ಕೆಲಸ ಹೋದ್ರೂ ಖುಷಿ ಪಡುತ್ತಿರುವ ಕ್ಯಾನ್ವಾ ಉದ್ಯೋಗಿಗಳು: ಉದ್ಯೋಗ ಕಡಿತವನ್ನ 'ಡ್ರೀಮ್ ಲೇಆಫ್' ಎನ್ನುತ್ತಿರುವುದೇಕೆ?
ಐಟಿ ವಲಯದಲ್ಲಿ ಲೇಆಫ್ ಅಥವಾ ಉದ್ಯೋಗ ಕಡಿತ ಎಂದರೆ ನೌಕರರ ಪಾಲಿಗೆ ಅದೊಂದು ಬರಸಿಡಿಲೇ ಎನ್ನಬಹುದು. ರಾತ್ರೋರಾತ್ರಿ ಸಿಸ್ಟಮ್ ಲಾಗ್ ಔಟ್ ಮಾಡಿ, ಅಥವಾ ಬೆಳ್ಳಂಬೆಳಗೆ ಮೇಲ್ ಕಳಿಸಿ ಕೆಲಸದಿಂದ ತೆಗೆದುಹಾಕುವ ಬಹುತೇಕ ಕಂಪನಿಗಳ ನಿರ್ಧಾರಗಳನ್ನ ನಾವು ಈಗಾಗಲೇ ಸುಮಾರಷ್ಟು ನೋಡಿದ್ದೇವೆ ಹಾಗೆ ಕೇಳಿದ್ದೇವೆ. ಇಂದರಿಂದಾಗಿ ಒಂದಿಷ್ಟು ನೌಕರರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
ಆದರೆ, ಆಸ್ಟ್ರೇಲಿಯಾ ಮೂಲದ ಜನಪ್ರಿಯ ಗ್ರಾಫಿಕ್ ಡಿಸೈನ್ ವೇದಿಕೆಯಾದ 'ಕ್ಯಾನ್ವಾ' (Canva) ಈ ವಿಚಾರದಲ್ಲಿ ಸಂಪೂರ್ಣ ಭಿನ್ನವಾಗಿ ನಿರ್ಧಾರ ತೆಗೆದುಕೊಂಡಿದೆ. ಸಂಸ್ಥೆಯು ತನ್ನ ಶೇ. 22ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸುತ್ತಿದೆ. ಆದರೂ, ಕೆಲಸ ಕಳೆದುಕೊಂಡ ನೌಕರರು ಬೇಸರ ಮಾಡಿಕೊಳ್ಳುವ ಬದಲು ಇದನ್ನು ಡ್ರೀಮ್ ಲೇಆಫ್ ಎಂದು ಕರೆಯುತ್ತಿದ್ದಾರೆ. ಕಂಪನಿ ನೀಡುತ್ತಿರುವ ಬಂಪರ್ ಎಕ್ಸಿಟ್ ಪ್ಯಾಕೇಜ್‌ಯೇ ಇದಕ್ಕೆ ಪ್ರಮುಖ ಕಾರಣ.

ಆಕರ್ಷಕ ಕ್ಯಾನ್ವಾ ಎಕ್ಸಿಟ್ ಪ್ಯಾಕೇಜ್: 6 ತಿಂಗಳ ಸಂಬಳದ ಭದ್ರತೆ
ಸಾಮಾನ್ಯವಾಗಿ ಉದ್ಯೋಗ ಕಡಿತ ಮಾಡಿದಾಗ ಕಂಪನಿಗಳು ಒಂದು ಅಥವಾ ಎರಡು ತಿಂಗಳ ವೇತನ ನೀಡಿ ಕೈತೊಳೆದುಕೊಳ್ಳುತ್ತವೆ. ಆದರೆ ಕ್ಯಾನ್ವಾ ತನ್ನ ವಜಾಗೊಂಡ ನೌಕರರಿಗೆ ಕನಿಷ್ಠ 6 ತಿಂಗಳ ಸಂಪೂರ್ಣ ಸಂಬಳವನ್ನ ಪರಿಹಾರವಾಗಿ ನೀಡುತ್ತಿದೆ. ಇದು ಹೊಸ ಕೆಲಸ ಹುಡುಕುವವರೆಗೆ ಅವರಿಗೆ ಭಾರಿ ಆರ್ಥಿಕ ಭದ್ರತೆ ಒದಗಿಸುತ್ತದೆ.
