Delhi Protest: ಅಭಿಜೀತ್ ದೀಪ್ಕೆ ಬಂಧನಕ್ಕೂ ಮುನ್ನವೇ ಉತ್ತರಾಧಿಕಾರಿ ಆಯ್ಕೆ; ಯಾರು ಈ ಅಜಿಂಕ್ಯ ಶಿಂಧೆ?
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯು ವಿಶ್ವದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿನ ಲೋಪವನ್ನು ವಿರೋಧಿಸಿ ಅಕ್ಟೋಬರ್ 10ರಂದು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ನಡುವೆ ಅಭಿಜಿತ್ ದೀಪ್ಕೆ ಅವರನ್ನು ಬಂಧಿಸಲಾಗುತ್ತದೆ ಎಂದು ತಿಳಿದಿತ್ತು, ಇದೇ ಕಾರಣಕ್ಕಾಗಿ ಅಜಿಂಕ್ಯ ಶಿಂಧೆ ಎನ್ನುವ ನಾಯಕನನ್ನು ಆಯ್ಕೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಈ ರೀತಿ ಪರ್ಯಾಯವಾಗಿ ಆಯ್ಕೆಯಾದ ಅಜಿಂಕ್ಯ ಶಿಂಧೆ ಯಾರು, ಏನಿದು ಚರ್ಚೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕಾಕ್ರೋಚ್ ಜನತಾ ಪಾರ್ಟಿಯ ಮುಖ್ಯಸ್ಥ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಇಂದು ವಿಮಾನದಿಂದ ಇಳಿಯುವಾಗ ಬಂಧಿಸಲಾಗಿದೆ. ಈ ನಡುವೆ ಕಾಕ್ರೋಚ್ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನೆಯ ಉಸ್ತುವಾರಿ ಆಗಿರುವ ಅಜಿಂಕ್ಯ ಶಿಂಧೆ ಅವರನ್ನು ಪ್ರತಿಭಟನೆಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಅಜಿಂಕ್ಯ ಶಿಂಧೆ ಅವರು ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ಪ್ರತಿಭಟನೆಗಳನ್ನು ಮುನ್ನಡೆಸಲಿದ್ದಾರೆ.

ಶನಿವಾರ ಬೆಳಿಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ಸ್ವಲ್ಪ ಸಮಯದ ನಂತರ ಅಭಿಜೀತ್ ದೀಪ್ಕೆ, ದಾಸ್ ಮತ್ತು ರಂಕಾ ಅವರನ್ನು ಬಂಧಿಸಲಾಯಿತು. ದೆಹಲಿ ಪೊಲೀಸ್ ಸಿಬ್ಬಂದಿಯ ತಂಡವು ಮೂವರನ್ನು ವಿಮಾನ ನಿಲ್ದಾಣದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿತು. ಮೂವರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
"ನೀವು ಈ ವೀಡಿಯೊವನ್ನು ನೋಡುತ್ತಿದ್ದರೆ, ಅಂದರೆ ಅಶುತೋಷ್, ಸೌರವ್ ಮತ್ತು ನನ್ನನ್ನು ಬಂಧಿಸಲಾಗಿದೆ. ನಮ್ಮ ನಂತರ, ಈ ಚಳುವಳಿಯನ್ನು ಅಜಿಂಕ್ಯ ಮುನ್ನಡೆಸುತ್ತಾರೆ. ದಯವಿಟ್ಟು ಅಜಿಂಕ್ಯ ಶಿಂಧೆಯನ್ನು ಬೆಂಬಲಿ, ಅವರು ಅಶುತೋಷ್, ಸೌರವ್ ಮತ್ತು ನನ್ನ ನಂತರ ಕಾಕ್ರೋಚ್ ಜನತಾ ಪಾರ್ಟಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ" ಎಂದು ದೀಪ್ಕೆ ವೀಡಿಯೊದಲ್ಲಿ ಹೇಳಿರುವುದು ವೈರಲ್ ಆಗಿದೆ.
ಯಾರು ಅಜಿಂಕ್ಯ ಶಿಂಧೆ ?
