ಭಾರತದಲ್ಲಿ 7ತಿಂಗಳ ನಂತರ ಬರೊಬ್ಬರಿ 11,109 ಕೋವಿಡ್ ಪಾಸಿಟಿವ್ ಕೇಸ್ ಪತ್ತೆ, ಇನ್ನೊಂದು ಅಲೆಯ ಮುನ್ಸೂಚನೆಯೇ?
ಬೆಂಗಳೂರು, ಏಪ್ರಿಲ್ 14: ಭಾರತವು ಮತ್ತೆ ಕೋವಿಡ್ ಸೋಂಕಿನ ಅಲೆಗಳಿಗೆ ಒಳಗಾಗುತ್ತದೆಯೇ ಎಂಬ ಭೀತಿ ಇದೀಗ ಎದುರಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಒಂದು ದಿನದಲ್ಲಿ ಕಂಡು ಬರುತ್ತಿದ್ದ ಪಾಸಿಟಿವ್ ಪ್ರಕರಣ ಸಂಖ್ಯೆಯಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆ ಆಗಿದೆ.
ಭಾರತದಲ್ಲಿ ಶುಕ್ರವಾರಕ್ಕೆ ಬೆಳಗ್ಗೆಯ ಹಿಂದಿನ 24 ಗಂಟೆಗಳಲ್ಲಿ ಬರೊಬ್ಬರಿ 11,109 ಕೋವಿಡ್ -19 ಹೊಸ ಪಾಸಿಟಿವ್ ಪ್ರಕರಣಗಳು ವರದಿ ಆಗಿವೆ. ಏಳು ತಿಂಗಳುಗಳ ಬಳಿಕ ದೇಶದಲ್ಲಿ ಅತ್ಯಧಿಕ ಗರಿಷ್ಠ ಕೊರೊನಾ ಪ್ರಕರಣ ವರದಿಯಾಗಿದೆ. ಅರ್ಧ ವರ್ಷದ ಬಳಿಕ ಮೊದಲ ಬಾರಿಗೆ 11ಸಾವಿರ ಕ್ಕಿಂತ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈಗ ಪತ್ತೆಯಾದ ಹೊಸ ಪ್ರಕರಣಗಳಿಂದಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 49,622 ಕ್ಕೆ ತಲುಪಿದೆ. ದೈನಂದಿನ ಧನಾತ್ಮಕತೆಯ ದರವು ಶೇಕಡಾ 5.01ರಷ್ಟಾಗಿದ್ದು, ವಾರದ ಧನಾತ್ಮಕತೆಯ ದರವು ಶೇಕಡಾ 4.29 ರಷ್ಟಿಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ದೇಶ್ ವಿವಿಧ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ಹೊಸದಾಗಿ 29 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದರಿಂದ ಒಟ್ಟು ಸಾವಿನ ಸಂಖ್ಯೆ 5,31,064 ಕ್ಕೆ ಏರಿಕೆ ಆಗಿದೆ. ಇದುವರೆಗೆ ದೇಶದಲ್ಲಿ ಒಟ್ಟು 4,42,16,583 ರೋಗಿಗಳು ಸೋಂಕಿನಿಂದ ಮುಕ್ತರಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಒಂದೇ ದಿನ ಒಟ್ಟು 476 ಡೋಸ್ ಲಸಿಕೆಗಳನ್ನು ಅರ್ಹರಿಗೆ ನೀಡಲಾಗಿದೆ. ರಾಷ್ಟ್ರವ್ಯಾಪಿ ಕೊರೊನಾ ಲಸಿಕಾಕರಣ ಅಭಿಯಾನದಡಿ ಭಾರತಾದ್ಯಂತ ಇದುವರೆಗೆ ಒಟ್ಟು 220,66,25,120 ಕೋಟಿ ಲಸಿಕೆಯ ಡೋಸ್‌ಗಳನ್ನು ಜನರು ಪಡೆದಿದ್ದಾರೆ. ಇಷ್ಟು ಪ್ರಮಾಣದಲ್ಲಿ ಜನರು ಲಸಿಕೆ ಪಡೆದಿರುವುದು ಸಂಭವನೀಯ ಅಪಾಯವನ್ನು ದೈರ್ಯದಿಂದ ಎದುರಿಸಬಹುದಾಗಿದೆ.

ಕರ್ನಾಟಕದಲ್ಲಿ ವರದಿಯಾದ ಪ್ರಕರಣಗಳೇಷ್ಟು?
ಕರ್ನಾಟಕದಲ್ಲಿ ಒಂದೇ ದಿನದಲ್ಲಿ 498 ಹೊಸ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1714ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಒಂದು ಸಾವಾಗಿದ್ದು, ಅದರಿಂದ ಸಾವಿನ ಸಂಖ್ಯೆ 40,291 ತಲುಪಿದೆ. ಗುರುವಾರ 15036 ಕೊವಿಡ್ ತಪಾಸಣೆ ಮಾಡಲಾಗಿದೆ. ಇದುವರೆಗೆ ರಾಜ್ಯದಲ್ಲಿ 40,81037 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಮಹಾರಾಷ್ಟ್ರ ರಾಜಧಾನಿಯಲ್ಲಿ ವರದಿಯಾದ ಕೇಸ್
ಕರ್ನಾಟಕದ ನೆರೆಯ ರಾಜ್ಯವಾದ ಮಹಾರಾಷ್ಟ್ರ ರಾಜಧಾನಿ ಮುಂಬೈ ಗುರುವಾರ ಒಂದೇ ದಿನ 274 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಇದು ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 11,59,819 ಕ್ಕೆ ತಲುಪಿದೆ. ಅದೃಷ್ಟವಶಾತ್ ಒಂದೇ ಒಂದು ಸಾವು ಸಂಭವಿಸಿಲ್ಲ. ಹೀಗಾಗಿ ಸಾವಿನ ಸಂಖ್ಯೆ 19,752ರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಬುಧವಾರದಂದು ವರದಿಯಾದ 320 ಪ್ರಕರಣಗಳಿಂದ ಈ ಸಂಖ್ಯೆಗೆ ಸೇರ್ಪಡೆಯಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್‌ನ ನಂತರ ಮೊದಲ ಬಾರಿಗೆ 300 ಪ್ರಕರಣ ವರದಿ ಆಗಿತ್ತು.
ನವದೆಹಲಿಯಲ್ಲಿ 1,527 ಮಂದಿಗೆ ಕೊರೊನಾ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಕೇವಲ 24 ಗಂಟೆಯಲ್ಲಿ ಬರೋಬ್ಬರಿ 1,527 ಕೋವಿಡ್ -19 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಪಾಸಿಟಿವಿಟಿ ದರ ಶೇಕಡಾ 27.77 ರಷ್ಟಿದೆ ಎಂದು ನಗರ ಸರ್ಕಾರದ ಆರೋಗ್ಯ ಇಲಾಖೆಯ ಹೆಲ್ತ ಬುಲೆಟಿನ್ ತಿಳಿಸಿದೆ.












Click it and Unblock the Notifications