ಮನೆಯಲ್ಲೇ ಜ್ವರ, ಶೀತ ಅಂತ ಈ ಮಾತ್ರೆ ತೆಗೆದುಕೊಂಡು ಬಿಟ್ಟೀರಾ ಜೋಕೆ... 156 ಔಷಧಗಳು ನಿಷೇಧ!
ಜ್ವರ, ಶೀತ, ಅಲರ್ಜಿ, ನೋವು ನಿವಾರಕ ಅಂತ ಅಪ್ಪಿ ತಪ್ಪಿ ಈ ಮಾತ್ರೆಗಳನ್ನು ತೆಗೆದುಕೊಂಡು ಬಿಡಬೇಡಿ. ಯಾಕೆಂದರೆ ಈ ಔಷಧಗಳನ್ನು ನಿಷೇಧ ಮಾಡಲಾಗಿದೆ. ಸಾಮಾನ್ಯವಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಬಳಿ ಬಹುತೇಕ ಜನ ಹೋಗುವುದಿಲ್ಲ. ಕೆಲವೊಂದು ಮಾತ್ರೆಗಳನ್ನು ಸ್ವತ: ಖರೀದಿಸಿ ತಂದು ತೆಗೆದುಕೊಳ್ಳುತ್ತಾರೆ. ಆದರೆ ಇಂತಹ ಮಾತ್ರೆಗಳಲ್ಲಿ ಕೆಲ ಮಾತ್ರೆಗಳನ್ನು ಸೇವಿಸಲು ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ. ಹಾಗಾದರೆ ಆ ಮಾತ್ರೆಗಳು ಯಾವುವು ಎನ್ನುವುದನ್ನು ಈಗ ತಿಳಿಯೋಣ.
156 ಬಗೆಯ ಔಷಧಗಳನ್ನು ಕೇಂದ್ರ ಸರಕಾರ ಗುರುವಾರ ನಿಷೇಧಿಸಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಔಷಧ ರಾಸಾಯನಿಕಗಳ ಸಂಯೋಜನೆಯ ಫಿಕ್ಸೆಡ್ ಡೋಸ್ ಡ್ರಗ್ಸ್‌ಗಳನ್ನು (ಎಫ್‌ಡಿಸಿ) ಕಾಕ್‌ಟೈಲ್ ಡ್ರಗ್ಸ್ ಎಂದೂ ಕರೆಯಲಾಗುತ್ತದೆ. ಹೀಗಾಗಿ ಈ ಮಾತ್ರೆಗಳು ಸೇವನೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ.

ಆ ಮಾತ್ರೆಗಳು ಅಂದರೆ ಅಸೆಕ್ಲೊಫೆನಾಕ್ 50ಎಂಜಿ+ ಪ್ಯಾರಸಿಟಿಮಲ್ 125 ಎಂಜಿ, ಮೆಫೆನಾಮಿಕ್ ಆಸಿಡ್ + ಪ್ಯಾರಸಿಟಮಲ್ ಇಂಜೆಕ್ಸನ್, ಸಿಟ್ರಿಝಿನ್ ಎಚ್‌ಸಿಐ+ ಪ್ಯಾರಸಿಟಮಲ್ + ಫೆನೈಲಿಫ್ರಿನ್ ಎಚ್‌ಸಿಟಿ ಸೇರಿದಂತೆ 156 ಎಫ್‌ಡಿಸಿ ಔಷಧಗಳ ಉತ್ಪಾದನೆ, ಮಾರಾಟ, ವಿತರಣೆ ಮೇಲೆ ನಿಷೇಧ ಹೇರಲಾಗಿದೆ.
ಮಾನವ ಜೀವ ಕಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಗುಣಗಳುಳ್ಳ ಔಷಧಗಳನ್ನು 1940ರ ಡ್ರಗ್ ಮತ್ತು ಕಾಸ್ಮೆಟಿಕ್ ಕಾಯಿದೆ ಸೆ.26ಎ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಎಫ್‌ಡಿಸಿ ಅಂದರೆ ಫಿಕ್ಸೆಡ್ ಡೋಸ್ ಕಾಂಬಿನೇಷನ್ ಎಂದು ಕರೆಯಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳನ್ನು ಇವು ಹೊಂದಿರುತ್ತವೆ. ಇದನ್ನು ಕಾಕ್‌ಟೈಲ್ ಡ್ರಗ್ಸ್ ಎಂದೂ ಕೂಡ ಕರೆಯಲಾಗುತ್ತದೆ.

