ತಾಯಿಯಿಂದ ಮಗುವಿಗೆ ಸೋಂಕು ಅಂಟುತ್ತಾ; ಗರ್ಭಿಣಿಯರ ಚಿಕಿತ್ಸಾ ಮಾರ್ಗಸೂಚಿ
ನವದೆಹಲಿ, ಏಪ್ರಿಲ್.15: ಕೊರೊನಾ ವೈರಸ್ ಯಾವಾಗ ಯಾರಿಂದ ಯಾರಿಗೆ ಹರಡುತ್ತದೆಯೋ ಎಂಬ ಆತಂಕದ ಜನರಲ್ಲಿ ಇದ್ದೇ ಇದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಇದರ ಮಧ್ಯೆ ಆಘಾತಕಾರಿ ಸುದ್ದಿಯೊಂದನ್ನು ತಿಳಿಸಿದೆ.
ಶಿಶು ಜನನಕ್ಕೂ ಮೊದಲು ಅಥವಾ ಜನನದ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆಯಿದೆ. ಆದರೆ ತಾಯಿಯ ಎದೆಹಾಲು ಉಣಿಸುವುದರಿಂದ ಸೋಂಕು ಹರಡುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ ಎಂದು ಐಸಿಎಂಆರ್ ತಿಳಿಸಿದೆ.]
ಇದುವರೆಗೂ ನವಜಾತ ಶಿಶುವಿನ ಜನನ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ತಿಳಿದು ಬಂದಿಲ್ಲ. ಜನನ ನಂತರದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ ಕೊವಿಡ್19 ಹರಡುವ ಅಪಾಯವನ್ನು ತಳ್ಳಿ ಹಾಕುವಂತಿಲ್ಲ ಎಂದು ಐಸಿಎಂಆರ್ ತಿಳಿಸಿದೆ.

ಮಗುವನ್ನು ತಾಯಿಯಿಂದ ಪ್ರತ್ಯೇಕಾವಾಗಿ ಇರಿಸುವುದು
ಕೊರೊನಾ ವೈರಸ್ ಸೋಂಕಿತ ಅಥವಾ ಶಂಕಿತ ಮಹಿಳೆಯು ಮಗುವಿಗೆ ಜನ್ಮ ನೀಡಿದ ತಕ್ಷಣ ಮಗುವನ್ನು ಪ್ರತ್ಯೇಕವಾಗಿ ಇರಿಸಬೇಕು. ತಾಯಿಗೆ ನೀಡುತ್ತಿದ್ದ ಕೊರೊನಾ ವೈರಸ್ ಚಿಕಿತ್ಸೆಯ ಸಂಪೂರ್ಣಗೊಳ್ಳುವರೆಗೂ ಮಗುವನ್ನು ತಾಯಿಯ ಮಡಿಲಿಗೆ ಹಾಕುವಂತಿಲ್ಲ. ಇನ್ನು, ಗರ್ಭಿಣಿಯಲ್ಲಿ ಸೋಂಕು ಅಥವಾ ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ಪ್ರತ್ಯೋಕ ಐಸೋಲೇಟೆಡ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಶಿಶು ಜನನ ಪೂರ್ವದಲ್ಲಿ ಮುನ್ನೆಚ್ಚರಿಕೆ ವಹಿಸಲು ಸಲಹೆ
ಇದುವರೆಗೂ ಸೋಂಕಿತ ತಾಯಿಗೆ ಜನಿಸಿದ ಮಗುವಿನಲ್ಲಿ ಅಸಹಜ ದೈಹಿಕ ಬೆಳವಣಿಗೆ ಕುರಿತಾದ ಯಾವುದೇ ಉದಾಹರಣೆಗಳು ಪತ್ತೆಯಾಗಿಲ್ಲ. ಇದೊಂದು ದೀರ್ಘಾವಧಿ ಪ್ರಕ್ರಿಯೆ ಆಗಿದೆ. ಗರ್ಭಿಣಿಯರು ಕೂಡಾ ಸೋಂಕಿತ ಜನರ ಸಂಪರ್ಕದಿಂದ ದೂರ ಉಳಿದುಕೊಳ್ಳುವುದು ಸೂಕ್ತ ಎಂದು ಐಸಿಎಂಆರ್ ಸಲಹೆ ನೀಡಿದೆ.

ಗರ್ಭಿಣಿಯರ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆ
ಇನ್ನು, ಗರ್ಭಧಾರಣೆ ಬಳಿಕ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯು ಬದಲಾವಣೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಗರ್ಭಿಣಿಯರಲ್ಲಿ ಕೊರೊನಾ ವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಂದರೆ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಗೋಚರಿಸುವುದು ಸ್ವಾಭಾವಿಕ ಅನ್ನುತ್ತಾರೆ ಐಸಿಎಂಆರ್ ತಜ್ಞರು. ಅದರಲ್ಲೂ ಕೊನೆಯ ಮೂರು ತಿಂಗಳ ಅವಧಿಯಲ್ಲಿ ಗರ್ಭಿಣಿಯರಿಗೆ ಸಾರ್ಸ್ ಮತ್ತು ಮೆರ್ಸ್ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಗರ್ಭಿಣಿಯರಿಗೆ ಹೃದಯ ಸಂಬಂಧಿ ಸೋಂಕಿನಿಂದ ಅಪಾಯ
ಗರ್ಭಿಣಿಯರು ದುರ್ಬಲ ಹೃದಯದವರು ಆಗಿದ್ದಲ್ಲಿ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆಗಳಿರುತ್ತವೆ. ಏಕೆಂದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಆತಂಕ ಹಾಗೂ ಖಿನ್ನತೆಗೆ ಒಳಗಾಗುವ ಅಪಾಯ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಕುಟುಂಬ ಸದಸ್ಯರು ಗರ್ಭಿಣಿಯರಲ್ಲಿ ಆತ್ಮಸ್ಥೈರ್ಯವನ್ನು ತುಂಬುವಂತಾ ಕೆಲಸವನ್ನು ಮಾಡಬೇಕಿದೆ.

ವೈದ್ಯಕೀಯ ಸಿಬ್ಬಂದಿ ಸುರಕ್ಷತೆ ಬಗ್ಗೆಯೂ ಮಾರ್ಗಸೂಚಿ
ಇನ್ನು, ಕೊರೊನಾ ವೈರಸ್ ಸೋಂಕಿತ ಅಥವಾ ಶಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಕೂಡಾ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ವೈಯಕ್ತಿಕ ಸುರಕ್ಷತಾ ಕಿಟ್ ನ್ನು ಧರಿಸಿಕೊಂಡು ಚಿಕಿತ್ಸೆ ನೀಡುವುದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಸಮಿತಿಯ ಶಿಫಾರಸ್ಸುಗಳನ್ನು ಭಾರತಕ್ಕೆ ಹೊಂದಾಣಿಕೆ ಆಗುವಂತೆ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.












Click it and Unblock the Notifications