ಸಾರ್ವಜನಿಕರೇ ಹುಷಾರ್: ಜುಲೈನಲ್ಲೇ ಖಾಲಿ ಆಗುತ್ತಾ ಕೊರೊನಾ ಲಸಿಕೆ!?
ನವದೆಹಲಿ, ಜುಲೈ 04: ಶೇಕ್ ಅಹ್ಮದ್ ಲೆಕ್ಕಾಚಾರ.. ಇದು ಉತ್ತರ ಕರ್ನಾಟಕದ ಭಾಗದ ಆಡುಭಾಷೆಯಲ್ಲಿ ಹೆಚ್ಚು ಪ್ರಚಲಿತವಾಗಿರುವ ಮಾತು. ಇದೀಗ ಕೊರೊನಾವೈರಸ್ ಲಸಿಕೆ ಸರಬರಾಜು ವಿಚಾರದಲ್ಲಿ ಕೇಂದ್ರ ಸರ್ಕಾರ ಅದೇ ಶೇಕ್ ಅಹ್ಮದ್ ಲೆಕ್ಕಾಚಾರ ಹಾಕುತ್ತಿದೆಯಾ ಎಂಬ ಅನುಮಾನ ಮೂಡಿಸುತ್ತಿದೆ.
ಸರ್ಕಾರವೇ ನೀಡಿರುವ ಅಂಕಿ-ಅಂಶಗಳು ಈ ಅನುಮಾನಕ್ಕೆ ಪುಷ್ಟಿ ತುಂಬುತ್ತಿವೆ. ಭಾರತದಲ್ಲಿ 100 ರೂಪಾಯಿ ಹೊಂದಿರುವ ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 110 ರೂಪಾಯಿ ನೀಡಲು ಲೆಕ್ಕಾಚಾರ ಹಾಕಿಕೊಂಡಿದೆ. ಜುಲೈ ತಿಂಗಳಾಂತ್ಯದ ವೇಳೆಗೆ ಒಟ್ಟು 51.5 ಡೋಸ್ ಕೊರೊನಾವೈರಸ್ ಲಸಿಕೆ ಸರಬರಾಜಿಗೆ ಯೋಜನೆ ಹಾಕಿಕೊಳ್ಳುತ್ತಿರುವ ಕೇಂದ್ರದ ಬಳಿ ಅಷ್ಟೊಂದು ಪ್ರಮಾಣದ ಲಸಿಕೆಯೇ ಇಲ್ಲ.
ಜೂನ್ ತಿಂಗಳಾಂತ್ಯದ ವೇಳೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ 34 ಕೋಟಿ ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗಿದೆ. ಅದರ ಹೊರತಾಗಿ ಜುಲೈ ತಿಂಗಳಿನಲ್ಲಿ 12 ಕೋಟಿ ಡೋಸ್ ಲಸಿಕೆಯ ಲಭ್ಯತೆ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರ ಈಗಾಗಲೇ ಸರಬರಾಜು ಮಾಡಿರುವ 34 ಕೋಟಿ ಡೋಸ್ ಲಸಿಕೆ ಹಾಗೂ ಲಭ್ಯವಿರುವ 12 ಕೋಟಿ ಡೋಸ್ ಲಸಿಕೆ ಎರಡನ್ನೂ ಸೇರಿಸಿದರೆ ಕೇವಲ 46 ಕೋಟಿ ಡೋಸ್ ಲಸಿಕೆಯಷ್ಟೇ ಆಗಲಿದೆ. ಅಂದರೆ ಕೇಂದ್ರ ಸರ್ಕಾರ ಹಾಕಿಕೊಂಡಿರುವ 51.5 ಕೋಟಿ ಡೋಸ್ ಲಸಿಕೆ ಸರಬರಾಜು ಲೆಕ್ಕಕ್ಕೆ ಇನ್ನೂ 5.5 ಕೋಟಿ ಡೋಸ್ ಲಸಿಕೆ ಕಡಿಮೆ ಆಗುತ್ತದೆ. ಲಭ್ಯವಿರುವ ಪ್ರಮಾಣಕ್ಕಿಂತ ಶೇ.11ರಷ್ಟು ಪ್ರಮಾಣದ ಲಸಿಕೆ ಪೂರೈಕೆ ಮಾಡುವ ಬಗ್ಗೆ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.

