G20 Summit: ಪ್ರಧಾನಿ ಮೋದಿ & ಬೈಡನ್ ಮಧ್ಯೆ ಮಹತ್ವದ ಒಪ್ಪಂದ!
ಭಾರತ & ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು ನಿನ್ನೆ ರಾತ್ರಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ, ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಹತ್ವದ ಒಪ್ಪಂದಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗಾದರೆ ಯಾವೆಲ್ಲಾ ಒಪ್ಪಂದದ ಕುರಿತಾಗಿ ಅಮೆರಿಕ & ಭಾರತದ ನಡುವೆ ಮಾತುಕತೆ ನಡೆದಿದೆ? ಭಾರತಕ್ಕೆ ಇದರಿಂದ ಏನೆಲ್ಲ ಲಾಭ? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ನಿನ್ನೆಯ ದ್ವಿಪಕ್ಷೀಯ ಸಭೆ ಮೇಲೆ ಇಡೀ ಜಗತ್ತು ಕಣ್ಣಿಟ್ಟು ಕೂತಿತ್ತು. ಅದರಲ್ಲೂ ಭಾರತ ಮತ್ತು ಅಮೆರಿಕದ ವೈರಿ ರಾಷ್ಟ್ರಗಳಿಗೆ ಈ ಸಭೆ ದೊಡ್ಡ ಗಂಡಾಂತರ ತರುವ ಮುನ್ಸೂಚನೆ ನೀಡಿತ್ತು. ಈಗ ಅದು ನಿಜವಾಗಿದ್ದು ಅಮೆರಿಕ ಜೊತೆಗಿನ ಭಾರತದ ಸಂಬಂಧ ಈಗ ಮತ್ತೆ ಗಟ್ಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ & ಬೈಡನ್ ಎರಡು ದೇಶಗಳ ರಕ್ಷಣಾ ಸಹಕಾರದ ಯೋಜನೆಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಇದರ ಜೊತೆಗೆ ಸುಸ್ಥಿರ ಅಭಿವೃದ್ಧಿ ಹಾಗೂ ಬಹುಪಕ್ಷೀಯ ಸಹಕಾರ ಹೆಚ್ಚಿಸುವುದು, ಜಾಗತಿಕ ಸವಾಲನ್ನು ಎದುರಿಸಲು ಆರ್ಥಿಕ ನೀತಿಗಳ ರೂಪಿಸುವ ಬಗ್ಗೆ ಪ್ರಧಾನಿ ಮೋದಿ ಮತ್ತು ಜೋ ಬೈಡನ್ ಚರ್ಚೆ ನಡೆಸಿದ್ದಾರೆ.

ಬರೋಬ್ಬರಿ 50 ನಿಮಿಷ ಮಾತುಕತೆ
ವಿಶೇಷ ವಿಮಾನದಲ್ಲಿ ನಿನ್ನೆ ಅಮೆರಿಕದಿಂದ ಭಾರತಕ್ಕೆ ಬಂದಿದ್ದರು ಜೋ ಬೈಡನ್. ಹೀಗೆ ನಿನ್ನೆ ಸಂಜೆ ನವದೆಹಲಿಗೆ ಬಂದಿಳಿದ ಬೈಡನ್ ನೇರವಾಗಿ ಪಿಎಂ ಮೋದಿ ಅವರ ನಿವಾಸಕ್ಕೆ ತೆರಳಿದ್ದರು. ಆ ನಂತರ ಉಭಯ ನಾಯಕರು ಸುಮಾರು 50 ನಿಮಿಷ ಚರ್ಚೆ ನಡೆಸಿದ್ದಾರೆ. ರಕ್ಷಣಾ ಪಾಲುದಾರಿಕೆ ಮತ್ತಷ್ಟು ಸದೃಢಗೊಳಿಸಲು ಇಬ್ಬರೂ ಒಪ್ಪಿಗೆ ನೀಡಿದ್ದಾರೆ. ಡ್ರೋನ್ ಸೇರಿದಂತೆ ಜೆಟ್ ಎಂಜಿನ್‌ಗಳ ನಿರ್ಮಾಣ ಯೋಜನೆ ಜಂಟಿಯಾಗಿ ಅಭಿವೃದ್ಧಿಪಡಿಸುವ ಕ್ರಮಕ್ಕೆ ಕೂಡ ಪ್ರಧಾನಿ ಮೋದಿ & ಬೈಡನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಎಐ ತಂತ್ರಜ್ಞಾನದಲ್ಲೂ ಸಹಾಯ!
ಪರಮಾಣು ಸಹಕಾರ, 6ಜಿ ಮತ್ತು ಕೃತಕ ಬುದ್ಧಿಮತ್ತೆ ರೀತಿ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸೇರಿದಂತೆ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು ಮರು ರೂಪಿಸುವ ಮಾರ್ಗಗಳ ಕುರಿತು ಪ್ರಧಾನಿ ಮೋದಿ ಮತ್ತು ಬೈಡನ್ ಚರ್ಚೆ ನಡೆಸಿದ್ದಾರೆ. ಇನ್ನು ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ್ದರು. ಆಗ ವಾಷಿಂಗ್ಟನ್‌ನಲ್ಲಿ ಕಳೆದ ಜೂನ್ 22ರಂದು ಈ ಇಬ್ಬರೂ ನಾಯಕರು ಹಲವು ರಕ್ಷಣಾ ಒಪ್ಪಂದಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ ಆ ರಕ್ಷಣಾ ಯೋಜನೆಗಳನ್ನ ಮುಂದುವರಿಸಲು ಭಾರತ & ಅಮೆರಿಕ ಮತ್ತೊಮ್ಮೆ ಒಪ್ಪಿಗೆಯನ್ನ ಸೂಚಿಸಿವೆ.

