ಡಾಕ್ಟರ್‌ಗೆ ಐಪಿಎಸ್ ಹುದ್ದೆ ಸಿಕ್ಕರೂ ತೃಪ್ತಿಯಾಗಲಿಲ್ಲ: ಮತ್ತೆ UPSC ಬರೆದು ಐಎಎಸ್ ಅಧಿಕಾರಿಯಾದ ರಿತಿಕಾ ಐಮಾ

ಜೀವನದಲ್ಲಿ ಸರ್ಕಾರಿ ಹುದ್ದೆಯನ್ನ ಪಡೆಯಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಕನಸಾಗಿರುತ್ತದೆ. ಅದರಲ್ಲಂತೂ ಯುಪಿಎಸ್‌ಸಿ ಪರೀಕ್ಷೆ ಬರೆಯುವವರ ಕನಸು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವುದು. ಲಕ್ಷಾಂತರ ವಿದ್ಯಾರ್ಥಿಗಳು ಈ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ಹಗಲಿರುಳು ಕಷ್ಟ ಪಡುತ್ತಾರೆ.

ಐಪಿಎಸ್ ಹುದ್ದೆಯಾದ್ರೂ ಸಿಕ್ಕರೆ ಸಾಕು ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಆದರೆ, ಡಾ. ರಿತಿಕಾ ಐಮಾ ಅವರ ಕಥೆ ಸ್ವಲ್ಪ ಭಿನ್ನವಾಗಿದೆ. ಎಂಬಿಬಿಎಸ್ ಮುಗಿಸಿ ಡಾಕ್ಟರ್‌ ಆಗಿದ್ದ ರಿತಿಕಾ, ಒಮ್ಮೆ ಐಪಿಎಸ್ ಅಧಿಕಾರಿಯಾದರೂ ಕೂಡ, ತಮ್ಮ ಐಎಎಸ್ ಗುರಿಯನ್ನು ಬಿಡದೆ ಮತ್ತೆ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ.

Dr Ritika Aima

ಉತ್ತರಾಖಂಡದ ಡೆಹ್ರಾಡೂನ್ ಮೂಲದ ಡಾ. ರಿತಿಕಾ ಐಮಾ ಅವರು ಹಲ್ದ್ವಾನಿಯ ಡಾ. ಸುಶೀಲಾ ತಿವಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು. ಆದರೆ, ಡಾಕ್ಟರ್‌ ಆಗಿದ್ದಾಗ ಅವರ ಗಮನಕ್ಕೆ ಒಂದು ಪ್ರಮುಖ ಅಂಶ ಬಂದಿದ್ದು, ವೈದ್ಯರು ಪ್ರತಿದಿನ ಅದೆಷ್ಟೋ ರೋಗಿಗಳ ಜೀವ ಉಳಿಸುತ್ತಾರೆ ನಿಜ, ಆದರೆ ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ದೊಡ್ಡ ಮಟ್ಟದ ಬದಲಾವಣೆ ತರಬೇಕಾದರೆ ಉತ್ತಮ ಆಡಳಿತ ಮತ್ತು ನೀತಿ ನಿರೂಪಣೆಯಿಂದ ಮಾತ್ರ ಸಾಧ್ಯ ಎಂಬುದು ಅವರಿಗೆ ತಿಳಿಯಿತು. ಆಸ್ಪತ್ರೆಗಳ ನಿರ್ಮಾಣ, ಔಷಧಿಗಳ ಅಗತ್ಯತೆ, ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ, ಪೌಷ್ಟಿಕಾಂಶ ಮತ್ತು ನೈರ್ಮಲ್ಯ- ಇವೆಲ್ಲವೂ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ಅವಲಂಬಿಸಿದೆ ಎಂದು ತಿಳಿದುಕೊಂಡು ಅವರು ಸಿವಿಲ್ ಸರ್ವಿಸಸ್ ಪರೀಕ್ಷೆ ಬರೆಯಲು ನಿರ್ಧರಿಸಿದರು.

