ದಿನಕ್ಕೆ 60 ರೂ.ಗೆ ಪಾಠ ಮಾಡುತ್ತಿದ್ದ ದೆಹಲಿಯ ಶಿಕ್ಷಕಿಗೆ ಒಲಿಯಿತು 2026ರ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ' ಗರಿ
ತಮ್ಮ ಕಾಲೇಜು ಫೀಸ್ ಕಟ್ಟಲು ದಿನಕ್ಕೆ ಕೇವಲ 60 ರೂಪಾಯಿ ವೇತನಕ್ಕೆ ಪಾಠ ಮಾಡಲು ಆರಂಭಿಸಿದವರಿಗೆ, ಇಂದು ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2026ಕ್ಕೆ ಆಯ್ಕೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ದೆಹಲಿಯ ಶಿಕ್ಷಕಿ ಸುಮನ ಗೋಯಲ್ ಅವರ ಎರಡು ದಶಕಗಳ ನಿರಂತರ ಶ್ರಮ, ಶಿಕ್ಷಣದ ಮೇಲಿನ ಅತೀವ ಪ್ರೀತಿ ಹಾಗೂ ಮಕ್ಕಳ ಭವಿಷ್ಯ ರೂಪಿಸುವ ಬದ್ಧತೆ ಅವರಿಗೆ ಈ ರಾಷ್ಟ್ರಮಟ್ಟದ ಅತ್ಯುನ್ನತ ಗೌರವವನ್ನ ತಂದುಕೊಟ್ಟಿದೆ.
41 ವರ್ಷದ ಸುಮನ ಗೋಯಲ್ ಅವರು ಮೂಲತಃ ದೆಹಲಿಯ ರೋಹಿಣಿ ಪ್ರದೇಶದ ಜಿಎಸ್‌ಕೆವಿ ಪೂತ್ ಕಲಾನ್ ಶಾಲೆಯ ಹಳೆಯ ವಿದ್ಯಾರ್ಥಿನಿ. 2002ರಲ್ಲಿ ಇದೇ ಶಾಲೆಯಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದ ಅವರು, ಇಡೀ ಶಾಲೆಗೇ ಟಾಪರ್ ಆಗಿ ಹೊರಹೊಮ್ಮಿದ್ದರು.

ತರಗತಿಯಲ್ಲಿ ಅತ್ಯಂತ ಚುರುಕಿನ ವಿದ್ಯಾರ್ಥಿನಿಯಾಗಿದ್ದ ಅವರು, ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಪ್ರತಿಷ್ಠಿತ ಲಕ್ಷ್ಮೀಬಾಯಿ ಕಾಲೇಜಿಗೆ ಬಿ.ಎ ಪದವಿ ಓದಲು ಸೇರಿಕೊಂಡರು.
ಆದರೆ, ಅವರ ಓದಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ, ಕಾಲೇಜು ಶುಲ್ಕ ಭರಿಸಲು ದಾರಿ ಕಾಣದೆ ಪರದಾಡುವಂತಾಯಿತು. ಇಂತಹ ಸಂದರ್ಭದಲ್ಲಿ ಅವರು ಹೆದರದೆ, ಹಿಂಜರಿಯದೆ ತಮ್ಮ ವಿದ್ಯಾಭ್ಯಾಸವನ್ನ ಮುಂದುವರಿಸಲು ತಾವು ಓದಿದ್ದ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುವ ನಿರ್ಧಾರ ತೆಗೆದುಕೊಂಡರು.
2004ರಲ್ಲಿ ಸುಮನ ಅವರು ಮತ್ತೆ ಜಿಎಸ್‌ಕೆವಿ ಪೂತ್ ಕಲಾನ್ ಶಾಲೆಗೆ ಕಾಲಿಟ್ಟರು. ಆದರೆ ಈ ಬಾರಿ ಅವರು ವಿದ್ಯಾರ್ಥಿನಿಯಾಗಿರದೆ, ಮಕ್ಕಳಿಗೆ ಪಾಠ ಮಾಡುವ ಗುರುವಾಗಿದ್ದರು. ಅಂದು ಅವರು ದಿನಕ್ಕೆ ಕೇವಲ 60 ರೂಪಾಯಿಗಳಂತೆ ಕೆಲಸಕ್ಕೆ ಸೇರಿಕೊಂಡರು. ತಿಂಗಳು ಪೂರ್ತಿ ಕೆಲಸ ಮಾಡಿದರೆ ಅವರ ಕೈಸೇರುತ್ತಿದ್ದ ಒಟ್ಟು ವೇತನ ಕೇವಲ 1,200 ರಿಂದ 1,300 ರೂಪಾಯಿಗಳು ಮಾತ್ರವಾಗಿತ್ತು.