ಸಿಜೆಪಿಯ ರಾಷ್ಟ್ರೀಯ ಸಂಘಟನೆಯ ಉಸ್ತುವಾರಿ ತಂಡದಲ್ಲಿ ಅಜಿಂಕ್ಯ ಶಿಂಧೆ ಅವರು ಇದ್ದಾರೆ. ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ನಡೆದ ಪ್ರತಿಭಟನೆಯನ್ನು ಅಜಿಂಕ್ಯ ಶಿಂಧೆ ಅವರು ಸಂಘಟಿಸಿದ್ದರು. ಕಾಕ್ರೋಚ್ ಜನತಾ ಪಾರ್ಟಿಯ ಮುಂಬೈ ಪ್ರತಿಭಟನೆಯ ಪ್ರಮುಖ ಭಾಗವಾಗಿಯೂ ಗುರುತಿಸಿಕೊಂಡಿದ್ದರು.
ಗಾಂಧಿ ಜಯಂತಿಯಂದು ದಾದರ್‌ನಲ್ಲಿ ಅಕ್ರಮವಾಗಿ ಗುಂಪು ಸೇರಿ ಘೋಷಣೆಗಳನ್ನು ಕೂಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಜಿಂಕ್ಯ ಶಿಂಧೆ ಸೇರಿದಂತೆ ಸಿಜೆಪಿಯ ಹಲವು ನಾಯಕರು ಹೆಸರು ಕೇಳಿಬಂದಿತ್ತು. ಅವರಲ್ಲಿ ಅಭಿಜೀತ್ ದೀಪ್ಕೆ, ಪ್ರಣವ್ ಅಹಿರೆ, ಆಶುತೋಷ್ ರಂಕಾ, ಸೌರವ್ ದಾಸ್, ಅಫ್ರೀನ್ ನವಾಜ್, ಸೌಮ್ಯ ಕೊರ್ಡೆ, ಅಂಕಿತ್ ಭಾರದ್ವಾಜ್, ವಿಜಯ್ ಮಾಲಂಗಿ ಮತ್ತು ಯೋಗೇಶ್ ಇಂಗಲೆ ಅವರು ಸಹ ಇದ್ದರು. ಈ ನಾಯಕರೊಂದಿಗೆ 400ಕ್ಕೂ ಹೆಚ್ಚು ಬೆಂಬಲಿಗರ ಹೆಸರೂ ಪ್ರಕರಣದಲ್ಲಿ ಉಲ್ಲೇಖವಾಗಿದೆ.
ಸಿಜೆಪಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುತ್ತಿರುವ ಶಿಂಧೆ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು 23,200ಕ್ಕೂ ಹೆಚ್ಚು ಜನ ಫಾಲೋ ಮಾಡುತ್ತಿದ್ದಾರೆ. ದೇಶಾದ್ಯಂತ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಸಿಜೆಪಿ ಆರಂಭಿಸಿರುವ 'ಸ್ಕೂಲ್ ಠೀಕ್ ಕರೋ' ಅಭಿಯಾನವನ್ನು ಮುನ್ನಡೆಸಿದ ನಾಯಕರಲ್ಲಿ ಅಜಿಂಕ್ಯ ಶಿಂಧೆ ಕೂಡ ಒಬ್ಬರು.
ಅಭಿಜೀತ್ ದೀಪ್ಕೆ ಅವರ ಅಜ್ಜಿ ನಿಧನ
ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ಅವರ ಅಜ್ಜಿ ಮಹಾರಾಷ್ಟ್ರದಲ್ಲಿ ಮೃತಪಟ್ಟಿದ್ದಾರೆ, ಅವರನ್ನು ದೆಹಲಿಯಲ್ಲಿ ಪೊಲೀಸ್ ವಶದಲ್ಲಿ ಇರಿಸಲಾಗಿತ್ತು. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಐ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿ 85ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕುಟುಂಬದ ಸ್ಥಳೀಯ ಗ್ರಾಮದಲ್ಲಿ ಶನಿವಾರ ನಿಧನರಾದರು, ಯೋಜಿತ ಪ್ರತಿಭಟನೆಗಾಗಿ ರಾಜಧಾನಿಗೆ ಆಗಮಿಸಿದಾಗ ದೆಹಲಿ ಪೊಲೀಸರು ಅವರನ್ನು ಬಂಧಿಸಿದ ನಂತರ ಅವರನ್ನು ಬಂಧನದಲ್ಲಿರಿಸಲಾಗಿತ್ತು.


Click it and Unblock the Notifications
