವಿಷಯ ಸ್ಪಷ್ಟ. ಹಣ ಪಡೆಯುವ ವಿಧಾನ ಬದಲಾಗುತ್ತಿದೆ ಹೊರತು, ತೆರಿಗೆ ನಿಯಮಗಳು ಬದಲಾಗುತ್ತಿಲ್ಲ.
ಹೀಗಾಗಿ ಪಿಎಫ್ ಹಣ ಹಿಂಪಡೆಯುವ ಮೊದಲು ನಿಮ್ಮ ಸೇವಾ ಅವಧಿ ಎಷ್ಟು? 5 ವರ್ಷ ಪೂರ್ಣಗೊಂಡಿದೆಯೇ? ₹50,000ಕ್ಕಿಂತ ಹೆಚ್ಚು ಹಣ ತೆಗೆಯುತ್ತಿದ್ದೀರಾ? ತೆರಿಗೆ ವಿನಾಯಿತಿಗೆ ಅರ್ಹರಾಗಿದ್ದೀರಾ? ಎಂಬ ಅಂಶಗಳನ್ನು ಪರಿಶೀಲಿಸಿದರೆ ಅನಗತ್ಯ ತೆರಿಗೆ ಹೊರೆ ತಪ್ಪಿಸಬಹುದು.
(ಬರಹ: ಭವಾನಿ ಭಟ್)














Click it and Unblock the Notifications