Delhi Elections: ದೆಹಲಿ ವಿಧಾನಸಭೆ ಚುನಾವಣೆ ಸನ್ನಿಹಿತ: ಎಎಪಿ ಭದ್ರಕೋಟೆಗೆ ನುಗ್ಗುವುದಕ್ಕೆ ಬಿಜೆಪಿ ರೆಡಿ!
ದೇಶದಲ್ಲಿ ಇನ್ನೊಂದು ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಆಮ್ ಆದ್ಮಿ ಪಾರ್ಟಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಆಮ್ ಆದ್ಮಿ ಪಾರ್ಟಿ (ಎಎಪಿ) ಹೇಳಿದೆ. ಹೀಗಾಗಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಿದೆ. ಆದರೆ, ಇಲ್ಲಿ ಬಿಜೆಪಿ ಹಾಗೂ ಎಎಪಿಯ ನಡುವೆಯೇ ಭಾರೀ ಪೈಪೋಟಿ ಇದೆ. ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು. ಹರಿಯಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗೆಲುವು ಹಾಗೂ ಜಾರ್ಖಂಡ್‌ನಲ್ಲಿ ಉತ್ತಮ ಸ್ಥಾನವನ್ನು ಗಳಿಸಿದ ಖುಷಿಯಲ್ಲಿ ಬಿಜೆಪಿ ಇದೆ.
ಇದೇ ಹುಮ್ಮಸ್ಸಿನಲ್ಲಿ ಬಿಜೆಪಿ ಪಕ್ಷವು ಇದೀಗ ದೆಹಲಿ ವಿಧಾನಸಭೆ ಚುನಾವಣೆಗೆ ನುಗ್ಗಿದೆ. ಹೇಳಿ ಕೇಳಿ ದೆಹಲಿ ಎಎಪಿಯ ಭದ್ರಕೋಟೆ ದೆಹಲಿಯಿಂದಲೇ ಎಎಪಿಯ ರಾಜಕೀಯ ಭವಿಷ್ಯ ಶುರುವಾಯಿತು. ಇದಾದ ಮೇಲೆ ಪಂಜಾಬ್‌ನಲ್ಲೂ ಅಧಿಕಾರಕ್ಕೆ ಬರುವಲ್ಲಿ ಎಎಪಿ ಯಶಸ್ವಿಯಾಯಿತು. ಹರಿಯಾಣದಲ್ಲೂ ಮಿಂಚಲಿದೆ ಎನ್ನುವಷ್ಟರಲ್ಲಿ ಎಎಪಿ ಲೆಕ್ಕಾಚಾರಗಳು ತಲೆಕೆಳಗಾಯಿತು. ಮದ್ಯ ನೀತಿ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಹಾಗೂ ಸಚಿವರು ಜೈಲು ಸೇರಿದರು. ಇದು ಎಎಪಿಗೆ ಭಾರೀ ಹಿನ್ನಡೆಯನ್ನು ಉಂಟು ಮಾಡಿದೆ. ಅಲ್ಲದೇ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಇದೇ ವಿಷಯವನ್ನು ಇರಿಸಿಕೊಂಡು ಚುನಾವಣೆ ಅಖಾಡಕ್ಕೆ ಧುಮುಕಲು ಬಿಜೆಪಿ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಎಎಪಿಯ ಭದ್ರಕೋಟೆ ಅಂತಲೇ ಖ್ಯಾತಿ ಗಳಿಸಿರುವ ದೆಹಲಿಯಲ್ಲಿ ಈ ಬಾರಿ ಆಮ್ ಆದ್ಮಿ ಪಾರ್ಟಿಗೆ ಪೂರಕ ಹಾಗೂ ಒಳ್ಳೆಯ ವಾತಾವರಣ ಇಲ್ಲ. ಎಎಪಿಯ ನಾಯಕರು ಜೈಲು ಸೇರಿದ್ದು, ಮಳೆ ಅನಾಹುತದಿಂದ ದೆಹಲಿಯಲ್ಲಿ ಸಮಸ್ಯೆ ಆಗಿದ್ದು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಸೇರಿದಂತೆ ಹಲವು ಆಡಳಿತ ವಿರೋಧಿ ಅಲೆ ಎಎಪಿಗೆ ಇದೆ. ಇದೆಲ್ಲವೂ ಈ ಬಾರಿ ಬಿಜೆಪಿಗೆ ಪ್ಲಸ್ ಪಾಯಿಂಟ್ಸ್ ಆಗಲಿದ್ದು, ಬಿಜೆಪಿ ಪಕ್ಷವು ಎಎಪಿ ಮಾಡಿದೆ ಎನ್ನಲಾಗಿರುವ ಭ್ರಷ್ಟಾಚಾರ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಅಖಾಡಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಒಂದು ದಶಕದಿಂದ ಎಎಪಿ ದೆಹಲಿಯಲ್ಲಿ ಆಡಳಿತ ನಡೆಸುತ್ತಿದೆ. ಆದರೆ, ದೆಹಲಿ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರಿದೆ. ದೆಹಲಿ ನಿಜಕ್ಕೂ ಗ್ಯಾಸ್ ಚೇಂಬರ್‌ನಂತೆ ಬದಲಾಗಿದೆ. ಇನ್ನು ರಾಷ್ಟ್ರ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿ ಸಣ್ಣ ವಿಧಾನಸಭೆಯನ್ನು ಹೊಂದಿದೆ. 70 ಜನ ವಿಧಾನಸಭಾ ಸದಸ್ಯರ ಸಾಮರ್ಥ್ಯ ದೆಹಲಿಗೆ ಇದೆ. ಕಳೆದ ಬಾರಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯು ಬರೋಬ್ಬರಿ 62 ಸೀಟುಗಳಲ್ಲಿ ಗೆದಿತ್ತು. ಕಾಂಗ್ರೆಸ್ ಸೊನ್ನೆ ಸುತ್ತಿತ್ತು.

2025ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. ಈ ಸಂಬಂಧ ಇನ್ನಷ್ಟೇ ಭಾರತೀಯ ಚುನಾವಣಾ ಆಯೋಗ ಮಾಹಿತಿ ಹಂಚಿಕೊಳ್ಳಬೇಕಿದೆ. ಈಗಾಗಲೇ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ. ಕಳೆದು ಹೋಗಿರುವ ವರ್ಚಸ್ಸು ಮರಳಿ ಪಡೆಯುವುದು ಹಾಗೂ ಅಧಿಕಾರ ಉಳಿಸಿಕೊಳ್ಳುವ ಎರಡೂ ಸವಾಲು ಎಎಪಿಯ ಮುಂದಿದೆ.












Click it and Unblock the Notifications