Delhi Election: ದೆಹಲಿ ಚುನಾವಣೆ ಗೆಲ್ಲೋದ್ಯಾರು ಎಂದು ಹೇಳಿದ ಸಟ್ಟಾ ಬಜಾರ್!
ದೆಹಲಿ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮೂರನೇ ಬಾರಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದ್ದರೆ, ಬಿಜೆಪಿ ದೆಹಲಿ ಕೋಟೆಯನ್ನು ಗೆಲ್ಲಲು ಭರ್ಜರಿ ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಕೂಡ ಎರಡೂ ಪಕ್ಷಗಳಿಗೆ ಶಾಕ್ ಕೊಡುವ ಉತ್ಸಾಹದಲ್ಲಿದೆ.
27 ವರ್ಷಗಳ ಬಳಿಕ ದೆಹಲಿ ಗದ್ದುಗೆ ಹಿಡಿಯಲು ಬಿಜೆಪಿ ಮತದಾರರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. 2013 ರಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸತತ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡುತ್ತಿದೆ.

ಆಮ್ ಆದ್ಮಿ ಪಕ್ಷ ನೀಡಿರುವ ಕೊಡುಗೆಗಳನ್ನು ಟೀಕಿಸುತ್ತಲೇ ಬಂದಿದ್ದ ಬಿಜೆಪಿ ಇದೀಗ ತಾನು ಕೂಡ ಹಲವು ಉಚಿತ ಘೋಷಣೆಗಳನ್ನು ಮಾಡಿದ್ದಲ್ಲದೆ, ಈಗ ಇರುವ ಯೋಜನೆಗಳನ್ನು ಮುಂದುವರೆಸುವುದಾಗಿ ತಿಳಿಸಿದೆ. ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ಇದೀಗ ಇಲ್ಲಿ ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ
ರಾಜಸ್ಥಾನದ ಪ್ರಮುಖ ಬೆಟ್ಟಿಂಗ್ ಮಾರುಕಟ್ಟೆಯಾಗಿರುವ ಫಲೋಡಿ ಸಟ್ಟಾ ಬಜಾರ್ ದೆಹಲಿ ವಿಧಾನಸಭಾ ಚುನಾವಣೆ ಬಗ್ಗೆ ತನ್ನ ಮುನ್ಸೂಚನೆಯನ್ನು ನೀಡಿದೆ. ಈ ಮೊದಲೇ ಫಲೋಡಿ ಸಟ್ಟಾ ಬಜಾರ್ ಗೆಲುವಿನ ಅಂಕಿ ಅಂಶಗಳನ್ನು ನೀಡಿತ್ತು ಅದರ ಪ್ರಕಾರ 70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 36 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುತ್ತದೆ ಎಂದು ತಿಳಿಸಿತ್ತು. ಈಗ ಮತ್ತೊಮ್ಮೆ ಮುನ್ಸೂಚನೆ ನೀಡಿದ್ದು ಈ ಬಾರಿ ಅಂಕಿ ಸಂಖ್ಯೆಗಳನ್ನು ಬದಲಾಯಿಸಿದೆ.
ಫಲೋಡಿ ಸಟ್ಟಾ ಬಜಾರ್ ಪ್ರಕಾರ ಈ ಬಾರಿ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 39 ರಿಂದ 41 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು ಸರಳ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡುತ್ತದೆ ಎಂದು ಹೇಳಿದೆ. ಬಿಜೆಪಿ ಪಕ್ಷ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದ್ದು 29 ರಿಂದ 31 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದೆ. ಕಳೆದ ಬಾರಿಗಿಂತ ಹೆಚ್ಚಿಗೆ ಸ್ಥಾನ ಗೆದ್ದರೂ ಸರ್ಕಾರ ರಚಿಸುವ ಬಿಜೆಪಿ ಕನಸು ಈ ನನಸಾಗುವುದು ಅನುಮಾನವಾಗಿದೆ.
ಕಾಂಗ್ರೆಸ್ ಕೂಡ ಎಲ್ಲಾ 70 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೂ ಈ ಬಾರಿ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದು ಕೂಡ ಕಷ್ಟವಿದೆ ಎಂದು ಸಟ್ಟಾ ಬಜಾರ್ ಮುನ್ಸೂಚನೆ ಕೊಟ್ಟಿದೆ. ಒಂದು ವೇಳೆ ಅದು ನಿಜವಾದರೆ ಕಾಂಗ್ರೆಸ್‌ಗೆ ಅದಕ್ಕಿಂತ ದೊಡ್ಡ ಅವಮಾನಕರ ಸೋಲು ಎದುರಾಗಲಿದೆ.












Click it and Unblock the Notifications