ಶೇ.4.4ರಷ್ಟು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ
ದೇಶದಲ್ಲಿ ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳಲು ಅರ್ಹರಾಗಿರುವ 94 ಕೋಟಿ ಜನರ ಪೈಕಿ ಕೇವಲ 4.4ರಷ್ಟು ಫಲಾನುಭವಿಗಳಿಗೆ ಮಾತ್ರ ಎರಡು ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ಮುಂಬರುವ ಜುಲೈ ತಿಂಗಳಿನಲ್ಲಿ 12 ಕೋಟಿ ಡೋಸ್ ಲಸಿಕೆಯನ್ನು ಪೂರೈಸುವುದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಈ ಪೈಕಿ 10 ಕೋಟಿ ಡೋಸ್ ಕೊವಿಶೀಲ್ಡ್ ಹಾಗೂ 2 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯು ಸೇರಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ಲಸಿಕೆ?
ಕೊರೊನಾವೈರಸ್ ಲಸಿಕೆ ವಿತರಣೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅನುಮತಿ ನೀಡಲಾಗಿದೆ. ಈ ಹಿನ್ನೆಲೆ ಜುಲೈ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಸರಬರಾಜು ಆಗಲಿರುವ ಒಟ್ಟು 10 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯಲ್ಲಿ 7.5 ಕೋಟಿ ಡೋಸ್ ಸರ್ಕಾರಿ ಆಸ್ಪತ್ರೆ ಹಾಗೂ 2.5 ಕೋಟಿ ಡೋಸ್ ಖಾಸಗಿ ಆಸ್ಪತ್ರೆಗೆ ಸರಬರಾಜು ಮಾಡಲಾಗುತ್ತದೆ. ಅದೇ ರೀತಿ ಲಭ್ಯವಿರುವ 2 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯಲ್ಲಿ 1.5 ಕೋಟಿ ಡೋಸ್ ಸರ್ಕಾರಿ ಹಾಗೂ 50 ಲಕ್ಷ ಡೋಸ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮೀಸಲು ಇರಿಸಲಾಗಿದೆ.

ಪ್ರತಿನಿತ್ಯ ಸರಾಸರಿ 39 ಲಕ್ಷ ಜನರಿಗೆ ಲಸಿಕೆ
ಕಳೆದ ಜೂನ್ ತಿಂಗಳಿನಲ್ಲಿ ಒಂದೇ ದಿನ 85 ಲಕ್ಷ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಿದ್ದು ದಾಖಲಾಗಿತ್ತು. ತದನಂತರದಲ್ಲಿ ಲಸಿಕೆ ವಿತರಣೆ ಪ್ರಮಾಣ ಕ್ರಮೇಣ ಇಳಿಮುಖವಾಗಿತ್ತು. ಜೂನ್ ತಿಂಗಳಿನಲ್ಲಿ ದಿನಕ್ಕೆ ಸರಾಸರಿ 39 ಲಕ್ಷ ಜನರಿಗೆ ಲಸಿಕೆ ನೀಡಲಾಗಿತ್ತು. ಅದೇ ರೀತಿ ಜುಲೈ ತಿಂಗಳಿನಲ್ಲಿ ಕೇವಲ 12 ಕೋಟಿ ಡೋಸ್ ಲಸಿಕೆ ಲಭ್ಯವಿದ್ದು, ನಿತ್ಯ ಸರಾಸರಿ 40 ಲಕ್ಷ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡುವುದಕ್ಕೆ ಸಾಧ್ಯವಾಗುತ್ತದೆ.

