Delhi Election 2025 Exit Poll: ದೆಹಲಿ ಎಕ್ಸಿಟ್ ಫೋಲ್ ಫಲಿತಾಂಶ, ಬಿಜೆಪಿಗೆ ಮೇಲುಗೈ
ನವದೆಹಲಿ, ಫೆಬ್ರವರಿ 05: ಬಹುನಿರೀಕ್ಷೆಯ ದೆಹಲಿಯ ವಿಧಾನಸಭಾ ಚುನಾವಣೆ ಮತದಾನ ಅಂತ್ಯಗೊಂಡಿದ್ದು, ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದ್ದು, ಮ್ಯಾಜಿಕ್ ನಂಬರ್ 36 ಯಾರ ಪಾಲಿಗೆ ಒಲಿಯಲಿದೆ ಕಾದು ನೋಡಬೇಕಿದೆ. ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಬಾರಿ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.
ಈಗಾಗಲೇ ಕೆಲವು ದೆಹಲಿ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ (Exit Poll 2025) ಪ್ರಕಟಗೊಂಡಿದ್ದು, ಚಾಣಕ್ಯ ಸ್ಟಾಟರ್ಜಿಸ್ ಎಕ್ಸಿಟ್ ಪೋಲ್ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ 70 ಸ್ಥಾನಗಳಲ್ಲಿ ಬಿಜೆಪಿಯು 39-44 ಸ್ಥಾನಗಳು ಹಾಗೂ ಆಮ್ ಆದ್ಮಿ ಪಕ್ಷವು 25-28 ಸ್ಥಾನ, ಕಾಂಗ್ರೆಸ್ 2-3 ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಈ ಸಮೀಕ್ಷೆಯ ಪ್ರಕಾರ ಇತರೆ ಒಂದೇ ಒಂದು ಸ್ಥಾನ ಗೆಲ್ಲುವುದು ಕೂಡ ಅನುಮಾನ ಎಂದು ಈ ಸಮೀಕ್ಷೆ ತಿಳಿಸಿದೆ.

ದೆಹಲಿ ವಿಧಾನಸಭೆ ಚುನಾವಣೆ 2025ರ ಅಖಾಡದಲ್ಲಿ ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದೆಹಲಿಯಲ್ಲಿ ಒಟ್ಟು 1.5 ಕೋಟಿ ನೋಂದಾಯಿತ ಮತದಾರರಿದ್ದಾರೆ. 83.76 ಲಕ್ಷ ಪುರುಷರು, 72.36 ಲಕ್ಷ ಮಹಿಳೆಯರು ಮತ್ತು 1,267 ತೃತೀಯ ಲಿಂಗಿ ಮತದಾರರಿದ್ದು, ಇಂದು ಒಂದೇ ಹಂತದಲ್ಲಿ ನಡೆದ ಮತದಾನದಲ್ಲಿ ಸಂಜೆ 5 ಗಂಟೆಯ ತನಕ ಶೇಕಡಾ 57ರಷ್ಟು ಮತದಾನ ಆಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ ತಿಳಿಸಿದೆ.
ಇನ್ನು ಕೇಂದ್ರ ದೆಹಲಿಯಲ್ಲಿ ಶೇಕಡ 55.24, ದೆಹಲಿ ಪೂರ್ವ ಶೇಕಡ 58.98, ನವದೆಹಲಿ 57.37, ದೆಹಲಿ ಉತ್ತರ ಶೇಕಡ 57.27, ದೆಹಲಿ ಈಶಾನ್ಯ 63.83, ದೆಹಲಿ ವಾಯುವ್ಯ 58.05, ದೆಹಲಿ ದಕ್ಷಿಣ ಶೇಕಡ 55.72, ದೆಹಲಿ ಆಗ್ನೇಯ ಶೇಕಡ 53.77, ದೆಹಲಿ ನೈಋತ್ಯ 58.86, ದೆಹಲಿ ಪಶ್ಚಿಮ 57.42ರಷ್ಟು ಮತದಾನ ನಡೆದಿದೆ. ಫೆಬ್ರವರಿ 8ರಂದು ದೆಹಲಿ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ದೆಹಲಿಯ ಜನತೆ ಫಲಿತಾಂಶಕ್ಕಾಗಿ ಕಾದಿದ್ದಾರೆ.












Click it and Unblock the Notifications