ಎಫ್‌ಡಿಸಿ ಔಷಧಿಗಳು ಮಾನವನಿಗೆ ಭಾರೀ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸರಿಯಾಗಿ ಪರಿಗಣಿಸಿ ಅವುಗಳ ಮೇಲೆ ನಿಷೇಧ ಹೇರಿದೆ. ಇದರ ಜೊತೆಗೆ ಪ್ಯಾರೆಸಿಟಮಾಲ್, ಟ್ರಮಾಡಾಕ್, ಟೌರಿನ್ ಮತ್ತು ಕೆಫೀನ್ ಜೊತೆ ಗೂಡಿ ತಯಾರಿಸುವ ಮಾತ್ರೆಗಳನ್ನು ಕೇಂದ್ರ ನಿಷೇಧಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಆಗಸ್ಟ್ 12ರಂದು ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಪ್ರಕಾರ, ಕೆಲವು ಫಾರ್ಮಾ ಕಂಪನಿಗಳು ತಯಾರಿಸುವ ನೋವು ನಿವಾರಕ ಔಷಧಿಗಳಲ್ಲಿ ಒಂದಾದ 'Aceclofenac 50mg + Paracetamol 125 mg' ಮಾತ್ರೆಯನ್ನು ಸರ್ಕಾರ ನಿಷೇಧಿಸಿದೆ.
ಮನುಷ್ಯ ಆರೋಗ್ಯವಾಗಿರಲು ನಮ್ಮ ಆಹಾರ ಪದ್ಧತಿ ಸರಿಯಾಗಿರಬೇಕು. ನಮ್ಮ ಜೀವನ ಶೈಲಿಯನ್ನು ಸರಿಯಾಗಿ ರೂಢಿಸಿಕೊಂಡಿರಬೇಕು. ಅದಾಗ್ಯೂ ಕಾಲ ಕಾಲಕ್ಕೆ ನಾವು ಅನಾರೋಗ್ಯಕ್ಕೆ ಗುರಿಯಾಗುತ್ತೇವೆ. ಇದಕ್ಕೆ ಕಾರಣ ನಮ್ಮ ಸುತ್ತಲು ಇರುವ ಪರಿಸರ ಆಗಿರಬಹುದು. ಹವಮಾನದಲ್ಲಿ ಆಗುವ ಬದಲಾವಣೆ ಕೂಡ ಇದಕ್ಕೆ ಕಾರಣ ಆಗಿರಬಹುದು. ಇದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮಾತ್ರೆ ತೆಗೆದುಕೊಳ್ಳುವವರು ಹೆಚ್ಚಾಗಿದ್ದಾರೆ.
ಆರೋಗ್ಯ ತೀರಾ ಹದಗೆಟ್ಟಾಗ ಮಾತ್ರ ನಾವು ವೈದ್ಯರ ಸಂಪರ್ಕ ಮಾಡುತ್ತೇವೆ. ಆದರೆ ವೈದ್ಯರ ಸಲಹೆ ಇಲ್ಲದೆ, ಯಾರೋ ಸಲಹೆಯನ್ನು ನಂಬಿ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಬಿಡುವುದು ಉತ್ತಮ. ಯಾಕೆಂದರೆ ನಿಷೇಧಿತ ಮಾತ್ರೆಗಳು ನಿಷೇಧವಾದರೂ ಏನೂ ಅರಿಯದ ವ್ಯಕ್ತಿಗಳಿಗೆ ಮಾರಾಟ ಮಾಡುವವರು ನಮ್ಮ ನಡುವೆ ಇದ್ದಾರೆ. ಈ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು.












Click it and Unblock the Notifications