90 ಲಕ್ಷ ಜನರಿಗೆ ಕೊವಿಡ್ ಲಸಿಕೆ ನೀಡುವುದು ಅನಿವಾರ್ಯ
"ಭಾರತದಲ್ಲಿ 2021ರ ವರ್ಷಾಂತ್ಯದ ವೇಳೆಗೆ 94 ಕೋಟಿ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಈ ನಿಗದಿತ ಗುರಿ ತಲುಪುದಕ್ಕೆ ಕನಿಷ್ಠ ಪ್ರತಿನಿತ್ಯ 90 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ ವಿತರಿಸುವುದು ಅನಿವಾರ್ಯವಾಗುತ್ತದೆ. ಲಸಿಕೆಯ ಅಭಾವ ಮತ್ತು ಕೊರತೆ ಸೃಷ್ಟಿಯಂತ ಸಮಸ್ಯೆಗಳಿಂದ ಲಸಿಕೆ ಗುರಿಯನ್ನು ಮುಟ್ಟುವುದು ಅಸಾಧ್ಯ,ಠ ಎಂದು ಜೈವಿಕ ಸಂಖ್ಯಾಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ಲಸಿಕೆ ಸಂಗ್ರಹಕ್ಕೆ ಕಡಿವಾಣ
ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಮೊದಲಿಗೆ ನೇರವಾಗಿ ಲಸಿಕೆ ಉತ್ಪಾದಕ ಕಂಪನಿಗಳಿಂದಲೇ ಶೇ.25ರಷ್ಟು ಲಸಿಕೆಯನ್ನು ಖರೀದಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಹೀಗೆ ಖರೀದಿಸಿದ ಕೊವಿಡ್-19 ಲಸಿಕೆಯಲ್ಲಿ ಖಾಸಗಿ ಆಸ್ಪತ್ರೆಗಳು ಅರ್ಧದಷ್ಟು ಲಸಿಕೆಯನ್ನು ನೀಡಿ, ಉಳಿದ ಪ್ರಮಾಣದ ಲಸಿಕೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ರೀತಿಯ ಲಸಿಕೆ ಸಂಗ್ರಹಿಸುವುದರಿಂದ ಕೃತಕ ಅಭಾವ ಸೃಷ್ಟಿಸುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇನ್ನೊಂದು ಕಡೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಕೊರತೆ ಬಾಧಿಸುತ್ತಿರುವ ಹಿನ್ನೆಲೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಭಾರತದ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಮಾರ್ಗಸೂಚಿ
* ಕೊರೊನಾವೈರಸ್ ಉತ್ಪಾದಕ ಕಂಪನಿಗಳಿಂದ ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ನೇರವಾಗಿ ಲಸಿಕೆ ಖರೀದಿಸುವುದಕ್ಕೆ ಅವಕಾಶವಿಲ್ಲ.
* ಕೊ-ವಿನ್ ಅಪ್ಲಿಕೇಶನ್ ಮೂಲಕ ಎಷ್ಟು ಪ್ರಮಾಣದ ಲಸಿಕೆಯನ್ನು ಖರೀದಿಸುತ್ತೇವೆ ಎಂಬ ಬಗ್ಗೆ ಮುಂಚಿತವಾಗಿ ಆರ್ಡರ್ ಮಾಡಬೇಕು
* ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮೂಲಕ ತಾವು ಖರೀದಿಸುವ ಲಸಿಕೆಗೆ ಹಣ ಪಾವತಿ ಮಾಡಬೇಕು
* ಲಸಿಕೆ ಖರೀದಿ ನಂತರದಲ್ಲಿ ಖರೀದಿಸಿರುವ ಲಸಿಕೆ ಹಾಗೂ ನೀಡಿರುವ ಲಸಿಕೆ ಪ್ರಮಾಣದ ಬಗ್ಗೆ ಲೆಕ್ಕ ನೀಡುವುದು
* ಉತ್ಪಾದಕ ಕಂಪನಿಗಳಿಂದ ಶೇ.25ರಷ್ಟು ಲಸಿಕೆಯನ್ನು ಮಾತ್ರ ಖರೀದಿಸುವುದಕ್ಕೆ ಅನುಮತಿ
* ಜುಲೈ 1ರಿಂದಲೇ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಸಂಬಂಧಿಸಿದ ಮಾರ್ಗಸೂಚಿ ಜಾರಿ

ಭಾರತದಲ್ಲಿ ನಾಲ್ಕು ಕಂಪನಿ ಲಸಿಕೆಗೆ ಅನುಮೋದನೆ
ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್-ವಿ ಹಾಗೂ ಇತ್ತೀಚಿಗೆ ಅನುಮೋದನೆ ಪಡೆದಿರುವ ಮಾಡೆರ್ನಾ ಲಸಿಕೆಯನ್ನು ಭಾರತದಲ್ಲಿ ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ.

33.57 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು.
ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ. ದೇಶದಲ್ಲಿ ಈವರೆಗೂ 35,12,21,306 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಕಂಡು ಬಂದಿದೆ. ದೇಶದಲ್ಲಿ ಒಂದೇ ದಿನ 43,071 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 52,299 ಸೋಂಕಿತರು ಗುಣಮುಖರಾಗಿದ್ದರೆ, 955 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,05,45,433ಕ್ಕೆ ಏರಿಕೆಯಾಗಿದ್ದು, 2,96,58,078 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ 4,02,005 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, 4,85,350 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications