ಚೀನಾ ರಾಯಭಾರಿಯನ್ನು ರಾಹುಲ್ ಭೇಟಿ ಮಾಡಿದ್ದು ನಿಜ
ನವದೆಹಲಿ, ಜುಲೈ 07 : ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿಯವರಿಗೆ ಸಂಬಂಧಿಸಿದಂತೆ ಪಕ್ಷ ತೀವ್ರ ಮುಜುಗರಕ್ಕೀಡಾಗಿದೆ. ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷರ ಭೇಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿದ್ದ ಟೀಕೆಯೇ ಕಾಂಗ್ರೆಸ್ಸಿಗೆ ಈಗ ತಿರುವುಮುರುವಾಗಿರುವುದು ನಿಜಕ್ಕೂ ವಿಪರ್ಯಾಸ.
ಸುಮಾರು ಆರೇಳು ಗಂಟೆಗಳ ಕಾಲ ರಾಹುಲ್ ಗಾಂಧಿಯವರು ಚೀನಾದ ರಾಯಭಾರಿಗಳನ್ನು ಭೇಟಿ ಮಾಡಿಯೇ ಇಲ್ಲ ಎಂದೇ ವಾದಿಸುತ್ತಿದ್ದ ಕಾಂಗ್ರೆಸ್, ಕಡೆಗೂ ಹೌದು ರಾಹುಲ್ ಗಾಂಧಿಯವರು ಚೀನಾ ರಾಯಭಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದು ನಗೆಪಾಟಲಾಗಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಔಪಚಾರಿಕವಾಗಿ ವಿವಿಧ ದೇಶಗಳ ರಾಯಭಾರಿಗಳು, ಅದರಲ್ಲೂ ಜಿ5 ದೇಶದ ಪ್ರತಿನಿಧಿಗಳು ಭೇಟಿಯಾಗುತ್ತಲೇ ಇರುತ್ತಾರೆ. ಅವರು ಜೀನಾದವರೇ ಆಗಿರಲಿ, ಭೂತಾನ್ ದೇಶದವರೇ ಆಗಿರಲಿ ಅಥವಾ ದೇಶದ ಮಾಜಿ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರೇ ಆಗಿರಲಿ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೊಂದು ಸಾಧಾರಣ ಸಂಗತಿಯಾಗಿದ್ದು, ವಿದೇಶಾಂಗ ಸಚಿವಾಲಯ ಮಾಡಿದಂತೆ ಇದನ್ನು ಮಾಧ್ಯಮಗಳು ವೈಭವೀಕರಣ ಮಾಡಬಾರದು. ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕರಿಗೆ ದೇಶದ ಪರಿಸ್ಥಿತಿ, ಆಸಕ್ತಿಗಳ ಬಗ್ಗೆ ಚೆನ್ನಾದ ಅರಿವಿದೆ, ಕಾಳಜಿಯಿದೆ. ಮತ್ತು ಚೀನಾ ಮತ್ತು ಭೂತಾನ್ ಜೊತೆಗಿನ ಗಡಿ ಕಲಹದ ಬಗ್ಗೆಯೂ ಅವರಿಗೆ ತಿಳಿವಳಿಕೆಯಿದೆ ಎಂದು ತಿಪ್ಪೆ ಸಾರಿದ್ದಾರೆ.
ಇಷ್ಟೆಲ್ಲ ಹೇಳಿಯಾದ ಮೇಲೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಲು ಸುರ್ಜೇವಾಲಾ ಅವರು ಮರೆಯಲಿಲ್ಲ. ಚೀನಾದೊಡನೆ ಸಂಬಂಧ ಸಂಪೂರ್ಣ ಹಳಿಸಿ ಹೋಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು, ಜರ್ಮನಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದು ನಾಚಿಕೆಗೇಡಿನದು ಎಂದಿದ್ದಾರೆ.
Even if Congress VP had met the Chinese Ambassador I don't see it as an issue, but the PM not flagging it in private or public is an issue
— Divya Spandana/Ramya (@divyaspandana) July 10, 2017
ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ರಮ್ಯಾ ಅವರು ಕೂಡ, ಚೀನಾ ಅಧ್ಯಕ್ಷರನ್ನು ಮೋದಿ ಭೇಟಿ ಮಾಡಿದ್ದನ್ನು ತೀವ್ರವಾಗಿ ಟೀಕಿಸಿದ್ದರು. ನಂತರ, ಚೀನಾ ರಾಯಭಾರಿಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದು ದೊಡ್ಡ ಸಂಗತಿಯೇ ಅಲ್ಲ. ಆದರೆ, ಮೋದಿಯವರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡಿದ್ದು ದೊಡ್ಡ ಸಂಗತಿ ಎಂದು ಟೀಕಾಪ್ರಹಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಟ್ವಿಟ್ಟಿಗರು ರಮ್ಯಾ ಅವರ ಮೇಲೆ ತೀವ್ರವಾಗಿ ಪ್ರತಿದಾಳಿ ನಡೆಸಿದ್ದಾರೆ.












Click it and Unblock the Notifications