Arvind Kejriwal: ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ; ಸಿಬಿಐಗೆ ನೋಟಿಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್
ನವದೆಹಲಿ, ಜುಲೈ. 05: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ (ಜುಲೈ. 05) ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ಜಾರಿ ಮಾಡಿದೆ.
ನ್ಯಾಯಾಲಯ ವಿಚಾರಣೆ ಆರಂಭದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜಾಮೀನು ಅರ್ಜಿ ಬಗ್ಗೆ ಮೊದಲು ನಗರದ ನ್ಯಾಯಾಲಯವನ್ನು ಸಂಪರ್ಕಿಸಬೇಕಿತ್ತು ಎಂಬ ಸಿಬಿಐ ವಾದವನ್ನು ಹೈಕೋರ್ಟ್ ಒಪ್ಪಿಕೊಂಡಿತು. ಆದರೆ, ವಾದದ ಸಮಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್‌ಗೆ ನೇರವಾಗಿ ಮೇಲ್ಮನವಿ ಸಲ್ಲಿಸಿದ ಅರ್ಹತೆಯನ್ನು ಪರಿಗಣಿಸಲು ಪೀಠವು ನಂತರ ನಿರ್ಧರಿಸಿತು.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. ಈ ಬಗ್ಗೆ ಎಎಪಿ ನಾಯಕ ದೆಹಲಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಎಎಪಿ ನಾಯಕ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವುದು ಅಪಾಯವಲ್ಲ ಮತ್ತು ಅವರು ಭಯೋತ್ಪಾದಕನಲ್ಲ ಎಂದು ಹೇಳಿದ್ದಾರೆ. ಜೊತೆಗೆ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಸಿಬಿಐ ಅವರನ್ನು ಬಂಧಿಸಿದೆ ಎಂದು ವಾದಿಸಿದರು.

"ಅರ್ಜಿ ಸ್ವೀಕರಿಸಲಾಗಿದೆ. ಅರ್ಜಿದಾರರು ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ, ಈ ಪ್ರಕರಣವನ್ನು ವಾದದ ಸಮಯದಲ್ಲಿ ಪರಿಗಣಿಸಲಾಗುವುದು" ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ನ್ಯಾಯಾಲಯವು ಜುಲೈ 17 ರಂದು ಹೆಚ್ಚಿನ ವಿಚಾರಣೆಗೆ ಪಟ್ಟಿ ಮಾಡಿತು.
ಸಿಬಿಐ ಪ್ರಕರಣದಲ್ಲಿ ಅವರ ಬಂಧನವನ್ನು ಎಎಪಿ ಮುಖ್ಯಸ್ಥರು ಈಗಾಗಲೇ ಪ್ರಶ್ನಿಸಿದ್ದಾರೆ. ಹೈಕೋರ್ಟ್‌ನಲ್ಲಿ ಅರ್ಜಿ ಬಾಕಿ ಉಳಿದಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ಸಿಬಿಐ ಬಂಧಿಸಿದ್ದು, ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಹಿಂದೆ, ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಜೂನ್ 20 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜಾಮೀನು ನೀಡಲಾಗಿತ್ತು. ಆದರೆ, ಹೈಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ. ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಜುಲೈ 12ರವರೆಗೆ ವಿಚಾರಣಾ ನ್ಯಾಯಾಲಯ ವಿಸ್ತರಿಸಿದೆ.












Click it and Unblock the Notifications