Chhattisgarh Election opinion poll 2023: ಛತ್ತೀಸ್‌ಗಢ ಚುನಾವಣೆ ಸಮೀಕ್ಷೆ ಹೇಳುವುದೇನು- ಯಾರಿಗೆ ಗೆಲುವು? ಅಂಕಿಅಂಶ, ವಿವರ
ನವದೆಹಲಿ, ಅಕ್ಟೋಬರ್ 25: ಮುಂದಿನ ತಿಂಗಳು ಛತ್ತೀಸ್‌ಗಢ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಛತ್ತೀಸ್‌ಗಢದ ವಿಧಾನಸಭೆ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಮುಂಬರುವ ಛತ್ತೀಸ್‌ಗಢ ಚುನಾವಣೆಗೆ ಪಕ್ಷವು ಮೂರು ಹಂತಗಳಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯನ್ನು ಅಕ್ಟೋಬರ್ 15 ರಂದು ಬಿಡುಗಡೆ ಮಾಡಲಾಯಿತು. ಇದರಲ್ಲಿ 30 ಅಭ್ಯರ್ಥಿಗಳ ಹೆಸರುಗಳಿದ್ದವು.
ಕಾಂಗ್ರೆಸ್ ಪಕ್ಷವು ಪಟಾನ್‌ನಿಂದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಅಂಬಿಕಾಪುರದಿಂದ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ಅವರನ್ನು ಕಣಕ್ಕಿಳಿಸಿದೆ.

ರಾಜನಂದಗಾಂವ್‌ನಲ್ಲಿ ಗಿರೀಶ್ ದೇವಾಂಗನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಅಲ್ಲಿ ಅವರು ಬಿಜೆಪಿ ನಾಯಕ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರನ್ನು ಎದುರಿಸಲಿದ್ದಾರೆ.
90 ಸ್ಥಾನಗಳ ಪೈಕಿ 14 ಮಹಿಳೆಯರಿಗೆ ಪಕ್ಷ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ 90 ಅಭ್ಯರ್ಥಿಗಳ ಪೈಕಿ 33 ಎಸ್‌ಟಿ, 29 ಒಬಿಸಿ, 10 ಎಸ್‌ಸಿ ಮತ್ತು 15 ಸಾಮಾನ್ಯ ವರ್ಗದವರಾಗಿದ್ದರೆ. ಮೂವರು ಅಲ್ಪಸಂಖ್ಯಾತರಿದ್ದಾರೆ.
ಅಕ್ಟೋಬರ್ 18 ರಂದು ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 53 ಅಭ್ಯರ್ಥಿಗಳ ಹೆಸರುಗಳಿವೆ. ಮೂರನೇ ಪಟ್ಟಿಯನ್ನು ಅಕ್ಟೋಬರ್ 22 ರಂದು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಏಳು ಅಭ್ಯರ್ಥಿಗಳ ಹೆಸರುಗಳಿವೆ. ಮೂರನೇ ಪಟ್ಟಿಯೊಂದಿಗೆ ಪಕ್ಷವು ರಾಜ್ಯದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಬಿಜೆಪಿ ನಾಲ್ಕು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ.
2018 ರ ಛತ್ತೀಸ್‌ಗಢ ಚುನಾವಣೆಯಲ್ಲಿ, ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ವಿಜಯವನ್ನು ದಾಖಲಿಸಿತು. ಭೂಪೇಶ್ ಬಘೇಲ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ 15 ಸ್ಥಾನಗಳಿಗೆ ಕುಸಿದಿದ್ದರೆ, ಜೆಸಿಸಿ (ಜೆ) ಮತ್ತು ಬಿಎಸ್‌ಪಿ ಕ್ರಮವಾಗಿ 5 ಮತ್ತು 2 ಸ್ಥಾನಗಳನ್ನು ಗಳಿಸಿವೆ. ಸದ್ಯ ಕಾಂಗ್ರೆಸ್ ಬಲ 71 ಆಗಿದೆ.
ಲೋಕ್‌ಪೋಲ್ ಸಮೀಕ್ಷೆ ಹೇಳುವುದೇನು?
ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಜಯಗಳಿಸಲಿದೆ ಎಂದು ಲೋಕ್‌ಪೋಲ್ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಪಕ್ಷವು 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿಯು 32 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಲೋಕ್‌ಪೋಲ್ ಸಮೀಕ್ಷೆ ತಿಳಿಸಿದೆ.
ಕಾಂಗ್ರೆಸ್ ಪಕ್ಷವು ಶೇ 45 ಮತಗಳನ್ನು ಗಳಿಸಿದರೆ, ಬಿಜೆಪಿ ಶೇ 39 ಮತ ಪಡೆಯಲಿದೆ. ಪಕ್ಷೇತರರು ಶೇ 16 ರಷ್ಟು ಮತ ಪಡೆಯಲಿದ್ದಾರೆ ಎಂದು ಲೋಕ್‌ಪೋಲ್ ಸಮೀಕ್ಷೆ ಹೇಳಿದೆ.












Click it and Unblock the Notifications