Exit Poll: ಹರಿಯಾಣ & ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಗೆ ಆಘಾತ?
ಬಿಜೆಪಿ ಬಲಿಷ್ಠವಾಗಿದೆ, ಬಿಜೆಪಿ ಪಕ್ಷವು ಎಂತಹ ಚುನಾವಣೆ ಇದ್ದರೂ ಯಾವುದೇ ಅಡೆತಡೆ ಇಲ್ಲದೆ ಗೆದ್ದು ಬೀಗಲಿದೆ, ಬಿಜೆಪಿ ಪಕ್ಷವನ್ನು ಸೋಲಿಸುವುದು ಕಷ್ಟ... ಹೀಗೆ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಪಕ್ಷದ ಬಗ್ಗೆ ಕೆಲವು ಕಠಿಣವಾದ ನಂಬಿಕೆಗಳು ಹುಟ್ಟಿಕೊಂಡಿದ್ದವು. ಈ ನಂಬಿಕೆಗಳು ಚುನಾವಣೆಯಲ್ಲಿ ಕೈಹಿಡಿದು ನಡೆಸುವ ನಿರೀಕ್ಷೆ ಕೂಡ ಇತ್ತು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ನಡೆದ ಘಟನೆಗಳು ಇದೀಗ ಬಿಜೆಪಿ ಪಕ್ಷವನ್ನು ಸೋಲಿನ ಸುಳಿಗೆ ತಳ್ಳಿದೆಯಾ? ಹರಿಯಾಣ & ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತಿದೆ?
ಬಿಜೆಪಿ ಚುನಾವಣಾ ಇತಿಹಾಸದಲ್ಲಿ 2014ರ ತನಕ ಒಂದು ಲೆಕ್ಕ, 2014 ನಂತರ ಶುರುವಾಗಿದ್ದೇ ಮತ್ತೊಂದು ಲೆಕ್ಕ. ಯಾಕಂದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ & ಜೊತೆಗಾರ ಪಕ್ಷಗಳು ದೊಡ್ಡ ಗೆಲುವು ಸಾಧಿಸಿದ್ದವು. ಆ ನಂತರ 2019ರ ಲೋಕಸಭೆ ಕೂಡ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ಹೀಗಿದ್ದಾಗಲೇ 2024ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಹೊಸ ಇತಿಹಾಸ ನಿರ್ಮಾಣ ಮಾಡುವುದು ಗ್ಯಾರಂಟಿ ಅಂತಾ ಹೇಳಲಾಗಿತ್ತು. ಆದರೆ ಫಲಿತಾಂಶ ಬಂದಾಗ ಖುದ್ದು ಬಿಜೆಪಿ ನಾಯಕರು ಕೂಡ ಆ ರಿಸಲ್ಟ್ ನೋಡಿ ಒಮ್ಮೆ ಯೋಚಿಸುವ ಪರಿಸ್ಥಿತಿ ಬಂದಿತ್ತು. ಹೀಗೆ 2024ರ ಲೋಕಸಭೆ ಚುನಾವಣೆ ಆಘಾತದ ಬೆನ್ನಲ್ಲೇ ಮತ್ತೊಂದು ಶಾಕ್ ಇದೀಗ ಬಿಜೆಪಿಗೆ ಸಿಗುತ್ತಿದೆಯಾ?

ಹರಿಯಾಣ & ಜಮ್ಮು ಮತ್ತು ಕಾಶ್ಮೀರ...
ಹೌದು, ಬಿಜೆಪಿ ಪಕ್ಷ ಹಾಕಿಕೊಂಡಿದ್ದ ಲೆಕ್ಕಾಚಾರಗಳು ಇದೀಗ ಉಲ್ಟಾ ಆಗಿ ಹೋಗಿವೆ. ಈ ಮೂಲಕ ದೊಡ್ಡ ಶಾಕ್ ಎದುರಾಗಿದೆ. ಹರಿಯಾಣ ರಾಜ್ಯದಲ್ಲಿ, ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್ ಬಾರಿಸಲು ಬಿಜೆಪಿ ಕನಸು ಕಟ್ಟಿಕೊಂಡಿತ್ತು. ಆದರೆ ಬಿಜೆಪಿಯ ಕನಸು ಈಗ ಸೋತು ಹೋಗಿದೆ ಎಂದು ಎಕ್ಸಿಟ್ ಪೋಲ್ ಫಲಿತಾಂಶಗಳು ಹೇಳುತ್ತಿವೆ.
ಈ ಹಿನ್ನೆಲೆಯಲ್ಲಿ 90 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 50 ರಿಂದ 60 ಸ್ಥಾನ ಗೆಲ್ಲಬಹುದು ಅಂತಾ ಹೇಳಲಾಗುತ್ತಿದೆ. 90 ಸ್ಥಾನಗಳ ಬಲ ಹೊಂದಿರುವ ಹರಿಯಾಣ ವಿಧಾನಸಭೆಯ ಅಧಿಕಾರಕ್ಕೆ 46 ಸ್ಥಾನಗಳನ್ನ ಯಾವುದೇ ಒಂದು ಪಕ್ಷ ಗೆಲ್ಲಬೇಕಿದೆ. ಆದರೆ ಇದೀಗ ಎಕ್ಸಿಟ್ ಪೋಲ್ ರಿಸಲ್ಟ್ ಮತದಾರರ ಒಲವು ಕಾಂಗ್ರೆಸ್ ಪರ ಇದೆ ಎನ್ನುತ್ತಿರುವುದು ಬಿಜೆಪಿಗೆ ಶಾಕ್ ಕೊಟ್ಟಂತಾಗಿದೆ.
ಬಿಜೆಪಿ ನಾಯಕರ ನಡೆ ಏನು?
ಹರಿಯಾಣ ವಿಧಾನಸಭೆ ಚುನಾವಣೆ ಮಾತ್ರವಲ್ಲ, ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಕೂಡ ಇದೀಗ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಂತೆ ಆಗಿದೆ. ಚುನಾವಣೋತ್ತರ ಫಲಿತಾಂಶ ಬಿಜೆಪಿ ಸೋಲಬಹುದು ಎನ್ನುತ್ತಿದ್ದು, ಮುಂದಿನ ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಕೂಡ ಈ ಬೆಳವಣಿಗೆ ಬಿಜೆಪಿಗೆ ಆಘಾತ ನೀಡುವ ಸಾಧ್ಯತೆ ಇದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಇದೀಗ ಬಿಜೆಪಿ ಪಕ್ಷಕ್ಕೆ ಹರಿಯಾಣ ಸೇರಿದಂತೆ ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಸೋಲಿನ ಶಾಕ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಇದು ಎಕ್ಸಿಟ್ ಪೋಲ್, ಇನ್ನೂ ಫಲಿತಾಂಶ ಬಂದಿಲ್ಲ ಅಂತಿದ್ದಾರೆ ಬಿಜೆಪಿಯ ಕೆಲ ನಾಯಕರು. ಹೀಗಾಗಿ ಫಲಿತಾಂಶದ ತನಕವು ಕಾದು ನೋಡಬೇಕಿದೆ.












Click it and Unblock the Notifications