ಡಿಸೆಂಬರ್ 24ರಂದು ದೆಹಲಿ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆ: ಭಾಗಿಯಾಗಲಿರುವ ಗಣ್ಯರು ಯಾರು?
ನವದೆಹಲಿ, ಡಿಸೆಂಬರ್ 24: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಡಿಸೆಂಬರ್ 24ರಂದು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲಿದೆ.
ದೆಹಲಿಯ ಬಾದರ್‌ಪುರ ಮೆಟ್ರೋ ನಿಲ್ದಾಣದ ಬಳಿ ಯಾತ್ರೆಗೆ ಭವ್ಯ ಸ್ವಾಗತ ದೊರೆಯಲಿದೆ. ಅಲ್ಲಿಂದ ಆಶ್ರಮ ಚೌಕ್‌ನಲ್ಲಿರುವ ಜೈರಾಮ್ ಆಶ್ರಮದ ಕಡೆಗೆ ಪಾದಯಾತ್ರೆ ಸಾಗಲಿದೆ.
ಮೊದಲ ಹಂತದ ಪಾದಯಾತ್ರೆ 16 ಕಿ.ಮೀ ಸಾಗಲಿದೆ. ನಂತರ, ಮಧ್ಯಾಹ್ನ 1.30 ರ ಸುಮಾರಿಗೆ, ಜೈರಾಮ್ ಆಶ್ರಮದಿಂದ ಪಾದಯಾತ್ರೆ ಪುನರಾರಂಭವಾಗಲಿದೆ. ಮಥುರಾ ರಸ್ತೆ - ಜಾಕಿರ್ ಹುಸೇನ್ ಮಾರ್ಗ - ಇಂಡಿಯಾ ಗೇಟ್ - ತಿಲಕ್ ಮಾರ್ಗ - ಐಟಿಒ - ಬಹದ್ದೂರ್ ಷಾ ಜಾಫರ್ ಮಾರ್ಗ - ನೇತಾಜಿ ಸುಭಾಷ್ ಮಾರ್ಗ ಮತ್ತು ಅನಗ್ಪಾಲ್ ಥಾಮಸ್ ವೃತ್ತಗಳ ಮೂಲಕ ಯಾತ್ರೆ ಸಾಗಲಿದೆ.

ಅನಗ್‌ಪಾಲ್ ಥಾಮಸ್ ಸರ್ಕಲ್‌ನಲ್ಲಿ ವಿರಾಮ ತೆಗೆದುಕೊಂಡ ನಂತರ, ರಾಹುಲ್ ಗಾಂಧಿ ಮತ್ತು ಇತರ ಭಾರತ್ ಜೋಡೊ ಯಾತ್ರಿಗಳು ರಾಜ್‌ಘಾಟ್, ಶಾಂತಿ ವಾನ್, ಶಕ್ತಿ ಸ್ಥಳ ಮತ್ತು ವೀರ್ ಭೂಮಿಗೆ ಭೇಟಿ ನೀಡಲಿದ್ದಾರೆ.
ಮೂಲಗಳ ಪ್ರಕಾರ, ಹಿರಿಯ ನಟ ಕಮಲ್ ಹಾಸನ್ ಮತ್ತು ಡಿಎಂಕೆ ಸಂಸದೆ ಕನಿಮೊಳಿ ಮತ್ತು ವಿರೋಧ ಪಕ್ಷದ ಇತರ ಸಂಸದರು ದೆಹಲಿಯಲ್ಲಿ ಸಾಗುವ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪೂರ್ವಸಿದ್ಧತಾ ಪರಿಶೀಲನಾ ಸಭೆ ನಡೆಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಅಬ್ ದಿಲ್ಲಿ ದುರ್ ನಹೀಂ' (ಈಗ ದೆಹಲಿ ದೂರವಿಲ್ಲ) ಎಂದು ಬರೆದುಕೊಂಡಿದ್ದಾರೆ.
ನಮ್ಮ ಪ್ರೀತಿಯ ನಾಯಕ ರಾಹುಲ್ ಗಾಂಧಿ ನೇತೃತ್ವದ ಐತಿಹಾಸಿಕ #BharatJodoYatra ದೆಹಲಿ ತಲುಪುತ್ತಿದ್ದಂತೆ ಘೋಷಣೆ ಜೋರಾಗಿ ಕೇಳಿಸತೊಡಗಿದೆ. ಸಿದ್ಧತೆಗಳ ಕುರಿತು ಚರ್ಚಿಸಲು ಡಿಪಿಸಿಸಿಯ ಪರಿಶೀಲನಾ ಸಭೆ ಇಂದು ನಡೆಯಿತು ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಶಕ್ತಿ ಪ್ರದರ್ಶನದ ನಂತರ, ಯಾತ್ರೆಯು ಸುಮಾರು ಒಂಬತ್ತು ದಿನಗಳ ವಿರಾಮವನ್ನು ತೆಗೆದುಕೊಳ್ಳುತ್ತದೆ. ಜನವರಿ 3 ರಂದು ಅದು ಪುನರಾರಂಭಗೊಳ್ಳುತ್ತದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಯಾತ್ರೆ ಸಾಗಲಿದೆ. ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರದ ಕಡೆಗೆ ಕ್ರಮಿಸಲಿದೆ.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೊ ಯಾತ್ರೆ ಶುಕ್ರವಾರ ತನ್ನ 100 ದಿನಗಳನ್ನು ಪೂರೈಸಿತು.

ಭಾರತ್ ಜೋಡೊ ಯಾತ್ರೆ ಮುಂದಿನ ವರ್ಷದ ವೇಳೆಗೆ 3,570 ಕಿ.ಮೀ ಕ್ರಮಿಸಲಿದೆ. ಇದು ಭಾರತದ ಇತಿಹಾಸದಲ್ಲಿಯೇ ರಾಜಕೀಯ ನಾಯಕರೊಬ್ಬರ ಅತಿ ಉದ್ದದ್ದ ಕಾಲ್ನಡಿಗೆ ಯಾತ್ರೆಯಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಇಲ್ಲಿಯವರೆಗೆ, ಭಾರತ್ ಜೋಡೊ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಸಂಚರಿಸಿದೆ. ಈಗ ರಾಜಸ್ಥಾನದಲ್ಲಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳುತ್ತದೆ.












Click it and Unblock the Notifications