ಆನ್‌ಲೈನ್‌ನಲ್ಲಿ 5100 ರೂ. ಕಳುಹಿಸಿ ವೀಡಿಯೋ ಕಾಲ್‌ನಲ್ಲಿಯೇ ತಂದೆಯ ಅಂತ್ಯಕ್ರಿಯೆ ವೀಕ್ಷಿಸಿದ ಮೂವರು ಪುತ್ರಿಯರು
ಮಕ್ಕಳಿಗೆ ಉತ್ತಮ ಶಿಕ್ಷಣ, ಭವಿಷ್ಯಕ್ಕೊಂದು ಒಳ್ಳೆಯ ದಾರಿ ಮಾಡಿಕೊಡಲು ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟ ತಂದೆಯೊಬ್ಬರು ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆಯುವಂತಾಗಿದೆ. ಆದರೂ ಕೂಡ ಮಕ್ಕಳು, ಆ ತಂದೆಯ ಅಂತಿಮ ದರ್ಶನ ಪಡೆಯಲು ಬಾರದೆ, ಆನ್‌ಲೈನ್‌ನಲ್ಲಿ ಹಣ ಕಳುಹಿಸಿ ವೀಡಿಯೋ ಕಾಲ್ ಮೂಲಕವೇ ಅಂತ್ಯಕ್ರಿಯೆ ವೀಕ್ಷಿಸಿದ ಮೂವರು ಪುತ್ರಿಯರ ಅಮಾನವೀಯ ಮತ್ತು ಮನಕಲಕುವ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡಿದರೆ ಎಂಥವರ ಕರುಳೂ ಕೂಡ ಒಂದು ಕ್ಷಣ ಹಿಂಡಿದಂತಾಗುತ್ತದೆ.
ವೀಡಿಯೋ ಕಾಲ್‌ನಲ್ಲಿ ಅಂತ್ಯಕ್ರಿಯೆ ವೀಕ್ಷಿಸಿದ ಮೂವರು ಪುತ್ರಿಯರು
ಮುಂಬೈನ ಪ್ರಮುಖ ಬಟ್ಟೆ ವ್ಯಾಪಾರಿಯಾಗಿದ್ದ 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಅವರು ಕಳೆದ ಎರಡು ವರ್ಷಗಳಿಂದ ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ವಾಸವಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಅವರ ಪತ್ನಿ ಮೀನಾ ಕೂಡ ಇದೇ ಆಶ್ರಮದಲ್ಲಿ ನಿಧನರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಶಿವಚರಣ್ ಅವರು ಮಂಗಳವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಆಶ್ರಮದ ಆಡಳಿತ ಮಂಡಳಿ ತಕ್ಷಣವೇ ಈ ವಿಷಯವನ್ನು ಅವರ ಮೂವರು ಪುತ್ರಿಯರಿಗೆ ತಿಳಿಸಿದೆ.

ಆದರೆ, ಅಂತ್ಯಕ್ರಿಯೆಗೆ ಬರಲು ಸಮಯವಿಲ್ಲವೆಂದು ಹೇಳಿದ ಪುತ್ರಿಯರು, "ನಾವು ಆನ್‌ಲೈನ್ ಮೂಲಕ 5,100 ರೂಪಾಯಿ ಕಳುಹಿಸುತ್ತೇವೆ. ಸೋನಿಪತ್‌ನಲ್ಲಿಯೇ ಅಂತ್ಯಕ್ರಿಯೆ ನಡೆಸಿ. ಚಿತೆಗೆ ಬೆಂಕಿ ಇಡುವಾಗ ವೀಡಿಯೋ ಕಾಲ್ ಮಾಡಿ, ನಾವು ನೋಡುತ್ತೇವೆ" ಎಂದು ಹೇಳಿದ್ದಾರೆ.
ಶಿವಚರಣ್ ಗುಪ್ತಾ ಅವರು ತಮ್ಮ ಮೂವರು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಒಳ್ಳೆಯ ಕುಟುಂಬಗಳಿಗೆ ವಿವಾಹ ಸಹ ಮಾಡಿಕೊಟ್ಟಿದ್ರು. ಅವರ ಮೂವರು ಪುತ್ರಿಯರ ಪೈಕಿ ಅನಿತಾ ನೇಪಾಳದಲ್ಲಿ ಶಿಕ್ಷಕಿಯಾಗಿದ್ದರೆ, ನಿಶಾ ಉತ್ತರ ಪ್ರದೇಶದ ಅಜಂಗಢದಲ್ಲಿ ಹಾಗೂ ಕಿರಿಯ ಪುತ್ರಿ ಪ್ರಿಯಾ ಮುಂಬೈನಲ್ಲಿ ನೆಲೆಸಿದ್ದಾರೆ. ಶಿಕ್ಷಕಿಯಾಗಿರುವ ಪುತ್ರಿಯರು ಸಮಾಜಕ್ಕೆ ಮಾದರಿಯಾಗಬೇಕಿದ್ದವರು. ಆದರೆ, ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ನೋಡಲು ಬಾರದೆ, ಕೊನೆಗೆ ಸಾವನ್ನಪ್ಪಿದಾಗಲೂ ಅಂತಿಮ ಸಂಸ್ಕಾರಕ್ಕೆ ಬಾರದೆ ಕೇವಲ 5,100 ರೂಪಾಯಿಗಳನ್ನ ಆನ್‌ಲೈನ್‌ನಲ್ಲಿ ಕಳಿಸಿ ತಮ್ಮ ಕೆಲಸ ಮುಗಿಸಿಕೊಂಡಿದ್ದಾರೆ ನೋಡಿ.
