ಕಾಂಗ್ರೆಸ್ ಅಭಿಮಾನಿಯೊಬ್ಬರಿಂದ ರಿಯಾಯಿತಿ ದರದಲ್ಲಿ ಕೋಳಿ ಮಾರಾಟ, ಎಲ್ಲಿ ಮತ್ತು ಯಾಕೆ?-ಮಾಹಿತಿ ತಿಳಿಯಿರಿ
ತೆಲಂಗಾಣ, ಡಿಸೆಂಬರ್, 07: ಇತ್ತೀಚೆಗಷ್ಟೇ ಛತ್ತಿಸ್‌ಘಡ, ಮಧ್ಯಪ್ರದೇಶ, ರಾಜಸ್ಥಾನ, ತೆಲಾಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಇನ್ನು ಮಿಕ್ಕಿದ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆ ಇಲ್ಲೊಬ್ಬ ಅಭಿಮಾನಿ ರಿಯಾಯಿತಿ ದರದಲ್ಲಿ ಕೋಳಿ ಮಾರಾಟ ಮಾಡಿರುವ ಘಟನೆ ನಡೆದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿ ಸರ್ಕಾರ ರಚನೆಯಾದ ಖುಷಿಯಲ್ಲಿ ಅಭಿಮಾನಿಯೊಬ್ಬರು ತಮ್ಮ ಕೋಳಿ ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ಕೋಳಿ ಮಾರುತ್ತಿರುವ ಘಟನೆ ಖಮ್ಮಂ ಜಿಲ್ಲೆಯ ಕರಾಯಗುಡೆಂ ಗ್ರಾಮದಲ್ಲಿ ನಡೆದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಖಮ್ಮಂ ಜಿಲ್ಲೆಯ ಪೆನುಬಳ್ಳಿ ಮಂಡಲದ ಕೋಳಿ ವ್ಯಾಪಾರಿ ನರಕುಲ್ಲಾ ರಾಘವರಾವ್ ಎಂಬುವವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ವಿಜಯೋತ್ಸವ ಆಚರಿಸುತ್ತಿರುವಾಗಲೇ ರಿಯಾಯಿತಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡಿದ್ದಾರೆ. ಮಂಗಳವಾರ ಹಾಗೂ ಬುಧವಾರ ಕೆ.ಜಿ.ಗೆ 120 ರೂಪಾಯಿನಂತೆ ಕೋಳಿ ಮಾರಿದ್ದರು ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿದ್ದವು. ಇತರ ಅಂಗಡಿಗಳಲ್ಲಿ ಕೆ.ಜಿ.ಗೆ 150 ರಿಂದ 160 ರೂಪಾಯಿಗೆ ಮಾರಾಟವಾಗುತ್ತಿದ್ದ ಕೋಳಿಯನ್ನು ವ್ಯಾಪಾರಿ ರಿಯಾಯಿತಿ ದರದಲ್ಲಿ ಮಾರಿದ್ದಾನೆ. ಖರೀದಿಸಲು ಗ್ರಾಮ ಮತ್ತು ಅಕ್ಕಪಕ್ಕದ ನಿವಾಸಿಗಳು ಅವರ ಅಂಗಡಿಯತ್ತ ಮುಗಿಬಿದ್ದಿದ್ದರು. ಹೀಗೆ ದಿನಕ್ಕೆ ಸರಾಸರಿ ನಾಲ್ಕು ಕ್ವಿಂಟಾಲ್ ಕೋಳಿ ಮಾರಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ವಿಚಾರ ಎಲ್ಲೆಡೆ ಗ್ರಾಸವಾಗಿದೆ.
ಕೋಳಿ ಅಂಗಡಿ ವ್ಯಾಪಾರಿ ರಾಘವರಾವ್ ಮಾತನಾಡಿ, ನಾನು ಕಾಂಗ್ರೆಸ್ ಅಭಿಮಾನಿಯಾಗಿದ್ದು, ಪಾಲೇರು, ಖಮ್ಮಂ, ಸತ್ತುಪಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ಪೊಂಗುಲೇಟಿ ಶ್ರೀನಿವಾಸರೆಡ್ಡಿ, ತುಮ್ಮಲ ನಾಗೇಶ್ವರರಾವ್, ಮಟ್ಟಾ ರಾಗಮೈಲಾ ಅವರ ಗೆಲುವನ್ನು ವಿಭಿನ್ನವಾಗಿ ಆಚರಿಸಬೇಕು ಎಂದು ತೀರ್ಮಾನ ಮಾಡಿದೆ. ಮಂಗಳವಾರ ಮತ್ತು ಬುಧವಾರದಂದು ಒಂದು ಕಿಲೋ ಕೋಳಿಯನ್ನು 120 ರೂಪಾಯಿಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದೇನೆ ಎಂದಿದ್ದಾರೆ.












Click it and Unblock the Notifications