ಜುಲೈ 1ರ ಬಳಿಕ ಮೊದಲ ಬಾರಿ 20 ಸಾವಿರಕ್ಕಿಂತ ಕಡಿಮೆ ಕೋವಿಡ್ ಸೋಂಕಿತರು ಪತ್ತೆ
ನವದೆಹಲಿ, ಡಿಸೆಂಬರ್ 22: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ಕೊರೊನಾ ವೈರಸ್ ಸೋಂಕು ಜಗತ್ತಿನಾದ್ಯಂತ ಭೀತಿ ಮೂಡಿಸಿರುವ ನುಡವೆಯೇ ಭಾರತದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮತ್ತಷ್ಟು ಗಮನಾರ್ಹ ಸಾಧನೆ ಕಂಡುಬಂದಿದೆ. ಸೋಮವಾರ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು ಕೂಡ ಸಾಕಷ್ಟು ತಗ್ಗಿವೆ.
ಜುಲೈ 1ರ ಬಳಿಕ ಇದೇ ಮೊದಲ ಬಾರಿ ದಿನವೊಂದರಲ್ಲಿ 20 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಸೋಮವಾರ ದಾಖಲಾಗಿರುವುದು ವಿಶೇಷ. ದೇಶದಲ್ಲಿ 24 ಗಂಟೆಗಳಲ್ಲಿ 19,556 ಕೋವಿಡ್ ಪ್ರಕರಣ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತನ್ನ ವರದಿಯಲ್ಲಿ ತಿಳಿಸಿದೆ.
ಸೋಮವಾರ ಒಂದೇ ದಿನ 301 ಮಂದಿ ಸೋಂಕಿತರು ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಕಳೆದ ಕೆಲವು ತಿಂಗಳಲ್ಲಿಯೇ ದಿನವೊಂದರಲ್ಲಿ ದಾಖಲಾದ ಅತಿ ಕಡಿಮೆ ಸಾವಿನ ಪ್ರಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ 30,376 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚೇತರಿಕೆ ಸಂಖ್ಯೆಯ ಏರಿಕೆ ಮತ್ತು ಪ್ರಕರಣಗಳ ಸಂಖ್ಯೆಯ ಇಳಿಕೆಯಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 3 ಲಕ್ಷಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳು 2,92,518ಕ್ಕೆ ತಗ್ಗಿವೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳು 1,00,75,116ಕ್ಕೆ ತಲುಪಿದೆ. 1,46,111 ಮಂದಿ ಇದುವರೆಗೂ ಸೋಂಕಿನಿಂದ ಮೃತಪಟ್ಟಿರುವುದು ವರದಿಯಾಗಿದೆ. ಹಾಗೆಯೇ 96,36,487 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದೇಶದಾದ್ಯಂತ ಇದುವರೆಗೂ 16,31,70,557 ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಸೋಮವಾರ ಒಂದೇ ದಿನ 10,72,228 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.












Click it and Unblock the Notifications