ಪಾಕ್ ನೂತನ ಪ್ರಧಾನಿಗೆ ಅಭಿನಂದಿಸಿ ನಾವು ಶಾಂತಿ ಬಯಸುತ್ತೇವೆ ಎಂದ ಪ್ರಧಾನಿ
ನವದೆಹಲಿ, ಏಪ್ರಿಲ್ 12: ಪಾಕಿಸ್ತಾನದ 23 ನೇ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಅಭಿನಂದಿಸುವ ಸಂದರ್ಭದಲ್ಲೇ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ಹೊಸ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಕಾಶ್ಮೀರದ ಕುರಿತು ಶೆಹಬಾಜ್ ಷರೀಫ್ ಅವರ ಟೀಕೆಗಳಿಗೆ ತೀಕ್ಷ್ಣವಾದ ಪ್ರತ್ಯುತ್ತರ ಎಂಬಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಟ್ವೀಟ್ ಮಾಡಿದ್ದಾರೆ.
"ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಹೆಚ್ ಇ ಮಿಯಾನ್ ಮುಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು. ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

"ಭಾರತ ಶಾಂತಿ ಬಯಸುತ್ತದೆ. ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು. ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮೊದಲ ಭಾಷಣದಲ್ಲೇ ಜಮ್ಮು ವಿಚಾರ ಪ್ರಸ್ತಾಪಿಸಿದ ಪಾಕ್ ನೂತನ ಪ್ರಧಾನಿ
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಸೋಮವಾರ ಆಯ್ಕೆಯಾದರು. ಮೊದಲ ಭಾಷಣದಲ್ಲಿಯೇ ಅವರು ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಚೊಚ್ಚಲ ಭಾಷಣ ಮಾಡಿದ ಶೆಹಬಾಜ್ ಷರೀಫ್, ಕಾಶ್ಮೀರದ ಜನರಿಗೆ ರಾಜತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡುವ ಜೊತೆಗೆ ಈ ವಿಚಾರವನ್ನು ಎಲ್ಲಾ ಅಂತರಾಷ್ಟ್ರೀಯ ವೇದಿಕೆಗಳಿಗೆ ತೆಗೆದುಕೊಂಡು ಹೋಗುವ ಸುಳಿವು ನೀಡಿದರು.
"ಭಾರತದ ಜೊತೆ ಪಾಕಿಸ್ತಾನಕ್ಕೆ ಉತ್ತಮ ಬಾಂಧವ್ಯವನ್ನು ಬೆಳೆಸುವ ಉದ್ದೇಶ ಇದೆ. ಆದರೆ ಕಾಶ್ಮೀರ ವಿಷಯ ಇತ್ಯರ್ಥವಾಗುವವರೆಗೂ ಇದು ಸಾಧ್ಯವಾಗದು. ದೇಶ ಉದಯವಾದ ದಿನದಿಂದಲೂ ಭಾರತದ ಜೊತೆ ಪಾಕಿಸ್ತಾನ ಸಂಬಂಧ ಉತ್ತಮವಾಗಿಲ್ಲ. ಇದು ಬಹಳ ದುರಾದೃಷ್ಟಕರ ವಿಚಾರ," ಎಂದರು.
"ಭಾರತ 370ನೇ ವಿಧಿ ರದ್ದುಗೊಳಿಸಿದಾಗ ಇಮ್ರಾನ್ ಖಾನ್ ಭಾರತದ ವಿರುದ್ಧ ಯಾವುದೇ ಗಂಭೀರವಾದ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಲಿಲ್ಲ. ನಮ್ಮ ದೇಶದ ಪಕ್ಕದಲ್ಲಿ ಯಾರಿರಬೇಕು ಎಂದು ಆಯ್ಕೆ ಮಾಡಲಾಗದು. ನಾವು ನೆರೆಹೊರೆಯವರಾಗಿ ಉತ್ತಮ ಸಂಬಂಧ ಹೊಂದಿರಬೇಕು," ಎಂದು ಶೆಹಬಾಜ್ ಷರೀಫ್ ಹೇಳಿದರು.
ರಾಷ್ಟ್ರೀಯ ಅಸೆಂಬ್ಲಿಯ ಬಹುಪಾಲು ಸದಸ್ಯರು ಇಮ್ರಾನ್ ಖಾನ್ ವಿರುದ್ಧ ಮತ ಚಲಾಯಿಸಿದ ನಂತರ ಅವರ ವಿರುದ್ಧ ವಿರೋಧ ಪಕ್ಷದ ಮೈತ್ರಿಕೂಟವು ಸಲ್ಲಿಸಿದ ಅವಿಶ್ವಾಸ ನಿರ್ಣಯವು ಯಶಸ್ವಿಯಾಗಿದೆ. ಈ ಹಿನ್ನೆಲೆ ಇಮ್ರಾನ್ ಖಾನ್ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ ಅವಿಶ್ವಾಸ ನಿರ್ಣಯದಲ್ಲಿ ಪಾಕಿಸ್ತಾನದಲ್ಲಿ ಸೋಲು ಕಂಡ ಮೊದಲ ಪ್ರಧಾನಿ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಖಾನ್ ಈಗ ಪಾಕಿಸ್ತಾನದ ನೂತನ ಪ್ರಧಾನಿಯಾಗಿದ್ದಾರೆ.
ಶೆಹಬಾಜ್ ಷರೀಫ್ 1950 ರಲ್ಲಿ ಲಾಹೋರ್‌ನಲ್ಲಿ ಪಂಜಾಬಿ ಮಾತನಾಡುವ ಕಾಶ್ಮೀರಿ ಕೈಗಾರಿಕೋದ್ಯಮಿ ಕುಟುಂಬದಲ್ಲಿ ಜನಿಸಿದರು ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರರಾಗಿದ್ದಾರೆ.












Click it and Unblock the Notifications