ಈ ಹಣದಲ್ಲೇ ಅವರು ತಮ್ಮ ಕಾಲೇಜು ಫೀಸ್ ಹಾಗೂ ಪುಸ್ತಕಗಳ ಖರ್ಚನ್ನು ಸರಿದೂಗಿಸುತ್ತಿದ್ದರು. ಬೆಳಗಿನ ಜಾವ ಕಾಲೇಜು ವ್ಯಾಸಂಗ, ನಂತರ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಜವಾಬ್ದಾರಿ ಹೀಗೆ ದಣಿವರಿಯದೆ ದುಡಿಯುವ ಮೂಲಕ ಬಡತನವನ್ನ ಮೆಟ್ಟಿ ನಿಂತರು.
ಜೀವನದಲ್ಲಿ ಅದೆಷ್ಟೇ ಕಷ್ಟ ಬಂದರೂ ಶಿಕ್ಷಣ ಮತ್ತು ಗುರಿಯಿಂದ ಹಿಂದೆ ಸರಿಯಬಾರದು ಎನ್ನುವುದಕ್ಕೆ ಈ ದೆಹಲಿ ಶಿಕ್ಷಕಿಯ ಬದುಕು ನಮಗೆಲ್ಲರಿಗೂ ಸ್ಪೂರ್ತಿ.
ಮದರ್ ಟೀಚರ್' ಆಗಿ ಹೊರಹೊಮ್ಮಿದ ಸ್ಪೂರ್ತಿದಾಯಕ ಕಥೆ
ಸುಮನ್ ಗೋಯಲ್ ಅವರು ಕೇವಲ ಪಠ್ಯಪುಸ್ತಕದ ಪಾಠಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಶಾಲೆಯ ಮಕ್ಕಳ ಪಾಲಿಗೆ ಅವರು ತಾಯಿಯಂತಾಗಿದ್ದರು. ಸುಮನ್ ಅವರು ಪಾಠ ಮಾಡುವ ಶಾಲೆಯ ಬಹುಪಾಲು ಮಕ್ಕಳು ದಿನಗೂಲಿ ಕಾರ್ಮಿಕರು, ಟೈಲರ್‌ಗಳು ಹಾಗೂ ಗುತ್ತಿಗೆ ಕಾರ್ಮಿಕರ ಕುಟುಂಬದಿಂದ ಬಂದವರಾಗಿದ್ದಾರೆ. ಇವರಲ್ಲಿ ಅನೇಕರು ತಮ್ಮ ಕುಟುಂಬದಿಂದ ಶಾಲೆ ಮೆಟ್ಟಿಲು ಹತ್ತಿದ ಮೊದಲ ತಲೆಮಾರಿನ ವಿದ್ಯಾರ್ಥಿಗಳು.
ಈ ಬಡ ಮಕ್ಕಳ ಶೈಕ್ಷಣಿಕ ಅಗತ್ಯಗಳ ಜೊತೆಗೆ ಅವರ ಆರೋಗ್ಯ, ಪೌಷ್ಟಿಕಾಂಶದ ಕಡೆಗೂ ಸುಮನ್ ಅವರು ವಿಶೇಷ ಗಮನ ಹರಿಸುತ್ತಾರೆ. ಚಳಿಗಾಲದಲ್ಲಿ ಮಕ್ಕಳಿಗೆ ಅಗತ್ಯವಿರುವ ಸ್ವೆಟರ್‌ಗಳು, ಪೆನ್, ಪೆನ್ಸಿಲ್ ಸೇರಿದಂತೆ ಸ್ಟೇಷನರಿ ವಸ್ತುಗಳನ್ನು ತಾವೇ ಸ್ವಂತ ಖರ್ಚಿನಲ್ಲಿ ತಂದುಕೊಡುತ್ತಾರೆ. ವಿಶೇಷ ಚೇತನ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆಯೇ ಪ್ರೀತಿಯಿಂದ ಕಾಣುವ ಮೂಲಕ ಶಾಲೆಯಲ್ಲಿ ಸಮಾನತೆಯ ವಾತಾವರಣ ನಿರ್ಮಿಸಿದ್ದಾರೆ.
