Delhi Election 2025: ಚುನಾವಣೆ ದಿನಾಂಕ, ಫಲಿತಾಂಶ ಸೇರಿ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ!
ದೆಹಲಿ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ದೆಹಲಿ ಚುನಾವಣೆ ಕಣ ಈ ಬಾರಿ ಕುತೂಹಲದಿಂದ ಕೂಡಿದೆ. ಚುನಾವಣೆ ದಿನಾಂಕ, ಚುನಾವಣೆ ರಿಸಲ್ಟ್ ಹಾಗೂ ಈ ಬಾರಿಯ ಚುನಾವಣೆಯ ಇಂಟ್ರಸ್ಟಿಂಗ್ ವಿವರ ನೋಡೋಣ. ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ಕ್ಕೆ ನಡೆಯಲಿದೆ.
ಮದ್ಯನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಜೈಲು ಸೇರಿದ ಮೇಲೆ ದೆಹಲಿ ರಾಜಕೀಯದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುತ್ತಿವೆ. ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಕಣದಲ್ಲಿ ಇವೆ. ಬಿಜೆಪಿ - ಎಎಪಿಯಲ್ಲಿ ಯಾವುದಾದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವಷ್ಟು ಪೈಪೋಟಿ ಈ ಪಕ್ಷಗಳ ನಡುವೆ ಇದೆ. ದೆಹಲಿ ಚುನಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ದೆಹಲಿ ವಿಧಾನಸಭೆ ಚುನಾವಣೆ ಈ ಬಾರಿ ಭಾರೀ ಪೈಪೋಟಿಯಿಂದ ಕೂಡಿದೆ. ಎಎಪಿ, ಕಾಂಗ್ರೆಸ್, ಬಿಜೆಪಿಯ ಘಟಾನುಘಟಿ ನಾಯಕರು ಚುನಾವಣೆಯ ಕಣದಲ್ಲಿ ಇದ್ದಾರೆ. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು ಇದರ ಮ್ಯಾಜಿಕ್ ಸಂಖ್ಯೆ 36 ಆಗಿದೆ. ದೆಹಲಿಯಲ್ಲಿ ಕಳೆದ 10 ವರ್ಷಗಳಿಂದಲೂ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ (ಕೇಂದ್ರಾಡಳಿತ ಪ್ರದೇಶ)ದ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ಇದೆ.
ಕಳೆದ ಎರಡು ಅವಧಿಯಿಂದಲೂ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿ ಇದೆ. ಭ್ರಷ್ಟಾಚಾರ ಆರೋಪ ಹಾಗೂ ಮದ್ಯ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಾರ್ಟಿ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲು ಸೇರಿದ್ದು. ಸಚಿವರು ಜೈಲು ಸೇರಿದ್ದು ಎಎಪಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಫೆಬ್ರವರಿ 8ಕ್ಕೆ ತಿಳಿಯಲಿದೆ.

ಬಿಜೆಪಿ ಇಲ್ಲಿ ಕಳೆದ 25 ವರ್ಷಗಳಿಂದ ಆಡಳಿತ ನಡೆಸಿಲ್ಲ. ಸುದೀರ್ಘ ಅವಧಿಯ ನಂತರ ದೆಹಲಿ ಆಡಳಿತ ನಡೆಸುವ ಕನಸು ಕಾಣುತ್ತಿದೆ. 15 ವರ್ಷ ನಿರಂತರ ಆಡಳಿತ ನಡೆಸಿದ ಕಾಂಗ್ರೆಸ್ ಸಹ ಮತ್ತೆ ಆಡಳಿತ ನಡೆಸಲು ತನ್ನ ಮಿತ್ರ ಪಕ್ಷ ಎಎಪಿಯೊಂದಿಗೇ ತಿರುಗಿ ಬಿದ್ದಿದೆ. ಎಲ್ಲಾ ಕುತೂಹಲಗಳಿಗೂ ಫೆಬ್ರವರಿ 8ರಂದು ಉತ್ತರ ಸಿಗಲಿದೆ.
ದೆಹಲಿ ಚುನಾವಣೆ ಯಾವಾಗ ?
ದೆಹಲಿಯಲ್ಲಿ ಫೆಬ್ರವರಿ 5ಕ್ಕೆ ಬುಧವಾರ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ದೆಹಲಿ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 36 ಆಗಿದೆ. ಕಳೆದ ಬಾರಿ ದೆಹಲಿಯಲ್ಲಿ 62 ಸ್ಥಾನಗಳಲ್ಲಿ ಆಮ್ ಆದ್ಮಿ ಪಾರ್ಟಿ ಗೆದ್ದಿತ್ತು. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು. ಕಾಂಗ್ರೆಸ್ ಈ ಬಾರಿಯೂ ದೆಹಲಿಯಲ್ಲಿ ಹೆಚ್ಚು ಪೈಪೋಟಿ ಕೊಡುತ್ತಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ ಮುಂದೆ ಎಎಪಿಗೆ ಬಹುಮತ ಬರದೆ ಇದ್ದರೆ ಅಲ್ಲೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯೂ ಇದೆ.
ದೆಹಲಿ ಚುನಾವಣೆಯ ಸಮಯ
ಫೆಬ್ರವರಿ 5ರ (ಬುಧವಾರ) ಬೆಳಿಗ್ಗೆ 7:00 ರಿಂದ ಸಂಜೆ 6:00ಯ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತಗಟ್ಟೆ ಕೇಂದ್ರದಲ್ಲಿ ಇರುವವರಿಗೆ 6.30ರ ವರೆಗೆ ಮತದಾನ ಮಾಡುವುದಕ್ಕೆ ಅವಕಾಶ ಇರಲಿದೆ.
ದೆಹಲಿ ಚುನಾವಣೆ 2025: ಚುನಾವಣೆ ಫಲಿತಾಂಶ/ ಮತದಾನೋತ್ತರ ಸಮೀಕ್ಷೆ ವಿವರ
ದೆಹಲಿ ಮತ ಎಣಿಕೆಯನ್ನು ಫೆಬ್ರವರಿ 8ರಂದು ನಡೆಯಲಿದೆ. ಚುನಾವಣಾ ಆಯೋಗ ಫೆಬ್ರವರಿ 8ಕ್ಕೆ ಫಲಿತಾಂಶವನ್ನು ಘೋಷಿಸಲಿದೆ.












Click it and Unblock the Notifications