ಹಸುವಿನ ಹೊಟ್ಟೆಯಿಂದ ಬರೋಬ್ಬರಿ 30 ಕೆಜಿ ಪ್ಲಾಸ್ಟಿಕ್ ತೆಗೆದ ವೈದ್ಯರು!
ಭುವನೇಶ್ವವರ, ಆಗಸ್ಟ್ 3: ಒಡಿಶಾದ ಬೆರ್ಹಾಂಪುರದ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಹಸುವಿನ ಹೊಟ್ಟೆಯಿಂದ ಸುಮಾರು 30 ಕೆಜಿ ತೂಕದ ಪ್ಲಾಸ್ಟಿಕ್ ಚೀಲಗಳನ್ನು ಹೊರತೆಗೆದಿದ್ದಾರೆ.
ಸತ್ಯನಾರಾಯಣ್ ಕರ್ ಅವರ ನೇತೃತ್ವದ ಪಶುವೈದ್ಯರ ತಂಡವು 10 ವರ್ಷದ ಹಸುವಿನ ಹೊಟ್ಟೆಯಿಂದ ಜೀರ್ಣವಾಗದ ಪಾಲಿಥಿನ್ ಚೀಲಗಳನ್ನು ಬುಧವಾರ ಹೊರತೆಗೆಯಲು ನಾಲ್ಕು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ನಡೆಸಿತು ಎಂದು ಗಂಜಾಂನ ಮುಖ್ಯ ಜಿಲ್ಲಾ ಪಶುವೈದ್ಯಾಧಿಕಾರಿ ಮನೋಜ್ ಕುಮಾರ್ ಹೇಳಿದರು.

ಜನರು ಪಾಲಿಥಿನ್ ಚೀಲಗಳಲ್ಲಿ ಎಸೆದ ಎಂಜಲುಗಳನ್ನು ತಿನ್ನುತ್ತಿದ್ದ ಬಿಡಾಡಿ ಹಸು, ಅದರ ಹೊಟ್ಟೆ ಪ್ಲಾಸ್ಟಿಕ್‌ನಿಂದ ತುಂಬಿತ್ತು. ಪರಿಣಾಮವಾಗಿ ತರುವಾಯ ಅದರ ಕರುಳಿಗೆ ಪರಿಣಾಮ ಬೀರಿತ್ತು. ಹೆಚ್ಚು ಹೊತ್ತು ಗಮನಿಸದೇ ಇದ್ದರೆ ಪ್ರಾಣಿ ಸಾಯುತ್ತಿತ್ತು ಎಂದು ಸತ್ಯನಾರಾಯಣ್ ಕರ್ ಹೇಳಿದರು.
ಹಸುವಿನ ಆರೋಗ್ಯ ಈಗ ಸ್ಥಿರವಾಗಿದ್ದು, ಒಂದು ವಾರ ಕಾಲ ಆಸ್ಪತ್ರೆಯಲ್ಲಿದ್ದು ನಿಗಾ ಇರಿಸಲಾಗಿದೆ. ಕಳೆದ ವರ್ಷವೂ ಆಸ್ಪತ್ರೆಯ ವೈದ್ಯರು ಇದೇ ರೀತಿ ಮತ್ತೊಂದು ಬಿಡಾಡಿ ಹಸುವಿನ ಸುಮಾರು 15 ಕೆ.ಜಿ. ಪ್ಲಾಸ್ಟಿಕ್ ತೆಗೆದಿದ್ದರು.
ಈ ಘಟನೆಯು ಪ್ಲಾಸ್ಟಿಕ್ ಮಾಲಿನ್ಯದ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಪ್ಲಾಸ್ಟಿಕ್ ಬಳಕೆ, ಸಾಗಣೆ ಮತ್ತು ತಯಾರಿಕೆಯ ಮೇಲೆ ಸರ್ಕಾರವು ಐದು ವರ್ಷಗಳ ಕಾಲ ನಿಷೇಧ ಹೇರಿದ್ದರು ಈ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ನಿಷೇಧವನ್ನು ಸರಿಯಾಗಿ ಜಾರಿಗೊಳಿಸಲು ನಾವು ಬರ್ಹಾಂಪುರ ಮುನ್ಸಿಪಲ್ ಕಾರ್ಪೊರೇಷನ್ಗೆ ಮನವಿ ಮಾಡುತ್ತೇವೆ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಅಭಿಯಾನವನ್ನು ಮುನ್ನಡೆಸುತ್ತಿರುವ ಆರ್ಯಭಟ್ ಫೌಂಡೇಶನ್ ಸಂಸ್ಥಾಪಕ ಸುಧೀರ್ ರೌತ್ ಹೇಳಿದರು.












Click it and Unblock the Notifications