CBSE 12ನೇ ತರಗತಿ ಪರೀಕ್ಷೆಗೆ ಬಂತು ಡಿಜಿಟಲ್ ಟಚ್ ; ಇನ್ಮುಂದೆ ಕಂಪ್ಯೂಟರ್‌ನಲ್ಲೇ ಮೌಲ್ಯಮಾಪನ
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ರ ಶೈಕ್ಷಣಿಕ ಸಾಲಿನ ಬೋರ್ಡ್ ಪರೀಕ್ಷೆಗಳಲ್ಲಿ ಮಹತ್ವದ ಮತ್ತು ಐತಿಹಾಸಿಕ ಬದಲಾವಣೆಯೊಂದನ್ನು ಘೋಷಿಸಿದೆ. ತಂತ್ರಜ್ಞಾನದ ಅಳವಡಿಕೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ನಿರ್ಧರಿಸಿದೆ. ಇದಕ್ಕೆ 'ಆನ್-ಸ್ಕ್ರೀನ್ ಮಾರ್ಕಿಂಗ್' (On-Screen Marking - OSM) ಎಂದು ಹೆಸರಿಸಲಾಗಿದ್ದು, ಇದು 2026ರ ಪರೀಕ್ಷೆಗಳಿಂದಲೇ ಜಾರಿಗೆ ಬರಲಿದೆ.
ಏನಿದು ಹೊಸ ಬದಲಾವಣೆ?
ಇಲ್ಲಿಯವರೆಗೆ ಶಿಕ್ಷಕರು ಪರೀಕ್ಷಾ ಕೇಂದ್ರಗಳಲ್ಲಿ ಕುಳಿತು ಉತ್ತರ ಪತ್ರಿಕೆಗಳನ್ನು ಭೌತಿಕವಾಗಿ (physical evaluation) ಮೌಲ್ಯಮಾಪನ ಮಾಡುತ್ತಿದ್ದರು. ಆದರೆ ಇನ್ಮುಂದೆ 12ನೇ ತರಗತಿಯ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಪರದೆಯ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಹೊಸ ನಿಯಮ ಅನ್ವಯಿಸುವುದಿಲ್ಲ. 2026ರ ಸಾಲಿನಲ್ಲಿ 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಂದಿನಂತೆ ಭೌತಿಕ ಮಾದರಿಯಲ್ಲೇ ಮುಂದುವರಿಯಲಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಆಗುವ ಲಾಭಗಳೇನು ?
ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಡಾ.ಸಂಯಮ್ ಭಾರದ್ವಾಜ್ ಅವರು ಹೊರಡಿಸಿರುವ ಅಧಿಕೃತ ಸುತ್ತೋಲೆಯ ಪ್ರಕಾರ, ಈ ಹೊಸ ಪದ್ಧತಿಯಿಂದ ಹಲವಾರು ಪ್ರಯೋಜನಗಳಿವೆ:
1.ದೋಷಗಳ ನಿವಾರಣೆ: ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ಕೂಡುವಾಗ (Totalling) ಆಗುವ ತಪ್ಪುಗಳನ್ನು ಈ ತಂತ್ರಜ್ಞಾನ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ.
2.ವೇಗದ ಫಲಿತಾಂಶ: ಮ್ಯಾನ್ಯುವಲ್ ಕೆಲಸ ಕಡಿಮೆಯಾಗುವುದರಿಂದ ಫಲಿತಾಂಶ ಪ್ರಕಟಣೆ ಪ್ರಕ್ರಿಯೆ ಚುರುಕಾಗುತ್ತದೆ.
3.ಮರುಮೌಲ್ಯಮಾಪನ ಅಗತ್ಯವಿಲ್ಲ: ವ್ಯವಸ್ಥೆಯೇ ನಿಖರವಾಗಿರುವುದರಿಂದ, ಫಲಿತಾಂಶದ ನಂತರ ಅಂಕಗಳ ಪರಿಶೀಲನೆಗೆ ಅರ್ಜಿ ಹಾಕುವ ಪ್ರಮೇಯವೇ ಬರುವುದಿಲ್ಲ ಎಂದು ಮಂಡಳಿ ಹೇಳಿದೆ.
4.ಶಿಕ್ಷಕರಿಗೆ ಅನುಕೂಲ: ಮೌಲ್ಯಮಾಪನಕ್ಕಾಗಿ ಶಿಕ್ಷಕರು ಬೇರೆ ಊರುಗಳಿಗೆ ಅಥವಾ ಕೇಂದ್ರಗಳಿಗೆ ಅಲೆಯಬೇಕಿಲ್ಲ. ತಮ್ಮ ಶಾಲೆಯಲ್ಲೇ ಕುಳಿತು ಸುರಕ್ಷಿತವಾಗಿ ಲಾಗಿನ್ ಆಗಿ ಪೇಪರ್ ತಿದ್ದಬಹುದು. ಇದು ಅವರ ದೈನಂದಿನ ಬೋಧನೆಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.
ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ
ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸಿಬಿಎಸ್‌ಇ ಎಲ್ಲ ಸಂಯೋಜಿತ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಲು ಸೂಚಿಸಿದೆ. ಪ್ರಮುಖವಾಗಿ ಶಾಲೆಗಳಲ್ಲಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಇರಬೇಕು. ವಿಂಡೋಸ್ 8 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಕಂಪ್ಯೂಟರ್‌ಗಳು, ಕನಿಷ್ಠ 4GB RAM, ವೇಗದ ಇಂಟರ್ನೆಟ್ ಸಂಪರ್ಕ (ಕನಿಷ್ಠ 2 Mbps) ಮತ್ತು ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆದೇಶಿಸಿದೆ.
ತರಬೇತಿ ಮತ್ತು ಸಿದ್ಧತೆ
ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು. OASIS ಐಡಿ ಹೊಂದಿರುವ ಶಿಕ್ಷಕರಿಗೆ ಲಾಗಿನ್ ಐಡಿಗಳನ್ನು ನೀಡಿ, ಪ್ರಾಯೋಗಿಕವಾಗಿ ಪೇಪರ್ ತಿದ್ದುವುದನ್ನು ಕಲಿಸಲಾಗುತ್ತದೆ. ಯಾವುದೇ ತಾಂತ್ರಿಕ ತೊಂದರೆ ಎದುರಾದರೆ ನೆರವಾಗಲು ಪ್ರತ್ಯೇಕ ಸಹಾಯವಾಣಿ ಆರಂಭಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಈ ನಿರ್ಧಾರವು ಕೇವಲ ಭಾರತದ ವಿದ್ಯಾರ್ಥಿಗಳಿಗಲ್ಲದೆ, ವಿದೇಶಗಳಲ್ಲಿರುವ ಸುಮಾರು 26 ದೇಶಗಳ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರಲಿದೆ. ಒಟ್ಟಾರೆಯಾಗಿ ಪ್ರತಿ ವರ್ಷ ಸುಮಾರು 46 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್‌ಇ ಪರೀಕ್ಷೆ ಬರೆಯುತ್ತಾರೆ. ಪರಿಸರ ಸ್ನೇಹಿಯಾಗಿರುವ ಈ 'ಪೇಪರ್‌ಲೆಸ್' ಮೌಲ್ಯಮಾಪನ ಪದ್ಧತಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications