ಸೂರಜ್‌ಕುಂಡ್‌ನ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಮೃತದೇಹ
ಫರೀದಾಬಾದ್, ನವೆಂಬರ್ 25: ಶದ್ಧಾ ವಾಕರ್ ಹತ್ಯೆಯ ಶೈಲಿಯಲ್ಲೇ ಸಾವಿನ ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ಕೊಲೆ ಮಾಡಿದ ನಂತರದಲ್ಲಿ ಮೃತದೇಹಗಳನ್ನು ಕತ್ತರಿಸುವ ಪ್ರಕರಣಗಳು ಪತ್ತೆಯಾಗುತ್ತಿವೆ. ಅಂಥದ್ದೇ ಘಟನೆಯೊಂದು ಫರಿದಾಬಾದ್‌ನ ಸೂರಜ್‌ಕುಂಡ್‌ನ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹರ್ಯಾಣದ ಫರಿದಾಬಾದ್‌ನ ಸೂರಜ್‌ಕುಂಡ್‌ನ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಮೃತದೇಹದ ಭಾಗಗಳು ಕಂಡು ಬಂದಿವೆ. ಪೊಲೀಸರ ಪ್ರಕಾರ, ಚೆಕ್ ಪೋಸ್ಟ್ ಬಳಿಯ ಪೊದೆಗಳಲ್ಲಿ ಸೂಟ್‌ಕೇಸ್ ಪತ್ತೆಯಾಗಿದೆ. ದಾರಿಹೋಕರೊಬ್ಬರು ಸೂಟ್‌ಕೇಸ್ ಅನ್ನು ಗಮನಿಸಿ ಅದನ್ನು ಕಂಡು ಅನುಮಾನಾಸ್ಪದವಾಗಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಮತ್ತು ಗುರುತು ತಪ್ಪಿಸಲು ದೇಹದ ಒಂದು ಭಾಗವನ್ನು ಇಲ್ಲಿ ಎಸೆಯಲಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ ಎಂದು ಫರಿದಾಬಾದ್ ಪೊಲೀಸ್ ವಕ್ತಾರ ಸುಬೆ ಸಿಂಗ್ ಹೇಳಿದ್ದಾರೆ.

ದೇಹವು ಎಷ್ಟು ಕೊಳೆತಿದೆಯೆಂದರೆ ಅದು ಪುರುಷನದ್ದೋ ಅಥವಾ ಹೆಣ್ಣಿನದ್ದೋ ಎಂದು ನಾವು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವ್ಯಕ್ತಿಯನ್ನು ಬೇರೆಡೆ ಕೊಲೆ ಮಾಡಲಾಗಿದ್ದು, ಸೂಟ್‌ಕೇಸ್ ಅನ್ನು ಪೊದೆಯೊಳಗೆ ಬಚ್ಚಿಟ್ಟಿರುವಂತೆ ತೋರುತ್ತಿದೆ. ಸೂಟ್‌ಕೇಸ್‌ನೊಳಗೆ ಹೊಂದಿಕೊಳ್ಳುವಂತೆ ಕೈಕಾಲುಗಳನ್ನು ಕತ್ತರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸುಬೆ ಸಿಂಗ್ ತಿಳಿಸಿದ್ದಾರೆ.
ಮೃತದೇಹದ ಅವಶೇಷಗಳನ್ನು ಪ್ಲಾಸ್ಟಿಕ್ ಚೀಲ ಮತ್ತು ಗೋಣಿಚೀಲದಲ್ಲಿ ಸುತ್ತಿಡಲಾಗಿತ್ತು. ಸೂಟ್‌ಕೇಸ್ ಬಳಿ ಬಟ್ಟೆ ಮತ್ತು ಬೆಲ್ಟ್ ಪತ್ತೆಯಾಗಿದೆ. ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಅರಣ್ಯದಿಂದ ಆವರಿಸಿಕೊಂಡಿದೆ. ಈಗಾಗಲೇ "ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ನಾವು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದೇವೆ," ಎಂದು ಫರಿದಾಬಾದ್ ಪೊಲೀಸ್ ವಕ್ತಾರ ಸುಬೆ ಸಿಂಗ್ ಹೇಳಿದ್ದಾರೆ.
ಯಮುನಾ ಎಕ್ಸ್‌ಪ್ರೆಸ್‌ವೇ ಬಳಿಯೂ ಹೆಣವಿದ್ದ ಸೂಟ್‌ಕೇಸ್ ಪತ್ತೆ:
ಟ್ರಾಲಿ ಲಗೇಜ್‌ನಲ್ಲಿ ಪಾಲಿಥಿನ್‌ನಲ್ಲಿ ಸುತ್ತಿದ ಪರಿಯಲ್ಲಿ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಯುವತಿಯ ಶವ ಪತ್ತೆಯಾಗಿತ್ತು. ಕೊಲೆಯಾದ ಮಹಿಳೆಗೆ ಇಪ್ಪತ್ತರ ಆಸುಪಾಸಿನ ವಯಸ್ಸು ಎಂದು ಪೊಲೀಸರು ತಿಳಿಸಿದ್ದರು. ಆಕೆಯ ಮುಖದಲ್ಲಿ ರಕ್ತದ ಕಲೆಗಳಿದ್ದು, ಆಕೆಯ ದೇಹದಲ್ಲಿ ಗಾಯದ ಗುರುತುಗಳಿವೆ ಎಂದು ನವೆಂಬರ್ 21ರಂದು ಪೊಲೀಸರು ಮಾಹಿತಿ ನೀಡಿದ್ದರು.
ಹಂತಕರು ಆಕೆಯನ್ನು ಬೇರೆ ಯಾವುದೋ ಸ್ಥಳದಲ್ಲಿ ಹತ್ಯೆ ಮಾಡಿದ್ದಾರೆ. ನಂತರ ಕೊಂದ ಶವವನ್ನು ರಾತ್ರಿಯಲ್ಲಿ ಹೆಚ್ಚು ಟ್ರಾಫಿಕ್ ಕಾಣದ ಎಕ್ಸ್‌ಪ್ರೆಸ್‌ವೇ ಬಳಿ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಥುರಾದ ಬಳಿಯಿರುವ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಅಪರಿಚಿತ ಸೂಟ್‌ಕೇಸ್ ಅನ್ನು ನೋಡಿದ ಕಾರ್ಮಿಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸೂಟ್‌ಕೇಸ್ ಬಗ್ಗೆ ಅನುಮಾನಗೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ಮಹಿಳೆಯ ಮೃತದೇಹ ಇರುವುದು ಪತ್ತೆಯಾಗಿತ್ತು.












Click it and Unblock the Notifications