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಆದ್ಯತೆ
ಇದೆಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಂದ್ರೆ, ಎಚ್‌ಎಎಲ್ ಮತ್ತು ಅಮೆರಿಕ ಸಿನ್ಸಿನಾಟಿಯ ಜಿ.ಇ. ಏರೋಸ್ಪೇಸ್ ಎಫ್-414 ಫೈಟರ್ ಜೆಟ್ ಎಂಜಿನ್ ತಯಾರಿಸುವ ಬಗ್ಗೆ, ವಾಣಿಜ್ಯ ಒಪ್ಪಂದದ ಕುರಿತು ಚರ್ಚೆ ನಡೆದಿದೆ. ಮತ್ತೊಂದ್ಕಡೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕು, ಬಹುತ್ವ ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳ ಹಂಚಿಕೆಯ ಮೌಲ್ಯಗಳ ಬಗ್ಗೆಯೂ ಜಂಟಿ ಹೇಳಿಕೆ ನೀಡಲಾಗಿದೆ. ಭಾರತ & ಅಮೆರಿಕ ಪ್ರಜಾಪ್ರಭುತ್ವದ ರಾಷ್ಟ್ರಗಳಾಗಿದ್ದು, ಅದೇ ಮೌಲ್ಯದ ತಳಹದಿಯಲ್ಲಿ ಈ ಚರ್ಚೆ ನಡೆಸಲಾಗಿದೆ.

ಜೋ ಬೈಡನ್‌ಗೆ ವಿಶೇಷ ವ್ಯವಸ್ಥೆ
ಸಾಮಾನ್ಯವಾಗಿ ಜಿ20 ಶೃಂಗಸಭೆ ವೇಳೆ ದ್ವಿಪಕ್ಷೀಯ ಚರ್ಚೆಗೆ ಅವಕಾಶ ಇರಲ್ಲ. ಆದ್ರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಭಾರತ ವಿಶೇಷ ವಿನಾಯಿತಿ ನೀಡಿತ್ತು. ಎರಡೂ ದೇಶಗಳ ಜೊತೆ ದ್ವಿಪಕ್ಷೀಯ ಮಾತುಕತೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಹೀಗಾಗಿ ನಿನ್ನೆ ಬೈಡನ್ ಜೊತೆಗೆ ಪ್ರಧಾನಿ ಮೋದಿ ಮಹತ್ವದ ವಿಚಾರ ಚರ್ಚೆ ಮಾಡಿದ್ದಾರೆ. ಈ ಮೂಲಕ ಭಾರತ ಹಾಗೂ ಅಮೆರಿಕ ಸಂಬಂಧ ಇನ್ನಷ್ಟು ಗಟ್ಟಿ ಆಗಿದೆ. ಹಾಗೇ ಭಾರತಕ್ಕೆ ಹಲವು ಕ್ಷೇತ್ರದಲ್ಲಿ ಸಹಕಾರ ನೀಡಲು ಅಮೆರಿಕ ಮುಂದಾಗಿದೆ.












Click it and Unblock the Notifications