'ಇನ್ನೂ ಎಷ್ಟು ಹೊತ್ತು ಹಿಡಿಯುತ್ತೆ?' ಎಂದು ಪ್ರಶ್ನಿಸಿದ ಪುತ್ರಿ
ವೃದ್ಧಾಶ್ರಮದ ನಿರ್ದೇಶಕ ಆನಂದ್ ಕುಮಾರ್ ಅವರು ಈ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ಯಾವ ಕೈಗಳು ಮಕ್ಕಳನ್ನ ಬೆಳೆಸಿ, ಓದಿಸಿ ಶಿಕ್ಷಕರನ್ನಾಗಿ ಮಾಡಿತೋ, ಅದೇ ಮಕ್ಕಳು ಇಂದು ತಂದೆಯ ಅಂತಿಮ ಸಂಸ್ಕಾರಕ್ಕೆ ಬರಲಿಲ್ಲ. ಇದು ನಮ್ಮ ಸಮಾಜದ ಪ್ರಸ್ತುತ ಸ್ಥಿತಿಯನ್ನ ತೋರಿಸುತ್ತದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆಯ ವೀಡಿಯೋ ಕಾಲ್ ನಡೆಯುತ್ತಿದ್ದಾಗ ಪುತ್ರಿಯೊಬ್ಬರು, "ಇದು ಮುಗಿಯಲು ಇನ್ನೂ ಎಷ್ಟು ಹೊತ್ತು ಹಿಡಿಯುತ್ತದೆ? ನಾವು ಊಟ ಮಾಡಿ ಸ್ನಾನ ಮಾಡಬೇಕು" ಎಂದು ಕೇಳಿದ್ದಾರಂತೆ. ಇದು ಅಲ್ಲಿನ ಸಿಬ್ಬಂದಿಯ ಕಣ್ಣಲ್ಲಿ ನೀರು ತರಿಸಿದೆ.
5100 रुपये भेजे और वीडियो कॉल पर अंतिम संस्कार देख लिया💔
— Sachin Verma🐦 (@itSachinverma) August 5, 2026
ये घटना सुन के इंसान की आत्मा रो पड़ेगी😢
मुंबई के बड़े कपड़ा व्यापारी शिवचरण रामरत्न गुप्ता, 74 साल,पिछले 3 साल से सोनीपत के वृद्धाश्रम में थे।
2 साल पहले उनकी पत्नी का भी यहीं निधन हुआ था।
मंगलवार को जब आश्रम ने मौत… pic.twitter.com/kKpLWzJ9WK
ನೇತ್ರದಾನದ ಮೂಲಕ ಬೆಳಕಾದ ತಂದೆ
ಅಂತಿಮವಾಗಿ ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರೇ ಸೇರಿ ಹಿಂದೂ ಸಂಪ್ರದಾಯದಂತೆ ಶಿವಚರಣ್ ಅವರ ಅಂತ್ಯಕ್ರಿಯೆಯನ್ನ ನೆರವೇರಿಸಿದ್ದಾರೆ. ಈ ನಡುವೆ, ಮೃತರ ಇಚ್ಛೆಯಂತೆ ಅವರ ಕಣ್ಣುಗಳನ್ನ ದಾನ ಮಾಡಲಾಗಿದ್ದು, ಈ ತಂದೆ ಸಾವಿನ ನಂತರವೂ ಇಬ್ಬರಿಗೆ ಬೆಳಕಾಗಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ಅಸ್ತಿಯನ್ನ ಪಡೆಯಲೂ ಬರದ ಪುತ್ರಿಯರು, ಆಶ್ರಮದ ಸಿಬ್ಬಂದಿಯೇ ಗಂಗಾ ನದಿಯಲ್ಲಿ ಅಸ್ತಿ ವಿಸರ್ಜನೆ ಮಾಡುವಂತೆ ಮನವಿ ಮಾಡಿದ್ದಾರೆ.
ಇತ್ತಿಚೆಗೆ ಜಗತ್ತಿನಲ್ಲಿ ಸಂಬಂಧಗಳು ಮತ್ತು ಮಾನವೀಯ ಮೌಲ್ಯಗಳು ಹೇಗೆ ಕಣ್ಮರೆಯಾಗುತ್ತಿವೆ ಎಂಬುದಕ್ಕೆ ಈ ಘಟನೆಯೇ ಒಂದು ಒಳ್ಳೆಯ ಉದಾಹರಣೆ ಎನ್ನಬಹುದು.


Click it and Unblock the Notifications
