CBSE 10ನೇ ತರಗತಿ 2ನೇ ಬೋರ್ಡ್ ಪರೀಕ್ಷೆ: ಹಾಲ್ ಟಿಕೆಟ್ ಬಿಡುಗಡೆ, ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರವನ್ನು ಇದಾಗಲೇ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಸಿಬಿಎಸ್‌ಇ ಯ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡುವ ತಮ್ಮ ಹಾಲ್ ಟಿಕೆಟ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯು ಪರೀಕ್ಷಾ ಕೇಂದ್ರದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕೂಡ ಪ್ರಕಟಿಸಿದೆ.
ಸಿಬಿಎಸ್‌ಇ 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಯು ಮೇ 15, 2026 ರಂದು ಪ್ರಾರಂಭವಾಗಿ, ಮೇ 21, 2026 ರಂದು ಮುಕ್ತಾಯಗೊಳ್ಳಲಿದೆ. ಪರೀಕ್ಷೆಯು ಒಂದೇ ಪಾಳಿಯಲ್ಲಿ ನಡೆಯಲಿದ್ದು, ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಪರೀಕ್ಷಾ ಸಮಯವನ್ನು ನಿಗದಿಪಡಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದು ಅಂಕಗಳನ್ನು ಸುಧಾರಿಸಿಕೊಳ್ಳಲು ಸಿಕ್ಕಿರುವ ಮಹತ್ವದ ಅವಕಾಶವಾಗಿದೆ.

ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
1. ಮೊದಲಿಗೆ ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡಿ.
2. ಮುಖಪುಟದಲ್ಲಿ ಲಭ್ಯವಿರುವ 'CBSE 10th Admit Card 2026' ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಹೊಸ ಪೇಜ್ ತೆರೆದುಕೊಳ್ಳುತ್ತದೆ, ಅಲ್ಲಿ ವಿದ್ಯಾರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಸರಿಯಾಗಿ ನಮೂದಿಸಬೇಕು.
4. ನಂತರ 'Submit' ಬಟನ್ ಒತ್ತಿದರೆ, ನಿಮ್ಮ ಪ್ರವೇಶ ಪತ್ರ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
5. ಪ್ರವೇಶ ಪತ್ರದಲ್ಲಿರುವ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, ನಂತರ ಪೇಜ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
6. ಪರೀಕ್ಷಾ ದಿನದ ಉಲ್ಲೇಖಕ್ಕಾಗಿ ಪ್ರವೇಶ ಪತ್ರದ ಪ್ರಿಂಟ್‌ಔಟ್ (ಹಾರ್ಡ್ ಕಾಪಿ) ತೆಗೆದಿಟ್ಟುಕೊಳ್ಳುವುದು ಕಡ್ಡಾಯ.
ವಿದ್ಯಾರ್ಥಿಗಳಿಗೆ ಬೋರ್ಡ್ ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು
ಸಿಬಿಎಸ್‌ಇ 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಶಾಲೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಂಡಳಿಯು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
1. ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ನಂತರ ಬಂದರೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.
2. ಸ್ಥಳೀಯ ಹವಾಮಾನ ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮುಂಚಿತವಾಗಿಯೇ ತಮ್ಮ ಪ್ರಯಾಣವನ್ನು ಯೋಜಿಸಬೇಕು.
3. ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಶಾಲಾ ಸಮವಸ್ತ್ರ ಧರಿಸಿ ಬರಬೇಕು. ಇದರ ಜೊತೆಗೆ ಶಾಲೆಯ ಗುರುತಿನ ಚೀಟಿ (ID Card) ಹಾಗೂ ಸಿಬಿಎಸ್‌ಇ ನೀಡಿರುವ ಪ್ರವೇಶ ಪತ್ರವನ್ನು ತಮ್ಮೊಂದಿಗೆ ತರುವುದು ಕಡ್ಡಾಯ.
4. ಪರೀಕ್ಷಾ ಕೇಂದ್ರದೊಳಗೆ ಕೇವಲ ಸೂಚಿಸಲಾದ ಪೆನ್, ಪೆನ್ಸಿಲ್‌ನಂತಹ ಅಗತ್ಯ ಸ್ಟೇಷನರಿ ವಸ್ತುಗಳಿಗೆ ಮಾತ್ರ ಅವಕಾಶವಿದೆ.
5. ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಆವರಣದೊಳಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
6. ವಾಟ್ಸಾಪ್, ಟೆಲಿಗ್ರಾಮ್, ಯೂಟ್ಯೂಬ್, ಎಕ್ಸ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವುದಾಗಲಿ ಅಥವಾ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಹಂಚಿಕೊಳ್ಳುವುದಾಗಲಿ ಮಾಡಬಾರದು ಎಂದು ಬೋರ್ಡ್ ಎಚ್ಚರಿಕೆ ನೀಡಿದೆ. ಹೆಚ್ಚಿನ ಹಾಗೂ ಅಧಿಕೃತ ಮಾಹಿತಿಗಾಗಿ ವಿದ್ಯಾರ್ಥಿಗಳು ಸಿಬಿಎಸ್‌ಇ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.












Click it and Unblock the Notifications