ಹಾವಿನ ಮೇಲಿನ ದ್ವೇಷಕ್ಕೆ ಅದರ ತಲೆಯನ್ನೇ ಕಡಿದು ನುಂಗಿದ ಭೂಪ
ಲಖನೌ, ಫೆಬ್ರವರಿ 20: ಇದು ತೀರಾ ವಿಚಿತ್ರ ಘಟನೆ. ನಡೆದಿರುವುದು ಉತ್ತರಪ್ರದೇಶದಲ್ಲಿ. ಸೋನೆಲಾಲ್ ಎಂಬಾತ ಹಾವಿನ ಮೇಲೆ ದ್ವೇಷ ತೀರಿಸಿಕೊಳ್ಳುವ ಸಲುವಾಗಿ ಅದರ ತಲೆಯನ್ನೇ ಕಚ್ಚಿ ಬಿಸಾಡಿದ್ದಾನೆ. ನೀವು ಸರಿಯಾಗಿಯೇ ಓದುತ್ತಾ ಇದ್ದೀರಿ. ಇದು ಮನುಷ್ಯನೇ ಹಾವನ್ನು ಕಚ್ಚಿ ಕೊಂದ ವರದಿ. ಹೀಗೆ ಮಾಡಿದ ನಂತರ ಪ್ರಜ್ಞೆ ಕಳೆದುಕೊಂಡ ಆತನನ್ನು ತಕ್ಷಣವೇ ಹತ್ತಿರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇರಿಸಲಾಗಿದೆ.
ಆತನಿಗೆ ಹಾವು ಕಡಿದ ಯಾವ ಗುರುತು ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೊದಲಿಗೆ ಸೋನೆಲಾಲ್ ನ ನೆರೆಹೊರೆಯವರು ಹೇಳಿದ ಪ್ರಕಾರ, ಆತನಿಗೆ ಹಾವು ಕಡಿದಿದೆ. ಆದರೆ ದೇಹದಲ್ಲಿ ಎಲ್ಲೂ ಅಂಥ ಗುರುತು ಕಂಡುಬಂದಿಲ್ಲ. ಆದರೆ ಪ್ರಜ್ಞೆ ಬಂದ ನಂತರ ಏನಾಯಿತು ಅನ್ನೋದನ್ನು ಸ್ವತಃ ಸೋನೆಲಾಲ್ ವಿವರಿಸಿದ್ದಾನೆ.
ನಾನು ಜಾನುವಾರು ಮೇಯಿಸುತ್ತಿದ್ದೆ. ಆಗ ಹಾವೊಂದು ನನಗೆ ಕಡಿಯಿತು. ಆ ಸಿಟ್ಟಿನಲ್ಲಿ ಹಾವಿನ ತಲೆಯನ್ನು ಹಲ್ಲಿನಿಂದ ಕಡಿದು, ಉಗುಳುವ ಬದಲು ಸ್ವಲ್ಪ ಭಾಗ ನುಂಗಿಬಿಟ್ಟೆ ಎಂದು ವೈದ್ಯರಿಗೆ ವಿವರಿಸಿದ್ದಾನೆ ಸೋನೆಲಾಲ್. "ಆತನಿಗೆ ಹಾವು ಕಡಿದಿದೆ ಎಂಬುದಕ್ಕೆ ಯಾವ ಗುರುತೂ ಇಲ್ಲ. ಆದರೆ ಹಾವಿನ ದೇಹದ ವಿಷಪೂರಿತವಾದ ಸ್ವಲ್ಪ ಭಾಗ ಆತ ನುಂಗಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ" ಎಂದು ವೈದ್ಯರು ಹೇಳಿದ್ದಾರೆ.

ಸೋನೆಲಾಲ್ ಮಾದಕವಸ್ತು ವ್ಯಸನಿ ಎಂದು ಆತನ ಗ್ರಾಮದವರು ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ವ್ಯಾಪಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಹಾವನ್ನು ಕಡಿದು ಕೊಂದ ಸುದ್ದಿಯೇ ಅಚ್ಚರಿಯಾಗಿದೆ. ಆದರೆ ಸತ್ತ ಹಾವನ್ನು ವೈದ್ಯಕೀಯ ಸಿಬ್ಬಂದಿ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋದರು. ನನ್ನ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.












Click it and Unblock the Notifications