ದೆಹಲಿಯಲ್ಲಿ ಬಾಂಗ್ಲಾದೇಶ, ನೇಪಾಳದಂತಹ ಪರಿಸ್ಥಿತಿ ಸೃಷ್ಟಿಸಲು ಯತ್ನ: ಧ್ರುವ್ ರಾಠಿ ಗಂಭೀರ ಆರೋಪ
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳು ಮತ್ತು ಅದರ ವಿರುದ್ಧದ ಪೊಲೀಸ್ ಕಾರ್ಯಾಚರಣೆಗಳು ಇದೀಗ ತೀವ್ರ ಸ್ವರೂಪ ಪಡೆದುಕೊಂಡಿವೆ. ಪ್ರಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಎಸ್‌ಎಫ್‌ಐ (SFI) ಮತ್ತು ಡಿವೈಎಫ್‌ಐ (DYFI) ದೆಹಲಿ ಪೊಲೀಸರ ಮತ್ತು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದು, ದೆಹಲಿಯಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ: ಧ್ರುವ್ ರಾಠಿ ಆರೋಪ
ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನ ಭೇಟಿಯಾದ ಬಳಿಕ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಧ್ರುವ್ ರಾಠಿ, "ಚುನಾವಣಾ ಆಯೋಗ, ನ್ಯಾಯಾಲಯಗಳು ಮತ್ತು ಪೊಲೀಸ್ ಸೇರಿದಂತೆ ಎಲ್ಲಾ ಸಾಂಸ್ಥಿಕ ವ್ಯವಸ್ಥೆಗಳನ್ನ ಇಬ್ಬರು ವ್ಯಕ್ತಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ" ಎಂದು ಆರೋಪಿಸಿದ್ದಾರೆ.

ಶಾಂತಿಯುತ ಪ್ರತಿಭಟನೆಗಳನ್ನ ಉದ್ದೇಶಪೂರ್ವಕವಾಗಿ ಹಿಂಸಾಚಾರಕ್ಕೆ ತಿರುಗಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ದೆಹಲಿಯಲ್ಲಿ ನೇಪಾಳ ಮತ್ತು ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಠಿ ದೂರಿದ್ದಾರೆ.
ಗುರುಗ್ರಾಮದಲ್ಲಿರುವ ತಮ್ಮ ನಿವಾಸದಿಂದ ಪೊಲೀಸರು ತಮ್ಮನ್ನ ವಶಕ್ಕೆ ಪಡೆದಿದ್ದ ಘಟನೆಯನ್ನ ನೆನಪಿಸಿಕೊಂಡ ಅವರು, ಪೊಲೀಸರು ಕೂಡ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದಾಗಿ ತಮ್ಮ ಬಳಿ ಹೇಳಿಕೊಂಡಿದ್ದರು ಎಂದರು.
ತಮಗೆ ವಿದೇಶಿ ಶಕ್ತಿಗಳಿಂದ ಅನುದಾನ ಬರುತ್ತಿದೆ ಎಂಬ ಆರೋಪಗಳನ್ನ ಸಾರಾಸಗಟಾಗಿ ತಳ್ಳಿಹಾಕಿದ ರಾಠಿ, "ನಾನು ಅಮೆರಿಕ ಮತ್ತು ಚೀನಾದ ತಪ್ಪುಗಳ ವಿರುದ್ಧವೂ ಧ್ವನಿ ಎತ್ತುತ್ತೇನೆ. ಪ್ರಧಾನಿ ಮೋದಿಯವರು ಆ ರೀತಿ ಮಾಡಬಲ್ಲರೇ?" ಎಂದು ಸವಾಲೆಸೆದರು. ಇದೇ ವೇಳೆ, ಮುಖ್ಯ ಚುನಾವಣಾ ಆಯುಕ್ತರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಮತ್ತು ಹೊಸ ಆಯುಕ್ತರ ಆಯ್ಕೆಯನ್ನ ನಿಷ್ಪಕ್ಷಪಾತವಾಗಿರುವ ವ್ಯಕ್ತಿಯ ಮೂಲಕ ಮಾಡಬೇಕು ಎಂದು ಅವರು ಆಗ್ರಹಿಸಿದರು.
