Government Employee: ಸರ್ಕಾರಿ ನೌಕರರ ಡಿಎ ಏರಿಕೆ, ಕೇಂದ್ರ ಸರ್ಕಾರದ ಹಬ್ಬದ ಕೊಡುಗೆ
ನವದೆಹಲಿ, ಅಕ್ಟೋಬರ್ 16: ದೀಪಾವಳಿ ಹಬ್ಬದ ಎದುರಿರುವಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಬಂಪರ್ ಕೊಡಗೆ ನೀಡಿದೆ. ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಬುಧವಾರ ಕೇಂದ್ರ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದು, ದೀಪಾವಳಿ ಹಬ್ಬಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಸರ್ಕಾರಿ ನೌಕರರಿಗೆ ಉಡುಗೊರೆ ಕೊಟ್ಟಿದೆ. ಹಲವು ದಿನಗಳಿಂದ ಸರ್ಕಾರಿ ನೌಕರರ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದರು.
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧರಿಸಿ ಡಿಎ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ತೀರ್ಮಾನವನ್ನು ಮಾಡುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರ ತನ್ನ ನೌಕರರಿಗೆ ಹಣಕಾಸು ಸೌಲಭ್ಯವನ್ನು ಒದಗಿಸಲು ಈಗ ಡಿಎ ಹೆಚ್ಚಳ ಮಾಡಲು ತೀರ್ಮಾನ ಕೈಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಈ ಕುರಿತು ಆದೇಶ ಸಹ ಪ್ರಕಟವಾಗಲಿದೆ.

ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಲಾಗುತ್ತದೆ. 2024ರ ಮಾರ್ಚ್‌ನಲ್ಲಿ ಶೇ 4ರಷ್ಟು ಡಿಎ ಹೆಚ್ಚಳ ಮಾಡಲಾಗಿತ್ತು. ಅದು ಜನವರಿ 1, 2024ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿತ್ತು. ಈಗ ಅಕ್ಟೋಬರ್‌ನಲ್ಲಿ ಡಿಎ ಹೆಚ್ಚಿಸಲಾಗಿದೆ. ಇದು ಜುಲೈ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವ ನಿರೀಕ್ಷೆ ಇದೆ. ಆದೇಶದಲ್ಲಿ ಈ ಕುರಿತು ಸರ್ಕಾರ ಸ್ಪಷ್ಟವಾಗಿ ಹೇಳಲಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಡಿಎ ಹೆಚ್ಚಳದ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದರು. ದೀಪಾವಳಿಗೂ ಮುನ್ನ ಡಿಎ ಹೆಚ್ಚಳದ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂಬ ಮಾಹಿತಿ ಇತ್ತು. ಆದರೆ ಅಕ್ಟೋಬರ್ 9ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಮಾಡದಿರುವುದು ನಿರಾಸೆ ಮೂಡಿಸಿತ್ತು. ಈ ತಿಂಗಳ ಅಂತ್ಯದಲ್ಲಿ ದೀಪಾವಳಿ ಹಬ್ಬವಿದೆ. ಅದಕ್ಕೂ ಮೊದಲು ಡಿಎ ಹೆಚ್ಚಳದ ತೀರ್ಮಾನವಾಗಿದೆ.
ಈ ತೀರ್ಮಾನದಿಂದ ಸರ್ಕಾರಿ ನೌಕರರ, ಪಿಂಚಣಿದಾರರ ಮೂಲ ವೇತನದ ಡಿಎ ಶೇ 42 ರಿಂದ ಶೇ 45ಕ್ಕೆ ಏರಿಕೆಯಾಗಲಿದೆ. ಹಣದ ದುಬ್ಬರ, ಜೀವಾವಶ್ಯಕ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ಈ ತೀರ್ಮಾನ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಈಗ ರಾಜ್ಯಗಳು ಸಹ ತಮ್ಮ ನೌಕರರಿಗೆ ಡಿಎ ಹೆಚ್ಚಳ ಮಾಡುತ್ತದೆ.
ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟ ಹಣಕಾಸು ಖಾತೆ ಸಚಿವ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ದೀಪಾವಳಿ ಹಬ್ಬಕ್ಕೂ ಮುನ್ನ ಡಿಎ ಹೆಚ್ಚಳದ ಕುರಿತು ತೀರ್ಮಾನವನ್ನು ಕೈಗೊಂಡು, ಆದೇಶ ಹೊರಡಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿತ್ತು.
ಈ ಶೇ 3ರಷ್ಟು ಡಿಎ ಹೆಚ್ಚಳದ ಬಳಿಕ ಮಾಸಿಕ 18,000 ರೂ. ವೇತನ ಪಡೆಯುವ ಮೊದಲ ಹಂತದ ಕೇಂದ್ರ ಸರ್ಕಾರಿ ನೌಕರರ ವೇತನ 540 ರೂ. ಹೆಚ್ಚಾಗಲಿದೆ. ಅದು ಜುಲೈ 1, 2024ರಿಂದ ಜಾರಿಗೆ ಬರಲಿದೆ. ನೌಕರರ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನಕ್ಕೆ ಪೂರ್ವಾನ್ವಯವಾಗುವಂತೆ ಇದು ಜಾರಿಗೆ ಬರಲಿದೆ.
ಬುಧವಾರದ ಮತ್ತೊಂದು ಬೆಳವಣಿಗೆಯಲ್ಲಿ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ರಾಜ್ಯ ಸರ್ಕಾರಿ ನೌಕರರಿಗೆ ಶೇ 4ರಷ್ಟು ಡಿಎ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 1, 2024ರಿಂದ ಜಾರಿಗೆ ಬರುವಂತೆ 3.9 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ಇದು ಅನುಕೂಲವಾಗಲಿದೆ.











Click it and Unblock the Notifications