Wedding Scam: ವಾಟ್ಸಾಪ್ ಅಲ್ಲಿ ಮದುವೆ ಆಮಂತ್ರಣ ಕಳುಹಿಸಿ ಪಂಗನಾಮ- ಸೈಬರ್ ಕಳ್ಳರ ಖತರ್ನಾಕ್ ಪ್ಲ್ಯಾನ್!
ಮದುವೆ ಸೀಸನ್ ಶುರುವಾಗಿದೆ. ಒಂದೇ ಶುಭ ಮುಹೂರ್ತದಲ್ಲಿ ಎರಡು ಮೂರು ಮದುವೆಯಲ್ಲಿ ಭಾಗಿಯಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಅದ್ರಲ್ಲೂ ಈ ಬಾರಿ ದಾಖಲೆ ಪ್ರಮಾಣದಲ್ಲಿ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿವೆ. ಈಗ ಕುಟುಂಬಸ್ಥರು ಆಪ್ತರ ಮನೆಗಳಿಗೆ ತೆರಳಿ ಮದುವೆ ಆಮಂತ್ರಣ ಕೊಡುವುದು ಕಷ್ಟವಾಗಿದೆ. ಹೀಗಾಗಿ ಡಿಜಿಟಲ್ ಆಮಂತ್ರಣ ಮಾಡಿಸಿ ವಾಟ್ಸಾಪ್ ಮೂಲಕ ಹಂಚುತ್ತಿದ್ದಾರೆ. ಆದರೆ ಇದನ್ನೇ ಸೈಬರ್ ಕ್ರೈಮ್ ಕಿರಾತಕರು ಬಳಸಿಕೊಳ್ಳುತ್ತಿದ್ದಾರೆ.
ಹೌದು.. ದಿನೇ ದಿನೇ ಸೈಬರ್ ವಂಚಕರು ಅಪ್ಡೇಟ್ ಆಗುತ್ತಲೇ ಇದ್ದಾರೆ. ತಮ್ಮೆಲ್ಲಾ ಕಳ್ಳತನ, ದರೋಡೆ, ವಸೂಲಿ ಪ್ಲ್ಯಾನ್‌ಗಳು ಜನರಿಗೆ ಗೊತ್ತಾದ್ರು ಮೋಸ ಮಾಡಲು ಹೊಸ ಹೊಸ ಪ್ಲ್ಯಾನ್‌ಗಳನ್ನು ತಲಾಶ್ ಮಾಡುತ್ತಿದ್ದಾರೆ. ಈಗ ಜನರಿಗೆ ಮಕ್ಮಲ್ ಟೋಪಿ ಹಾಕಲು ಸೈಬರ್ ಖದೀಮರು ಮದುವೆಯ ಆಮಂತ್ರಣ ಪತ್ರಿಕೆಯ ಮೊರೆ ಹೋಗಿದ್ದಾರೆ.

ವಟ್ಸ್ಯಾಪ್‌ನಲ್ಲಿ ಆಮಂತ್ರಣ ಪತ್ರಿಕೆ , ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್
ಮದುವೆಯ ಸೀಸನ್ ಶುರುವಾಗಿದೆ. ಆಪ್ತರ ಮನೆಗೆ ತೆರಳಿ ಮದುವೆಯ ಆಮಂತ್ರಣ ಪತ್ರಿಕೆ ನೀಡುವುದು ಕಷ್ಟವಾಗುತ್ತಿದ್ದು ಡಿಜಿಟಲ್ ಆಮಂತ್ರಣ ಪತ್ರಿಕೆ ಮಾಡಿಸಿ ವಾಟ್ಸಾಪ್ ಮೂಲಕ ಹಂಚಲಾಗುತ್ತದೆ. ಆದರೆ ಇದೇ ಡಿಜಿಟಲ್ ವೆಡ್ಡಿಂಗ್ ಆಮಂತ್ರಣ ಐಡಿಯಾವನ್ನು ಬಳಸಿ ಸೈಬರ್ ಕ್ರೈ ಕಿರಾತಕರು ವಂಚನೆ ಮಾಡುತ್ತಿದ್ದಾರೆ.
