Government Employee: ಕೇಂದ್ರ ಸರ್ಕಾರಿ ನೌಕರರ ವರ್ಗಾವಣೆಗೆ ಹೊಸ ನೀತಿ
ನವದೆಹಲಿ, ಡಿಸೆಂಬರ್ 26: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಸಿಐಎಸ್ಎಫ್ ಸಿಬ್ಬಂದಿಗಳ ವರ್ಗಾವಣೆ ನೀತಿಯನ್ನು ಪರಿಷ್ಕರಣೆ ಮಾಡಿದೆ. ಸ್ವಂತ ಜಿಲ್ಲೆಯ ಆಯ್ಕೆ, ಪತಿ-ಪತ್ನಿಗೆ ಒಂದೇ ನಗರದಲ್ಲಿ ಕೆಲಸ ಮಾಡುವ ಆಯ್ಕೆ ಸೇರಿದಂತೆ ವಿವಿಧ ಹೊಸ ನಿಯಮಗಳನ್ನು ಪರಿಚಯಿಸಿದೆ. ದೇಶದ ವಿಮಾನ ನಿಲ್ದಾಣಗಳು ಸೇರಿದಂತೆ ಹಲವು ಪ್ರಮುಖ ಕಟ್ಟಡಗಳ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನೋಡಿಕೊಳ್ಳುತ್ತದೆ.
ಸಿಐಎಸ್‌ಎಫ್ ನೂತನ ಮಾನವ ಸಂಪನ್ಮೂಲ ನೀತಿಯನ್ನು ಪ್ರಕಟಿಸಿದೆ. ವರ್ಗಾವಣೆ ಸಮಯದಲ್ಲಿ 10 ಸ್ಥಳದ ಆಯ್ಕೆಗೆ ಅವಕಾಶ ನೀಡಲಾಗಿದೆ. ಸಿಬ್ಭಂದಿಗಳು ಆಯ್ಕೆ ಮಾಡಿಕೊಂಡ ನಗರಕ್ಕೆ ಅವರನ್ನು ವರ್ಗಾವಣೆಗೊಳಿಸಲಾಗುತ್ತದೆ. ಪತಿ ಮತ್ತು ಪತ್ನಿ ಇಬ್ಬರೂ ಸಿಐಎಸ್‌ಎಫ್‌ನಲ್ಲಿದ್ದರೆ ಒಂದೇ ನಗರಕ್ಕೆ ವರ್ಗಾವಣೆಯನ್ನು ಸಹ ನೀಡಲಾಗುತ್ತದೆ.

2017ರಲ್ಲಿ ಸಿಐಎಸ್‌ಎಫ್ ವರ್ಗಾವಣೆ ನೀತಿಯನ್ನು ಜಾರಿಗೊಳಿಸಲಾಗಿತ್ತು. 2024ರಲ್ಲಿ ಇದನ್ನು ಪರಿಷ್ಕರಣೆ ಮಾಡಲಾಗಿದ್ದು, ಹಲವು ಹೊಸ ನಿಯಮಗಳನ್ನು ರೂಪಿಸಲಾಗಿದೆ. ಡಿಸೆಂಬರ್ 31 ರಿಂದ ಈ ಹೊಸ ವರ್ಗಾವಣೆ ನೀತಿ ಜಾರಿಗೆ ಬರಲಿದೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.
ಹಲವು ಹೊಸ ಆಯ್ಕೆ: ಸಿಐಎಸ್‌ಎಫ್‌ನ ಎಲ್ಲಾ ಸಿಬ್ಭಂದಿಗಳ ವರ್ಗಾವಣೆಯಲ್ಲಿ ಬದಲಾವಣೆ ತರಲಾಗಿದೆ. ವರ್ಗಾವಣೆ ನೀತಿಯನ್ನು ಸರಳೀಕರಣಗೊಳಿಸಲಾಗಿದೆ. ಮಹಿಳಾ ಸಿಬ್ಬಂದಿಗಳು ಮೊದಲ 6 ವರ್ಷ ಆಯ್ಕೆ ಮಾಡಿಕೊಳ್ಳದ ಸ್ಥಳಗಳಲ್ಲಿ ಕೆಲಸ ಮಾಡಬೇಕು. ಉಳಿದ ಸೇವಾ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ಥಳಗಳಲ್ಲಿ ಇರಬಹುದು ಎಂದು ನೂತನ ನೀತಿ ಹೇಳಿದೆ.