ನಂತರ ಡಾ. ರಿತಿಕಾ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿ ತಯಾರಿ ನಡೆಸಲು ಶುರು ಮಾಡಿದರು. ಅವರ ಪರಿಶ್ರಮಕ್ಕೆ 2022ರಲ್ಲಿ ಮೊದಲ ಯಶಸ್ಸು ಸಿಕ್ಕಿತು. ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 186ನೇ ರ‍್ಯಾಂಕ್ ಗಳಿಸುವ ಮೂಲಕ ಅವರು ಭಾರತೀಯ ಪೊಲೀಸ್ ಸೇವೆಗೆ ಅಂದರೆ ಐಪಿಎಸ್‌ಗೆ ಆಯ್ಕೆಯಾದರು. ಬೇರೆ ಯಾರೇ ಆಗಿದ್ದರು ಇಲ್ಲಿಗೇ ಸುಮ್ಮನಾಗುತ್ತಿದ್ದರು. ಆದರೆ, ರಿತಿಕಾ ಅವರಿಗೆ ಐಎಎಸ್ ಅಧಿಕಾರಿಯೇ ಆಗಬೇಕು ಎನ್ನುವ ಬಲವಾದ ಆಸೆ ಕನಸಿತ್ತು. ಹಾಗಾಗಿ, ಅವರು ಐಪಿಎಸ್ ಹುದ್ದೆ ಸಿಕ್ಕರೂ ತಮ್ಮ ಗುರಿಯತ್ತ ಗಮನಹರಿಸಿ ಮತ್ತೆ ಯುಪಿಎಸ್‌ಸಿ ಪರೀಕ್ಷೆ ಬರೆಯಲು ರೆಡಿಯಾದರು.

ಯುಪಿಎಸ್‌ಸಿಯಲ್ಲಿ 33ನೇ ರ‍್ಯಾಂಕ್

ಹಿಂದೆ ಮಾಡಿದ ತಪ್ಪುಗಳನ್ನೇಲ್ಲ ತಿದ್ದಿಕೊಂಡು, ಆಂಥ್ರೋಪಾಲಜಿ ವಿಷಯದೊಂದಿಗೆ ಇನ್ನಷ್ಟು ಉತ್ತಮ ಸಿದ್ದತೆ ಮಾಡಿಕೊಂಡು 2023ರಲ್ಲಿ ಮತ್ತೆ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಡಾ. ರಿತಿಕಾ ಐಮಾ ಅವರು, 33ನೇ ರ‍್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಂಡರು. ಸದ್ಯ ಅವರಿಗೆ ಗುಜರಾತ್ ಕೇಡರ್ ಲಭಿಸಿದ್ದು, ತಾಪಿ ಜಿಲ್ಲೆಯಲ್ಲಿ ಸೂಪರ್‌ನ್ಯೂಮರರಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ಆಡಳಿತಾತ್ಮಕ ಜವಾಬ್ದಾರಿಗಳ ಜೊತೆಗೆ, ಡಾ. ರಿತಿಕಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಇದರಲ್ಲಿ ಪರೀಕ್ಷಾ ಸಿದ್ಧತೆಗಳು, ಸಂದರ್ಶನದ ಅನುಭವಗಳು ಮತ್ತು ಮಾನಸಿಕವಾಗಿ ಸದೃಢರಾಗಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. "ಯಾವುದೇ ಪರೀಕ್ಷೆ ಫಲಿತಾಂಶವು ವ್ಯಕ್ತಿಯ ಜೀವನದ ಯಶಸ್ಸನ್ನಾ ಅಥವಾ ಮೌಲ್ಯ ನಿರ್ಧರಿಸಬಾರದು" ಎಂದು ಅವರು ನಂಬಿದ್ದಾರೆ.

ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ್ದರೂ, ವಿದ್ಯಾರ್ಥಿಗಳು ಯಾವಾಗಲೂ ಒಂದು 'ಪ್ಲಾನ್ ಬಿ' ಇಟ್ಟುಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ. ಇನ್ನೊಂದು ಆಯ್ಕೆ ಇದ್ದಾಗ ಮಾತ್ರ ಪರೀಕ್ಷೆಯ ಒತ್ತಡ ಕಡಿಮೆಯಾಗುತ್ತದೆ ಮತ್ತು ಅಭ್ಯರ್ಥಿಗಳಿಗೆ ಹೆಚ್ಚು ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಡಾ. ರಿತಿಕಾ ಅವರ ನಿಲುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+