ಹೊಸ ಕೋವಿಡ್ ಪ್ರಕರಣ ಪತ್ತೆ; ರಾಜ್ಯಗಳಿಗೆ ಕೇಂದ್ರದ ಮಾರ್ಗಸೂಚಿ
ಬೆಂಗಳೂರು, ಡಿಸೆಂಬರ್ 18; ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕೊರೊನಾ ಹೊಸ ರೂಪಾಂತರಿ ಜೆಎನ್.1 ಪತ್ತೆಯಾದ ಬಳಿಕ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಭಾರತದಲ್ಲಿ ಸದ್ಯ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿದೆ. ಕೇರಳ ರಾಜ್ಯದಲ್ಲಿ ಒಂದು ಸಾವು ಸಂಭವಿಸಿದೆ. ದೇಶದಲ್ಲಿ 1,828 ಸಕ್ರಿಯ ಪ್ರಕರಣಗಳಿವೆ. ಹವಾಮಾನ ವ್ಯತ್ಯಾಸ, ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಕಾರಣ ಕೋವಿಡ್ ಪರಿಸ್ಥಿತಿ ಮೇಲೆ ನಿರಂತರ ನಿಗಾವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಹೊಸ ಕೊರೊನಾ ರೂಪಾಂತರ ತಳಿಗಳನ್ನು ಪತ್ತೆ ಹಚ್ಚಲು ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಬೇಕು. ಜಿನೋಮ್ ಅನುಕ್ರಮಕ್ಕಾಗಿ ಪಾಸಿಟಿವ್ ಬಂದಿರುವವರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಗಳ ಕುರಿತು ಪರಿಶೀಲನೆ ನಡೆಸಬೇಕು. ಕೋವಿಡ್ ಚಿಕಿತ್ಸೆ ನೀಡಲು ತರಬೇತಿ ಪಡೆದ ಸಿಬ್ಬಂದಿಗೆ ಜಾಗೃತವಾಗಿರಲು ಸೂಚನೆ ನೀಡಬೇಕು. ಅಗತ್ಯವಿದ್ದರೆ ಮಾಕ್ ಡ್ರಿಲ್ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಲು ಮನವಿ ಮಾಡಬೇಕು. ಎಲ್ಲರೂ ಒಟ್ಟಾಗಿ ಕೈ ಜೋಡಿಸಿದರೆ ಕೋವಿಡ್ ಆತಂಕವನ್ನು ದೂರ ಮಾಡಬಹುದು ಎಂದು ಕೇಂದ್ರ ತಿಳಿಸಿದೆ.
ಮುಂಬರುವ ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಅಗತ್ಯ ನಿಗಾವಹಿಸಬೇಕು. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದು, "ಇಡೀ ದೇಶದಲ್ಲಿ ಕೊರೊನಾ ಹೊಸ ತಳಿ ಶುರುವಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವರಿಗೆ ಕೂಡಲೇ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ವಹಿಸಲು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
ಸೋಮವಾರ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, "ಕೋವಿಡ್ ಸಂಬಂಧಿಸಿದಂತೆ ಯಾರೂ ಸಹ ಆತಂಕ ಪಡುವ ಅಗತ್ಯವಿಲ್ಲ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದೆ. ಕೋವಿಡ್ ಪರೀಕ್ಷೆ ಹೆಚ್ಚಿಸಲಾಗುವುದು, ಉಸಿರಾಟದ ತೊಂದರೆ ಹಾಗೂ ಶೀತ, ನೆಗಡಿ, ಜ್ವರ ಮತ್ತಿತರ ಲಕ್ಷಣ ಹೊಂದಿರುವವರಿಗೆ ಪರೀಕ್ಷೆ ಮಾಡಲಾಗುವುದು. ಅನಗತ್ಯ ಆತಂಕ ಬೇಡ" ಎಂದರು.
ಭಾರತದಲ್ಲಿ ಡಿಸೆಂಬರ್ 17ರ ಭಾನುವಾರ 335 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 1,828.












Click it and Unblock the Notifications