Congress vs BJP: ಪ್ರಧಾನಿ ಮೋದಿ ಬಗ್ಗೆ ವ್ಯಂಗ್ಯದ ಪೋಸ್ಟ್ ಡಿಲೀಟ್ ಮಾಡಿದ ಕಾಂಗ್ರೆಸ್
ಪಹಲ್ಗಾಮ್ ಉಗ್ರರ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೇಶಾದ್ಯಂತ ಜನ ಒತ್ತಾಯಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲೂ ಪ್ರಧಾನಿ ಮೋದಿಯನ್ನು ಟೀಕಿಸಲು ಹೋದ ಕಾಂಗ್ರೆಸ್ ಮುಜುಗರ ಅನುಭವಿಸಿದೆ. ಪ್ರಧಾನಿ ಮೋದಿ ಕಾಣೆಯಾಗಿದ್ದಾರೆ ಎನ್ನುವ ಎಕ್ಸ್ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.
ಕಾಂಗ್ರೆಸ್ ಪೋಸ್ಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜೀವಗಳನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಕುರಿತು ಚರ್ಚಿಸಲು ನಡೆದ ಸರ್ವಪಕ್ಷ ಸಭೆಯನ್ನು ಸೂಚಿಸುವ ಈ ಪೋಸ್ಟ್ ಪ್ರಧಾನಿ ಮೋದಿ ಕಾರ್ಯನಿರ್ವಹಣೆಯಲ್ಲಿ ಕಾಣೆಯಾಗಿದ್ದಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಲಾಗಿತ್ತು.

ಸೋಮವಾರ ರಾತ್ರಿ ಹಾಕಲಾದ ಈ ಪೋಸ್ಟ್, ವಿಶೇಷವಾಗಿ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಮರು ಪೋಸ್ಟ್ ಮಾಡಿದ ನಂತರ ಬಿಜೆಪಿ ಕೆರಳಿತ್ತು. ಕಾಂಗ್ರೆಸ್ ಪೋಸ್ಟ್‌ಗೆ ಪ್ರತಿಯಾಗಿ ಬಿಜೆಪಿ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಬೆನ್ನಿಗೆ ಇರಿಯುತ್ತಿರುವ ಪೋಸ್ಟ್ ಹಂಚಿಕೊಂಡು ಪ್ರತೀಕಾರ ತೀರಿಸಿಕೊಂಡಿತು. ಇದಕ್ಕೆ ಪಾಕಿಸ್ತಾನದ ಸ್ನೇಹಿತ ಎಂದು ಶೀರ್ಷಿಕೆ ನೀಡಿತ್ತು.
ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಕಾಂಗ್ರೆಸ್ ಪೋಸ್ಟ್ ಡಿಲೀಟ್ ಮಾಡಿದೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ. ಪೋಸ್ಟ್ ಡಿಲೀಟ್ ಮಾಡಿದರೂ ಕಾಂಗ್ರೆಸ್‌ನ ರಾಷ್ಟ್ರವಿರೋಧಿ ಪಾಕಿಸ್ತಾನ ಪರ ಗುಣಲಕ್ಷಣಗಳನ್ನು ಮರೆ ಮಾಡುವುದಿಲ್ಲ ಎಂದು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ವಿದೇಶದಿಂದ ಹಿಂತಿರುಗಿ ಭದ್ರತಾ ಸಂಪುಟ ಸಮಿತಿಯೊಂದಿಗೆ ನಿರ್ಣಾಯಕ ಸಭೆಗಳನ್ನು ನಡೆಸುತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿಲ್ಲವೆಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ 'ಮಾಯವಾಗಿದ್ದಾರೆ' ಪೋಸ್ಟ್ ಹಂಚಿಕೊಂಡಿತ್ತು. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಪದೇ ಪದೇ ಆರೋಪಿಸಿದೆ. ಮುಸ್ಲಿಂ ಮತಗಳನ್ನು ಪಡೆಯಲು ಕಾಂಗ್ರೆಸ್ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದಿದೆ ಎಂದು ಹೇಳಿದೆ.
ಸಿಂಧೂ ಜಲ ಒಪ್ಪಂದದ ಸ್ಥಗಿತ ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತದ ರಾಜತಾಂತ್ರಿಕ ನಡೆಗಳನ್ನು ಕೆಲವು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಅವರನ್ನು ಪಾಕಿಸ್ತಾನದ ಸ್ನೇಹಿತ ಎಂದು ಕರೆದಿದೆ.












Click it and Unblock the Notifications