Delhi Blast: ದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ಸ್ಫೋಟ: ಸ್ಥಳದಲ್ಲಿ ಆತಂಕದ ವಾತಾವರಣ!
ದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ಭಾನುವಾರ ಬೆಳಿಗ್ಗೆ ಭಾರಿ ಸ್ಫೋಟವೊಂದು ಸಂಭವಿಸಿದ ಆಘಾತಕಾರಿ ಘಟನೆ ನಡೆದಿದೆ. ಬೆಳಿಗ್ಗೆ 7:30 ರ ಸುಮಾರಿಗೆ ನಿವಾಸಿಗಳು ಸ್ಪೋಟದ ಶಬ್ದದಿಂದ ಬೆಚ್ಚಿಬಿದ್ದಿದ್ದಾರೆ. ಬಳಿಕ ಸ್ಪೋಟದ ಹೊಗೆ ಆಕಾಶದೆತ್ತರಕ್ಕೆ ಹೋಗುವುದು ಕಂಡು ಬಂದಿದೆ.
ಇದು ಮಾತ್ರವಲ್ಲದೆ ಕಟುವಾದ ವಾಸನೆಯೂ ಸಹ ಹರಡಿದೆ. ಇದರಿಂದ ಜನರು ಉಸಿರಾಡಲು ಕಷ್ಟಪಟ್ಟಿದ್ದಾರೆ. ಅದೃಷ್ಟವಶಾತ್ ಸ್ಫೋಟದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ. ಸ್ಪೋಟ ಭಾನುವಾರ ಸಂಭವಿಸಿದ್ದರಿಂದ ಯಾವುದೇ ಅಪಾಯ ಉಂಟಾಗಿಲ್ಲ.

ದೆಹಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಾಲೆಯ ಬಳಿ ಈ ಘಟನೆ ಸಂಭವಿಸಿದೆ. ಸ್ಫೋಟ ಸಂಭವಿಸಿದ ತಕ್ಷಣ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ದೆಹಲಿ ಪೊಲೀಸ್, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡ ಮತ್ತು ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಏಜೆನ್ಸಿಗಳು ಸ್ಥಳಕ್ಕೆ ಧಾವಿಸಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸ್ಫೋಟದ ತೀವ್ರತೆ ಚಿಕ್ಕದಾಗಿದೆ. ತಕ್ಷಣವೇ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಸ್ಪೋಟದಿಂದ ಹೊರಬಂದ ಬಿಳಿ ಪುಡಿ
ಸಿಆರ್‌ಪಿಎಫ್ ಶಾಲೆಯ ಬಳಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ವಾಹನಗಳು ಮತ್ತು ಮನೆಗಳ ಗಾಜುಗಳಿಗೆ ಹಾನಿಯಾಗಿದೆ. ಸ್ಥಳದಲ್ಲಿ ಗೋಡೆಯ ಉದ್ದಕ್ಕೂ ಬಿಳಿ ಪುಡಿಯ ಅವಶೇಷಗಳು ಪತ್ತೆಯಾಗಿದ್ದು, ಘಟನೆಯ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಫೋಟದ ಕಾರಣವನ್ನು ಕಂಡುಹಿಡಿಯಲು ತಜ್ಞರ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರೋಹಿಣಿ ಡಿಸಿಪಿ ಅಮಿತ್ ಗೋಯಲ್ ಹೇಳಿದ್ದಾರೆ.

'ಕಚ್ಚಾ ಬಾಂಬ್' ಬಳಸಲಾಗಿದೆಯೇ?
ಸ್ಫೋಟಕ್ಕೆ ಬಳಸಲಾದ ವಸ್ತುವು ಕಚ್ಚಾ ಬಾಂಬ್‌ನಂತೆ ಕಾಣುತ್ತದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಪೊಲೀಸ್ ಪಿಆರ್‌ಒ ಸಂಜಯ್ ತ್ಯಾಗಿ ಈ ಬಗ್ಗೆ ಮಾತನಾಡಿ, "ಇಂದು ಬೆಳಿಗ್ಗೆ ಪಿಎಸ್ ಪ್ರಶಾಂತ್ ವಿಹಾರ್ ಅವರು ಸಿಆರ್‌ಪಿಎಫ್ ಶಾಲೆಯ ಬಳಿ ಭಾರೀ ಸ್ಫೋಟದ ಬಗ್ಗೆ ಮಾಹಿತಿ ಪಡೆದರು.
ಪೊಲೀಸ್ ತಂಡವು ತಕ್ಷಣ ಸ್ಥಳಕ್ಕೆ ತಲುಪಿದಾಗ ದುರ್ವಾಸನೆ ಕಂಡುಬಂದಿದೆ. ಶಾಲೆಯ ಆವರಣದಲ್ಲಿ ಕಿಟಕಿ, ಗಾಜುಗಳು ಒಡೆದಿವೆ. ಫೋರೆನ್ಸಿಕ್ ವಿಭಾಗದ ನಮ್ಮ ತಜ್ಞರು ಸ್ಥಳಕ್ಕೆ ತಲುಪಿದ್ದಾರೆ ಮತ್ತು ವಿಶೇಷ ಸೆಲ್ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ನಿರ್ಣಾಯಕ ಹೇಳಿಕೆ ನೀಡುವುದು ಸರಿಯಲ್ಲ'' ಎಂದಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಿಂದ ಸತ್ಯ ಬಯಲು
ಈ ಘಟನೆಯ ಕುರಿತು ಸಮಗ್ರ ಪೊಲೀಸ್ ತನಿಖೆ ಮುಂದುವರಿದಿದೆ. ದೆಹಲಿ ಪೊಲೀಸರ ವಿಶೇಷ ಸೆಲ್ ತಂಡಗಳು ಭಯೋತ್ಪಾದನಾ ನಿಗ್ರಹ ಘಟಕದೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿವೆ. ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಾಗುವ ನಿರೀಕ್ಷೆ ಇದ್ದು, ಎಫ್‌ಎಸ್‌ಎಲ್ ವರದಿಯ ನಂತರ ವಿಶೇಷ ಘಟಕಕ್ಕೆ ಹಸ್ತಾಂತರಿಸಲಾಗುವುದು. ಇದಲ್ಲದೇ ಎನ್ ಎಸ್ ಜಿ ಕೂಡ ಅಲರ್ಟ್ ಆಗಿದ್ದು, ಸ್ಥಳಕ್ಕೆ ತಂಡವನ್ನು ಕಳುಹಿಸಿದೆ.
ಸಿಆರ್‌ಪಿಎಫ್ ಶಾಲೆಯ ಬಳಿ ಹಲವು ಅಂಗಡಿಗಳಿರುವುದರಿಂದ ಸಿಲಿಂಡರ್ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ ಮತ್ತು ಸ್ಫೋಟದ ಸ್ವರೂಪ ತಿಳಿದಿಲ್ಲ. ಸಿಆರ್‌ಪಿಎಫ್ ಶಾಲೆಯ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಈ ಹಿನ್ನೆಲೆಯಲ್ಲಿ ಹಲವು ತಜ್ಞರ ತಂಡಗಳನ್ನು ಒಳಗೊಂಡ ಸಂಪೂರ್ಣ ತನಿಖೆಯನ್ನು ಆರಂಭಿಸಲಾಗಿದೆ.












Click it and Unblock the Notifications