ಹೊಸ ನೀತಿಯಂತೆ ಎಲ್ಲಾ ವರ್ಗದ ಸಿಬ್ಬಂದಿ ವರ್ಗಾವಣೆ ಸಮಯದಲ್ಲಿ 10 ಸ್ಥಳದ ಆಯ್ಕೆ ಇದೆ. ಸಿಬ್ಬಂದಿಗಳು ತಮ್ಮ ವೈಯಕ್ತಿಕ ಅನುಕೂಲ ಆಧರಿಸಿ ಒಂದು ಸ್ಥಳ ಆಯ್ಕೆ ಮಾಡಬಹುದು. ಅಲ್ಲದೇ ಸೇವೆ 2 ವರ್ಷ ಮಾತ್ರ ಬಾಕಿ ಇದ್ದರೆ ಅವರ ವರ್ಗಾವಣೆಗೆ 3 ಸ್ಥಳದ ಆಯ್ಕೆ ನೀಡಲಾಗುತ್ತದೆ.
ಖಾಲಿ ಹುದ್ದೆಗಳ ಪೋಸ್ಟಿಂಗ್ ಮಾಡುವಾಗ ನಿವೃತ್ತರಾಗುವ ಸಿಬ್ಬಂದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ನೂತನ ನೀತಿಯಲ್ಲಿ ದಂಪತಿ, ಮಹಿಳಾ ಸಿಬ್ಬಂದಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಡಿಸೆಂಬರ್ 31 ರಿಂದ ಫೆಬ್ರವರಿ 15ರ ತನಕ ಆಯಾ ಹುದ್ದೆಗಳಿಗೆ ಅನುಗುಣವಾಗಿ ವಾರ್ಷಿಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಸಿಬ್ಬಂದಿಗಳ ಮಕ್ಕಳ ಶೈಕ್ಷಣಿಕ ವರ್ಷದ ಗೊಂದಲ ಬಗೆಹರಿಸಲು ಹೊಸ ನಿಯಮದಲ್ಲಿ ಬದಲಾವಣೆ ತರಲಾಗಿದೆ.
ಮಹಿಳಾ ಸಿಬ್ಬಂದಿಗಳು ಮೊದಲ 6 ವರ್ಷ ಆಯ್ಕೆ ಮಾಡಿಕೊಳ್ಳದ ಸ್ಥಳದಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕಿದೆ. ಉಳಿದ ಸೇವಾವಧಿ ಪೋಸ್ಟಿಂಗ್ ಆಯ್ಕೆ ಆಧಾರಿತ ಸ್ಥಳವಾಗಿರುತ್ತದೆ. ಪತಿ ಮತ್ತು ಪತ್ನಿ ಒಂದೇ ನಗರದಲ್ಲಿ ಕಾರ್ಯ ನಿರ್ವಹಣೆ ಮಾಡಲು ಸಹ ಹೊಸ ನೀತಿ ಅವಕಾಶವನ್ನು ನೀಡಿದೆ.
ಈ ಹೊಸ ನೀತಿಯಿಂದ ಸುಮಾರು 1.70 ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದೆ. ಅಲ್ಲದೇ ಹೊಸ ನೀತಿ ಅನ್ವಯ ಭದ್ರತಾ ಕಾರ್ಯದಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಲು, ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಯಲು ಸಹ ಸಹಾಯಕವಾಗಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.
ಸಿಐಎಸ್‌ಎಫ್ ಸಿಬ್ಬಂದಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಲು ಸಹ ಅನುಕೂಲವಾಗುವಂತೆ ಕೋಚ್, ತಜ್ಞರ ನಿಯೋಜನೆ ಹಾಗೂ ರಾಷ್ಟ್ರೀಯ ಕ್ರೀಡಾ ಒಕ್ಕೂಟದೊಂದಿಗೆ ಸಹಭಾಗಿತ್ವ ಕಲ್ಪಿಸಲಾಗುತ್ತದೆ. ಹೊಸ ನೀತಿಯ ಬಗ್ಗೆ ಸಿಐಎಸ್‌ಎಫ್ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications