Delhi Assembly Election 2025: 26 ವರ್ಷಗಳ ಬಳಿಕ ಅಧಿಕಾರ ಪಡೆಯಲು ಬಿಜೆಪಿ ಕಸರತ್ತು
ನವದೆಹಲಿ, ಜನವರಿ 28: ದೆಹಲಿ ವಿಧಾನಸಭೆ ಚುನಾವಣೆ-2025ರ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಫೆಬ್ರವರಿ 5ರಂದು 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಎದುರಾಳಿಗಳು.
ಸದ್ಯದ ಮಾಹಿತಿ ಪ್ರಕಾರ ದೆಹಲಿ ಚುನಾವಣೆ ಎಎಪಿ, ಬಿಜೆಪಿ ನಡುವಿನ ಹಣಾಹಣಿಯಾಗಿದೆ. ಎಎಪಿ 2015, 2020ರ ಚುನಾವಣೆಯಲ್ಲಿ ಗೆದ್ದಿದೆ. ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. ಆದರೆ ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂದು ಬಿಜೆಪಿ ಹೇಳಿದ್ದು, ಅಧಿಕಾರ ಪಡೆಯಲು ತಂತ್ರ ರೂಪಿಸಿದೆ.

26 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಪಡೆಯಲು ಬಿಜೆಪಿ ಚುನಾವಣಾ ಪ್ರಚಾರದಲ್ಲಿ 'ಪರಿವರ್ತನ್' ಎಂಬ ಘೋಷವಾಕ್ಯ ಬಳಕೆ ಮಾಡುತ್ತಿದೆ. ದೆಹಲಿಯಲ್ಲಿ ಬಿಜೆಪಿ 1993 ರಿಂದ 1998ರ ತನಕ ಅಧಿಕಾರ ನಡೆಸಿತ್ತು. ಮೂವರು ಮುಖ್ಯಮಂತ್ರಿಗಳನ್ನು ಕಂಡಿತ್ತು.
ಎಎಪಿಗೆ ಪ್ರತಿಷ್ಠೆ: ಭ್ರಷ್ಟಾಚಾರ ಆರೋಪ, ಅರವಿಂದ ಕೇಜ್ರಿವಾಲ್ ಸೇರಿದಂತೆ ನಾಯಕರ ಜೈಲುವಾಸದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಆದ್ದರಿಂದ 2025ರ ಚುನಾವಣೆ ಎಎಪಿ ಪಾಲಿಗೆ ಪ್ರತಿಷ್ಠೆ, ಮಾಡು ಇಲ್ಲವೇ ಮಡಿ ಎಂಬ ಹೋರಾಟವಾಗಿದೆ.
ಈ ಬಾರಿ ದೆಹಲಿಯಲ್ಲಿ ಅಧಿಕಾರ ಪಡೆಯಲು ಸರಿಯಾದ ಸಮಯ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ. 70 ಸೀಟುಗಳ ಪೈಕಿ 68 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಸೀಟುಗಳನ್ನು ಎನ್‌ಡಿಎ ಮಿತ್ರಪಕ್ಷ ಜೆಡಿಯುಗೆ ಬಿಟ್ಟುಕೊಡಲಾಗಿದೆ.
ದೆಹಲಿ ಅಬಕಾರಿ ನೀತಿ ಹಗರಣ, ಎಎಪಿ ವಿರುದ್ಧ ಆಡಳಿತ ವಿರೋಧಿ ಅಲೆ ಪಕ್ಷಕ್ಕೆ ಸಹಾಯಕವಾಗಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಇವೆ. ಅರವಿಂದ ಕೇಜ್ರಿವಾಲ್ 10 ವರ್ಷದ ಆಡಳಿತವನ್ನು ಎಎಪಿ ನಂಬಿಕೊಂಡಿದೆ. ಬಿಜೆಪಿ ನರೇಂದ್ರ ಮೋದಿ ಆಡಳಿತ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ.
'ಫಿರ್ ಲೆಯೇಂಗೆ ಕೇಜ್ರಿವಾಲ್' ಎಂಬ ಹಾಡಿನ ಮೂಲಕ ಎಎಪಿ ಚುನಾವಣಾ ಪ್ರಚಾರ ಆರಂಭಿಸಿದೆ. 'ಇಂಡಿಯಾ' ಮೈತ್ರಿಕೂಟದ ಮಿತ್ರಪಕ್ಷವಾದ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳದೇ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿದೆ. ಎಎಪಿ ಭ್ರಷ್ಟಾಚಾರದ ಆರೋಪವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣಾ ಪ್ರಚಾರವನ್ನು ಕೈಗೊಂಡಿದೆ.
2012ರಲ್ಲಿ ಪಕ್ಷ ಸ್ಥಾಪನೆಯಾದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಎಪಿ ವೇಗವಾಗಿ ಬೆಳೆಯಿತು. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಾಗಿಸಿತು. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳಿಗೆ ಸರಿಯಾದ ಹೊಡೆತವನ್ನು ನೀಡಿದೆ. ಮೊದಲ ಚುನಾವಣೆಯಲ್ಲಿ ಎಎಪಿ 70 ಸೀಟುಗಳ ಪೈಕಿ 28 ಸೀಟುಗಳನ್ನು ಗೆದ್ದಿತ್ತು. ಬಿಜೆಪಿ 32, ಕಾಂಗ್ರೆಸ್ 8 ಸೀಟುಗಳಲ್ಲಿ ಗೆಲುವು ಸಾಧಿಸಿತು.
2015ರ ಚುನಾವಣೆಯಲ್ಲಿ ಎಎಪಿ 70ರ ಪೈಕಿ 67 ಸೀಟುಗಳಲ್ಲಿ ಜಯಗಳಿಸಿತು. ಬಿಜೆಪಿ 3 ಸೀಟು ಗೆದ್ದಿತು, ಕಾಂಗ್ರೆಸ್ ಯಾವುದೇ ಸೀಟುಗಳನ್ನು ಗೆಲ್ಲಲಿಲ್ಲ. 2020ರಲ್ಲಿ 62 ಸೀಟುಗಳಲ್ಲಿ ಎಎಪಿ ಜಯಗಳಿಸಿತು. ಬಿಜೆಪಿ 8 ಸೀಟುಗಳನ್ನು ಗೆದ್ದಿತು. ಆದರೆ ಕಾಂಗ್ರೆಸ್ ಪುನಃ 1 ಸೀಟು ಗೆಲ್ಲಲು ವಿಫಲವಾಯಿತು.












Click it and Unblock the Notifications