ನಿಮ್ಮ ವಾಟ್ಸಾಪ್ ನಂಬರ್‌ಗೆ ಅನಾಮಿಕರು ಪರಿಚಯ ಇಲ್ಲದವರಿಂದ ಆಮಂತ್ರಣ ಪತ್ರಿಕೆ ಕಳುಹಿಸುತ್ತಾರೆ. ಇದೊಂದು ಡೌನ್ಲೋಡ್ ಫೈಲ್ ಆಗಿದ್ದು, ಮೇಲ್ನೋಟಕ್ಕೆ ಎಲ್ಲರೂ ಕಳುಹಿಸುವ ಆಮಂತ್ರಣ ಪತ್ರಿಕೆಯಂತೆ ಕಾಣಿಸುತ್ತದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವರ-ವಧು ಹೆಸರು, ದಿನಾಂಕ, ಮುಹೂರ್ತ, ಸ್ಥಳ ಸೇರಿ ಎಲ್ಲಾ ಮಾಹಿತಿ ಇರುತ್ತದೆ. ಈ ಫೈಲ್ ಕಳುಹಿಸುವುದರ ಜೊತೆಗೆ ಮೆಸೇಜ್ ಕೂಡ ರವಾನೆ ಮಾಡಲಾಗುತ್ತದೆ.
'ದಯವಿಟ್ಟು ಮದುವೆಗೆ ಬಂದು ಹರಸಿ, ಸಮಯದ ಅಭಾವದಿಂದ ವಾಟ್ಸಾಪ್ ಮಾಡಿದ್ದೇವೆ. ಅನ್ಯತಾ ಭಾವಿಸದೇ ದಯವಿಟ್ಟು ಮದುವೆಗೆ ಬನ್ನಿ' ಎಂದು ಬರೆಯುವ ವಂಚಕರು, ಇಲ್ಲಿ ನಿಮ್ಮನ್ನು ಟಾರ್ಗೇಟ್ ಮಾಡಿ ಕಳುಹಿಸದೇ ಸಿಕ್ಕ ಸಿಕ್ಕ ನಂಬರ್‌ಗೆ ಆಮಂತ್ರಣ ಪತ್ರಿಕೆ ಕಳುಹಿಸುತ್ತಾರೆ. ಲಕ್ಷಾಂತರ ಮಂದಿಗೆ ಈ ಆಮಂತ್ರಣ ಪತ್ರಿಕೆಯನ್ನು ಫಾರ್ವರ್ಡ್ ಮಾಡಲಾಗುತ್ತದೆ. ಈ ಪೈಕಿ ಸಾವಿರ ಜನ ಇದನ್ನು ಡೌನ್‌ಲೌಡ್ ಮಾಡಿದರೂ ಅವರ ಪ್ಲ್ಯಾನ್ ಸಕ್ಸಸ್ ಅಂತಲೇ ಅರ್ಥ.
ಈ ಫೈಲ್ ಅನ್ನು ಡೌನ್‌ಲೋಡ್ ಮಾಡಿದರೆ, ನಿಮ್ಮ ಖಾತೆಯಿಂದ ದುಡ್ಡು ಮಾಯವಾಗಬಹುದು. ನಿಮ್ಮ ಖಾಸಗಿ ಮಾಹಿತಿ ಕಳ್ಳತನವಾಗಬಹುದು. ನಿಮ್ಮ ವಿರುದ್ಧ ಅದನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡಿ ಹಣ ಕೀಳಬಹುದು. ಇದನ್ನು ಕೇಳಿದ ಮೇಲೆ ಭಯಪಡುವುದಕ್ಕಿಂತ ಜಾಗರೂಕರಾಗಿರುವುದು ಮುಖ್ಯ. ಹೀಗಾಗಿ ಅನಾಮಿಕ ನಂಬರ್, ಗೊತ್ತಿಲ್ಲದ ನಂಬರ್‌ನಿಂದ ಮೆಸೇಜ್, ಕಾಲ್ ಬಂದಾಗ ಹುಷಾರಾಗಿರಿ. ವಿಶೇಷವಾಗಿ ಮದುವೆಯ ಆಮಂತ್ರಣ ಪತ್ರಿಕೆ ಬಂದರೆ ಡೌನ್‌ಲೋಡ್ ಮಾಡಬೇಡಿ. ಅತೀವ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಹಿಮಾಚಲ ಪ್ರದೇಶ ಪೊಲೀಸರಿಗೆ ಸೈಬರ್ ಕಳ್ಳರು ಈ ರೀತಿ ಹಣ ದೋಚಿರುವ ದೂರು ಬಂದಿದ್ದು, ಅವರು ದೇಶದೆಲ್ಲೆಡೆ ಈ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ. ಅಪ್ಪಿ ತಪ್ಪಿಯೂ ಕೂಡ ಇಂತಹ ಸಂದೇಶ ಬಂದರೆ ಅದನ್ನು ಡೌನ್‌ಲೋಡ್ ಮಾಡದೇ ಇರಲು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications