Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್
ಸಾಮಾನ್ಯವಾಗಿ ಸಮಾಜದಲ್ಲಿ ಡಿವೋರ್ಸ್ ವಿಚಾರವನ್ನು ಒಂದು ನೋವಿನ ಘಟನೆಯಾಗಿ ನೋಡಲಾಗುತ್ತದೆ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ತಂದೆಯೊಬ್ಬರು ತಮ್ಮ ಮಗಳ ಡಿವೋರ್ಸ್ ಅನ್ನು ಸಂಭ್ರಮಿಸುವ ಮೂಲಕ ಹೊಸ ಮಾದರಿಯನ್ನು ಸೃಷ್ಟಿಸಿದ್ದಾರೆ. ಮಗಳು ನರಕಸದೃಶ ಜೀವನದಿಂದ ಮುಕ್ತಿ ಪಡೆದಿದ್ದಕ್ಕೆ ಹರ್ಷ ವ್ಯಕ್ತಪಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಲ್ಲದೇ ಬೀದಿಯಲ್ಲಿ ಬ್ಯಾಂಡ್‌ನೊಂದಿಗೆ ಭರ್ಜರಿ ಡ್ಯಾನ್ಸ್ ಮಾಡುತ್ತಾ ಮಗಳನ್ನು ಬರಮಾಡಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗಿದೆ.
ಮೀರತ್‌ನ ನಿವಾಸಿ ಪ್ರಣಿತಾ ಶರ್ಮಾ ಈ ಕಥೆಯ ನಾಯಕಿ. ಇವರು ಜ್ಞಾನೇಂದ್ರ ಶರ್ಮಾ ಅವರ ಒಬ್ಬಳೇ ಮಗಳು. ಪ್ರಣಿತಾ ಅವರು 2018ರಲ್ಲಿ ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಗೌರವ್ ಅಗ್ನಿಹೋತ್ರಿ ಎಂಬುವವರನ್ನು ಮದುವೆಯಾಗಿದ್ದರು. ಅವರು ಪ್ರಸ್ತುತ ಪಂಜಾಬ್‌ನ ಜಲಂಧರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದ ನಂತರ ಪ್ರಣಿತಾ ಅವರು ತಮ್ಮ ಅತ್ತೆ-ಮಾವನಿಂದ ತೀವ್ರ ಕಿರುಕುಳ ಎದುರಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಅವರು ಕಾನೂನುಬದ್ಧವಾಗಿ ಬೇರ್ಪಡಲು ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯದ ಹೊರಗೆ ಅದ್ದೂರಿ ಸಂಭ್ರಮ
ಸುದೀರ್ಘ ಕಾನೂನು ಹೋರಾಟದ ನಂತರ, ಮೀರತ್‌ನ ಕೌಟುಂಬಿಕ ನ್ಯಾಯಾಲಯವು ಪ್ರಣಿತಾ ಅವರಿಗೆ ವಿಚ್ಛೇದನ ಮಂಜೂರು ಮಾಡಿತು. ಈ ತೀರ್ಪು ಹೊರಬರುತ್ತಿದ್ದಂತೆಯೇ ನ್ಯಾಯಾಲಯದ ಆವರಣದ ಹೊರಗೆ ಕಂಡ ದೃಶ್ಯ ಎಲ್ಲರ ಗಮನ ಸೆಳೆಯಿತು. ತಂದೆ ಜ್ಞಾನೇಂದ್ರ ಶರ್ಮಾ ಅವರು ಬ್ಯಾಂಡ್-ಬಾಜಾ (ತಮಟೆ) ಸಮೇತ ಬಂದು, ಸಿಹಿ ಹಂಚುತ್ತಾ ಕುಣಿದು ಕುಪ್ಪಳಿಸಿದರು. ಅವರ ಜೊತೆ ಬಂದಿದ್ದ ಸಂಬಂಧಿಕರು ಕೂಡ ಡೋಲು ಬಡಿತಕ್ಕೆ ಹೆಜ್ಜೆ ಹಾಕಿದರು.
ಎಲ್ಲರ ಮನಗೆದ್ದ ಅಂಶವೆಂದರೆ ಡಾ.ಶರ್ಮಾ ಅವರು ಧರಿಸಿದ್ದ ಟಿ-ಶರ್ಟ್. ಅದರ ಮೇಲೆ ಮಗಳ ಭಾವಚಿತ್ರವಿತ್ತು ಮತ್ತು "ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ. ಅವಳೇ ನನ್ನ ಹೃದಯ ಮತ್ತು ಆತ್ಮ" ಎಂಬ ವಾಕ್ಯವನ್ನು ಮುದ್ರಿಸಲಾಗಿತ್ತು. ನ್ಯಾಯಾಲಯದಿಂದ ಹೊರಬಂದ ಮಗಳಿಗೆ ಹೂವಿನ ಹಾರ ಹಾಕಿ, ಹೂಮಳೆಗರೆದು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
In a striking departure from conventional social attitudes, a family in Uttar Pradesh's Meerut marked a divorce not with silence but celebration.
— Hate Detector 🔍 (@HateDetectors) April 5, 2026
Retired judge Gyanendra Kumar Sharma welcomed home his only daughter Pranita Vashistha with drums, garlands and sweets, sending out a… pic.twitter.com/iV9fMWFfdg
ತಂದೆ ಹೇಳಿದ್ದೇನು?
ಈ ಸಂಭ್ರಮಾಚರಣೆಯ ಬಗ್ಗೆ ಮಾತನಾಡಿದ ಜ್ಞಾನೇಂದ್ರ ಶರ್ಮಾ, "ನನ್ನ ಮಗಳು ಕಳೆದ ಕೆಲವು ವರ್ಷಗಳಿಂದ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅವಳು ಆ ನರಕದಿಂದ ಹೊರಬಂದಿದ್ದಾಳೆ ಎಂಬುವುದೇ ನಮಗೆ ದೊಡ್ಡ ಸಂತೋಷ. ನಮ್ಮ ಕುಟುಂಬ ಈಗಾಗಲೇ ಕೆಲವು ವೈಯಕ್ತಿಕ ನಷ್ಟಗಳನ್ನು ಅನುಭವಿಸಿದೆ. ನನ್ನ ಮಗಳು ಮತ್ತೆ ಅಂತಹ ನೋವನ್ನು ಅನುಭವಿಸುವುದು ನಮಗೆ ಇಷ್ಟವಿರಲಿಲ್ಲ. ಅವಳ ಮುಂದಿನ ಜೀವನ ಸುಖವಾಗಿರಲಿ ಎಂಬುದು ನಮ್ಮ ಆಶಯ" ಎಂದು ಭಾವುಕರಾಗಿ ನುಡಿದರು.
ಮದುವೆಯ ನಂತರ ದೌರ್ಜನ್ಯಕ್ಕೊಳಗಾಗಿ ಮೌನವಾಗಿ ನರಳುವ ಹೆಣ್ಣುಮಕ್ಕಳಿಗೆ ಈ ಘಟನೆ ಒಂದು ಧೈರ್ಯ ತುಂಬುವಂತಿದೆ. "ಮಗಳು ಮದುವೆಯಾಗಿ ಹೋದ ಮೇಲೆ ಹೆಣವಾಗಿ ಬರಬೇಕು" ಎಂಬ ಹಳೆಯ ಸಂಪ್ರದಾಯದ ಬದಲು, "ನೋವಿನ ಜೀವನ ಬಿಟ್ಟು ಮನೆಗೆ ಬಾ, ನಾವು ನಿನ್ನ ಜೊತೆಗಿದ್ದೇವೆ" ಎಂದು ಬೆಂಬಲ ನೀಡಿದ ಈ ತಂದೆಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.












Click it and Unblock the Notifications