"ಶಿಕ್ಷಣಕ್ಕಿಂತ ಮೊದಲು, ನಾನು ಅವರ ಯೋಗಕ್ಷೇಮದ ಬಗ್ಗೆ ಗಮನಹರಿಸುತ್ತೇನೆ. ಮಗು ಮೊದಲು ಶಾಲೆಯಲ್ಲಿ ತಾನು ಸುರಕ್ಷಿತ ಎಂದು ಭಾವಿಸಬೇಕು" ಎಂದು ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ನಿಪುಣ್ ಮ್ಯಾಥ್ಸ್ ಕಿಟ್' ರಚನೆ
ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸುಮನ್ ಅವರು ವಿನೂತನ ಪ್ರಯೋಗಗಳನ್ನ ಮಾಡಿದ್ದಾರೆ. 4ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತದ ಮೂಲಭೂತ ಪರಿಕಲ್ಪನೆಗಳನ್ನ ಸುಲಭವಾಗಿ ಅರ್ಥೈಸಲು ಅವರು ಸ್ವತಃ 'ನಿಪುಣ್ ಮ್ಯಾಥ್ಸ್ ಕಿಟ್' ಅನ್ನು ಅಭಿವೃದ್ಧಿಪಡಿಸಿದ್ದಾರೆ. ಆಟದ ಮೂಲಕ ಗಣಿತ ಕಲಿಸುವ ಇವರ ಈ ವಿಶಿಷ್ಟ ಮಾದರಿಯು ರಾಜ್ಯ ಮಟ್ಟದಲ್ಲಿ ನಿಪುಣ್ ಸಂಕಲ್ಪ ಯೋಜನೆಯಡಿ ಆಯ್ಕೆಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು.
ಎರಡು ದಶಕಗಳ ನಿಸ್ವಾರ್ಥ ಸೇವೆಗೆ ಒಲಿದ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2026'
ಅಂದು ಅನಿವಾರ್ಯವಾಗಿ ಆರಂಭವಾದ ಅವರ ಈ ಬೋಧನಾ ವೃತ್ತಿ, ನಿಧಾನವಾಗಿ ಅವರ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಯಿತು. 2004ರಿಂದ ಇಲ್ಲಿಯವರೆಗೆ, ಅಂದರೆ ಬರೋಬ್ಬರಿ ಎರಡು ದಶಕಗಳಿಗೂ ಹೆಚ್ಚು ಕಾಲ ಅವರು ಅದೇ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ, ಅವರ ಶೈಕ್ಷಣಿಕ ಹಾಗೂ ನೈತಿಕ ಬೆಳವಣಿಗೆಗೆ ಶ್ರಮಿಸಿರುವ ಸುಮನ ಗೋಯಲ್ ಅವರ ಈ ನಿಸ್ವಾರ್ಥ ಸೇವೆಯನ್ನ ಗುರುತಿಸಿ, ಸರ್ಕಾರವು ಅವರನ್ನು ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2026ಕ್ಕೆ ಆಯ್ಕೆ ಮಾಡಿದೆ. ಅಂದು 60 ರೂಪಾಯಿಗೆ ಪಾಠ ಶುರುಮಾಡಿದ ಕೈಗಳಿಗೆ, ಇಂದು ಇಡೀ ರಾಷ್ಟ್ರವೇ ಎದ್ದು ನಿಂತು ಗೌರವಿಸುವಂತಹ ಪ್ರಶಸ್ತಿ ಒಲಿದುಬಂದಿದೆ.


Click it and Unblock the Notifications
