ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಸಿಎಂ ಮಧುಕೋಡಾಗೆ 3 ವರ್ಷ ಜೈಲು
ನವದೆಹಲಿ, ಡಿಸೆಂಬರ್ 16: ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಸೇರಿ ಮೂವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ.
ಮಾಜಿ ಸಿಎಂ ಮಧು ಕೋಡಾ, ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ, ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಅವರ ಮೇಲೆ ಕ್ರಿಮಿನಲ್ ಸಂಚು, ವಂಚನೆ, ಭ್ರಷ್ಟಾಚಾರದ ಆರೋಪ ಹೊರೆಸಲಾಗಿತ್ತು.
ಐಪಿಸಿ ಸೆಕ್ಷನ್ 120 ಬಿ, 420, 409 ಅನ್ವಯ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದಾಖಲಾದ ಆರೋಪಗಳು ಸಾಬೀತಾಗಿವೆ. ಈ ಹಿನ್ನೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಮಧು ಕೋಡಾಗೆ 25 ಲಕ್ಷ ರು. ಹಾಗೂ ಗುಪ್ತಾಗೆ 1 ಲಕ್ಷ ದಂಡ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಜಾರ್ಖಂಡ್ ನ ರಾಜ್ ಹಾರ ನಾರ್ತ್ ಕಲ್ಲಿದ್ದಲು ಬ್ಲಾಕ್ ಗಳನ್ನು ಕೋಲ್ಕತಾ ಮೂಲದ ವಿನಿ ಐರನ್ ಅಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್(VISUL) ಗೆ ಹಂಚಿಕೆ ಮಾಡುವಲ್ಲಿ ಅವ್ಯವಹಾರ ನಡೆದಿದೆ ಎಂಬ ಪ್ರಕರಣದ ಅಂತಿಮ ತೀರ್ಪು ಇದಾಗಿದೆ.
ಜಾರಿ ನಿರ್ದೇಶನಾಲಯದ ಪ್ರಕಾರ ಸುಮಾರು 2500 ಕೋಟಿ ರು ಅವ್ಯವಹಾರ ಆರೋಪ ಹೊರೆಸಲಾಗಿತ್ತು. ನಂತರ 3400 ಕೋಟಿ ಅಕ್ರಮ ಬಯಲಿಗೆಳೆಯಲಾಗಿತ್ತು. ಸಿಬಿಐ ತಂಡ ದೇಶದಾದ್ಯಂತ ಸುಮಾರು 70 ಕಡೆಗಳಲ್ಲಿ ದಾಳಿ ನಡೆಸಿದ್ದರು. ಮಧುಕೋಡಾ ಅವರ ಸ್ಥಿರ ಹಾಗೂ ಚರಾಸ್ಥಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿತ್ತು.












Click it and Unblock the Notifications