ನೂರಾರು ಜನರನ್ನ ಬಂಧಿಸಿದರೂ ತಮ್ಮ ಪ್ರತಿಭಟನೆ ಮಾತ್ರ ನಿಲ್ಲುವುದಿಲ್ಲ ಹಾಗೂ ಸಾಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Delhi: YouTuber Dhruv Rathee says, "Actually, I came specifically to participate in the protest because this is an issue I genuinely care about. The Election Commission should be neutral. Vote theft is a very serious issue." https://t.co/fwwaQf7Ugz
— IANS (@ians_india) October 11, 2026
ಮಹಿಳಾ ಕಾರ್ಯಕರ್ತೆಯರ ಮೇಲೆ ದೆಹಲಿ ಪೊಲೀಸ್ ದೌರ್ಜನ್ಯ
ಇನ್ನೊಂದೆಡೆ, ದೆಹಲಿ ಪೊಲೀಸ್ ಕಾರ್ಯಾಚರಣೆಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಪ್ರಾಪ್ತರು ಮತ್ತು ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯವನ್ನ ಖಂಡಿಸಿ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ತ್ರಿವರ್ಣ ಧ್ವಜದೊಂದಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಎಸ್‌ಎಫ್‌ಐನ 22 ಮಹಿಳಾ ಕಾರ್ಯಕರ್ತೆಯರನ್ನ ಪೊಲೀಸರು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಸಂಘಟನೆಗಳು ದೂರಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 43(5) ಪ್ರಕಾರ ಸೂರ್ಯಾಸ್ತದ ನಂತರ ಮಹಿಳೆಯರನ್ನ ಬಂಧಿಸುವುದು ಕಾನೂನುಬಾಹಿರ. ಆದರೂ ಕತ್ತಲಾದ ಬಳಿಕ ಮಹಿಳಾ ಕಾರ್ಯಕರ್ತೆಯರನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಸೆಕ್ಷನ್ 46(1) ಅನ್ನು ಉಲ್ಲಂಘಿಸಿ ಪುರುಷ ಪೊಲೀಸ್ ಅಧಿಕಾರಿಗಳು ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿದ್ದಾರೆ ಎಂದು ಎಸ್‌ಎಫ್‌ಐ ಆರೋಪಿಸಿದೆ.
ಮಹಿಳಾ ಪೊಲೀಸರಿಲ್ಲದ, ದೀಪದ ವ್ಯವಸ್ಥೆಯೂ ಇಲ್ಲದ ಕತ್ತಲ ಬಸ್‌ಗಳಲ್ಲಿ ಅವರನ್ನ ಕರೆದೊಯ್ಯಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ. ಎಐಎಸ್‌ಎಫ್ ಮತ್ತು ಕೆವೈಎಸ್ ವಿದ್ಯಾರ್ಥಿಗಳನ್ನ ಯುಪಿ ಪೊಲೀಸ್ ಬಸ್‌ಗಳಲ್ಲಿ ಗೊತ್ತಿಲ್ಲದ ಸ್ಥಳಗಳಿಗೆ ಕರೆದೊಯ್ಯಲಾಗಿದೆ ಎಂದೂ ಸಂಘಟನೆ ಹೇಳಿದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಡಿವೈಎಫ್‌ಐ ನಿರ್ಧಾರ
ಪ್ರತಿಭಟನಾಕಾರರನ್ನ ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡ ರೀತಿಯ ವಿರುದ್ಧ ಡಿವೈಎಫ್‌ಐ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಎ.ಎ. ರಹೀಮ್ ಈ ಬಗ್ಗೆ ಮಾಹಿತಿ ನೀಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನ ರಸ್ತೆಯಲ್ಲಿ ಎಳೆದಾಡಿ ಬಲವಂತವಾಗಿ ಬಸ್‌ಗಳಿಗೆ ಹತ್ತಿಸಲಾಗಿದೆ ಎಂದು ದೂರಿದ್ದಾರೆ.
No lights in the bus. Male officers surrounding women activists!!!The government has stooped so low to save the 'vote chor' Gyanesh Kumar!!! https://t.co/F67Q86c09T
— SFI (@SFI_CEC) October 11, 2026
ಬಂಧಿತರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಬದಲು ಸಿಸಿಟಿವಿ ಕ್ಯಾಮೆರಾಗಳಿಲ್ಲದ ಸ್ಥಳಗಳಿಗೆ ಕರೆದೊಯ್ದು ಚಿತ್ರಹಿಂಸೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಒಟ್ಟಾರೆಯಾಗಿ ದೆಹಲಿಯಲ್ಲಿನ ಬೆಳವಣಿಗೆಗಳು ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.


Click it and Unblock the Notifications
