ಮಹಿಳೆಯರಿಗೆ ವಾರ್ಷಿಕ 12 ಸಾವಿರ ರೂಪಾಯಿ ಘೋಷಿಸಿದ ಬಿಜೆಪಿ!
ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಪಂಚರಾಜ್ಯ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಅದರಲ್ಲೂ ಛತ್ತೀಸ್‌ಗಢ ಚುನಾವಣೆ ಈ ಬಾರಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಅಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದು ಕೈ ಪಾಳಯಕ್ಕೆ ಸೋಲಿನ ರುಚಿ ತೋರಿಸಲು ಬಿಜೆಪಿ ಸನ್ನದ್ಧವಾಗಿದೆ. ಕಾಂಗ್ರೆಸ್ ಕೂಡ ಬಿಜೆಪಿಯ ವಿರುದ್ಧ ರಣತಂತ್ರ ರೂಪಿಸುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಮಹಿಳೆಯರಿಗೆ ಬಿಜೆಪಿ ಭರ್ಜರಿ ಉಡುಗೊರೆ ಘೋಷಿಸಿದೆ.
ಅಂದಹಾಗೆ ಛತ್ತೀಸ್‌ಗಢ ಚುನಾವಣೆಗೆ ಇಂದು ಬಿಜೆಪಿ ಪ್ರಣಾಳಿಕೆ ರಿಲೀಸ್ ಮಾಡಿದೆ. ಇದು ಪಂಚರಾಜ್ಯ ಚುನಾವಣೆಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ಬಿಜೆಪಿ ಕೂಡ ಈ ಚುನಾವಣೆಯಲ್ಲಿ ಭರ್ಜರಿ ಗಿಫ್ಟ್ ಕೊಡಲು ಮುಂದಾಗಿದೆ. 'ಮೋದಿ ಕಿ ಗ್ಯಾರಂಟಿ 2023'ಯ ಹೆಸರಲ್ಲಿ ಛತ್ತೀಸ್‌ಗಢ ಮತದಾರರ ಮನವೊಲಿಕೆಗೆ ಬಿಜೆಪಿ ಸಜ್ಜಾಗಿದೆ. ಹಾಗಾದರೆ ಇದೀಗ ಬಿಜೆಪಿ ಘೋಷಣೆ ಮಾಡಿರುವ ಪ್ರಣಾಳಿಕೆಯಲ್ಲಿ, ಛತ್ತೀಸ್‌ಗಢದ ಜನರಿಗೆ ಏನೆಲ್ಲಾ ಭರವಸೆ ನೀಡಿದೆ ಕಮಲ ಪಾಳಯ?

ಅಷ್ಟಕ್ಕೂ ಪಂಚರಾಜ್ಯ ಚುನಾವಣೆಯಲ್ಲಿ ಬೇರೆ ರಾಜ್ಯಗಳದ್ದು ಒಂದು ಲೆಕ್ಕ, ಛತ್ತೀಸ್‌ಗಢ ರಾಜ್ಯದ್ದೇ ಮತ್ತೊಂದು ಲೆಕ್ಕ ಎಂಬಂತಾಗಿದೆ. ಹೀಗಾಗಿಯೇ ನಕ್ಸಲ್ ಪೀಡಿತ ಛತ್ತೀಸ್‌ಗಢದ ವಿಧಾನಸಭೆಗೆ 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಈ ರಾಜ್ಯವನ್ನು ಬಿಟ್ಟು ಇನ್ನುಳಿದ 4 ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಛತ್ತೀಸ್‌ಗಢದಲ್ಲಿ ನವೆಂಬರ್ 7 & 17ರಂದು 2 ಹಂತಗಳಲ್ಲಿ ಮತದಾನ ನಡೆಯಲಿದೆ. ಹಾಗೇ ಡಿಸೆಂಬರ್ 3 ರಂದು ಫಲಿತಾಂಶ ರಿವೀಲ್ ಆಗಲಿದೆ. ಹೀಗಾಗಿ ಇಂದು ಬಿಜೆಪಿ ತನ್ನ ಪ್ರಣಾಳಿಕೆ ರಿಲೀಸ್ ಮಾಡಿದೆ. ಅಲ್ಲದೆ ಈ ಪ್ರಣಾಳಿಕೆಯಲ್ಲಿ ಭರ್ಜರಿ ಕೊಡುಗೆಗಳ ಭರವಸೆ ನೀಡಿದೆ.
ಛತ್ತೀಸ್‌ಗಢಕ್ಕೆ ಬಿಜೆಪಿ ನೀಡಿದ ಭರವಸೆ ಏನು?
ಅಷ್ಟಕ್ಕೂ ಛತ್ತೀಸ್‌ಗಢ ಜನರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಭರವಸೆಯನ್ನ ಕೊಡಲಾಗಿದೆ. ಪ್ರತಿ ಎಕರೆಗೆ 21 ಕ್ವಿಂಟಾಲ್ ಭತ್ತ ಖರೀದಿ & ಪ್ರತಿ ಕ್ವಿಂಟಲ್‌ಗೆ 3100 ರೂಪಾಯಿ ಬೆಂಬಲ ಬೆಲೆಯ ನೀಡುವ ಭರವಸೆ ಸೇರಿದಂತೆ ಪ್ರತಿ ವಿವಾಹಿತ ಮಹಿಳೆಗೆ ವಾರ್ಷಿಕ 12 ಸಾವಿರ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಜೊತೆಗೆ 2 ವರ್ಷದಲ್ಲಿ 1 ಲಕ್ಷ ಖಾಲಿ ಹುದ್ದೆ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 18 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ಬಿಜೆಪಿ ಈಗ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಇಷ್ಟೇ ಅಲ್ಲ, ಇನ್ನೂ ಹಲವು ಭರವಸೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಛತ್ತೀಸ್‌ಗಢ ಜನರಿಗೆ ನೀಡಿದೆ. ಇಂದು ರಾಯ್‌ಪುರ ಬಿಜೆಪಿ ಕಚೇರಿಯ, ಸಂಕೀರ್ಣದಲ್ಲಿ ಗೃಹ ಸಚಿವರಾದ ಅಮಿತ್ ಶಾ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನ ರಿಲೀಸ್ ಮಾಡಿದ್ರು. ಈ ಮೂಲಕ ಚುನಾವಣೆ ಅಖಾಡದಲ್ಲಿ ಕಮಲ ಪಾಳಯ ತೊಡೆತಟ್ಟಿ ನಿಂತಿದೆ. ಹೀಗಾಗಿ ಕಾಂಗ್ರೆಸ್ & ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಮಾಡಲಾಗುತ್ತಿದೆ.












Click it and Unblock the Notifications