ಕೇವಲ ಸಂಬಳ ಮಾತ್ರವಲ್ಲದೆ, ಮುಂದಿನ 1 ವರ್ಷದವರೆಗೆ ನೌಕರರಿಗೆ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ವಿಮೆಯ ಸೌಲಭ್ಯವನ್ನ ಕೂಡ ಕಂಪನಿ ಮುಂದುವರಿಸಲಿದೆ. ಇದು ಕೆಲಸ ಕಳೆದುಕೊಂಡ ಆತಂಕದಲ್ಲಿರುವ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ.
ಸ್ವಂತ ಉದ್ಯಮಕ್ಕೆ 10,000 ಡಾಲರ್ ಬಂಪರ್ ಆಫರ್
ಈ ಲೇಆಫ್ ಅನ್ನು ಡ್ರೀಮ್ ಲೇಆಫ್ ಎನ್ನಲು ಮತ್ತೊಂದು ಪ್ರಮುಖ ಕಾರಣ, ಕಂಪನಿಯು ಉದ್ಯೋಗಿಗಳ ಭವಿಷ್ಯದ ಬಗ್ಗೆ ತೋರಿರುವ ಕಾಳಜಿ. ವಜಾಗೊಂಡ ನೌಕರರು ಹೊಸದಾಗಿ ಏನಾದರೂ ಸ್ವಂತ ಬಿಸಿನೆಸ್ ಶುರು ಮಾಡಲು ಬಯಸಿದರೆ ಅಥವಾ ಯಾವುದಾದರೂ ಕಮ್ಯುನಿಟಿ ಪ್ರಾಜೆಕ್ಟ್ ಆರಂಭಿಸಲು ಇಚ್ಛಿಸಿದರೆ, ಅವರಿಗೆ ಬರೋಬ್ಬರಿ 10,000 ಡಾಲರ್ ಅಂದರೆ ಅಂದಾಜು ಸುಮಾರು 8.4 ಲಕ್ಷ ರೂಪಾಯಿ ಆರ್ಥಿಕ ಅನುದಾನವನ್ನ (Grant) ನೀಡಲು ಕ್ಯಾನ್ವಾ ನಿರ್ಧರಿಸಿದೆ.
ಅಲ್ಲದೆ, ಸಂಸ್ಥೆಯ ಷೇರುಗಳನ್ನ ಪಡೆಯಲು ಇದ್ದ 1 ವರ್ಷದ ಕಾಯುವಿಕೆಯ ಅವಧಿಯ ಷರತ್ತನ್ನ ಕೂಡ ವಜಾಗೊಂಡ ನೌಕರರಿಗೆ ಸಡಿಲಿಸಿದೆ.
ಲ್ಯಾಪ್‌ಟಾಪ್ ವಾಪಸ್ ಬೇಡ, ನೌಕರರಿಗೇ ಮ್ಯಾಕ್‌ಬುಕ್ ಉಡುಗೊರೆ
ಐಟಿ ಉದ್ಯೋಗಿಗಳನ್ನ ವಜಾಗೊಳಿಸಿದ ತಕ್ಷಣ ಕಂಪನಿಗಳು ಮಾಡುವ ಮೊದಲ ಕೆಲಸವೆಂದರೆ ಲ್ಯಾಪ್‌ಟಾಪ್ ಮತ್ತು ಐಡಿ ಕಾರ್ಡ್ ವಾಪಸ್ ಪಡೆಯುವುದು. ಆದರೆ, ಕ್ಯಾನ್ವಾ ತನ್ನ ಉದ್ಯೋಗಿಗಳು ಬಳಸುತ್ತಿದ್ದ ಆ್ಯಪಲ್ ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳನ್ನ ಅವರಿಗೇ ಉಡುಗೊರೆಯಾಗಿ ನೀಡಿದೆ.
ಹೌದು, ಹೊಸ ಕೆಲಸ ಹುಡುಕಲು ಹಾಗೂ ತಮ್ಮ ಕೌಶಲಗಳನ್ನ ಬೆಳೆಸಿಕೊಳ್ಳಲು ಇದು ಅವರಿಗೆ ನೆರವಾಗಲಿದೆ ಎಂಬುದು ಕಂಪನಿಯ ಉದ್ದೇಶ. ಜೊತೆಗೆ, ಮುಂದಿನ 1 ವರ್ಷದವರೆಗೆ ಹೊಸ ಉದ್ಯೋಗ ಹುಡುಕಲು ಕೂಡ ಕ್ಯಾನ್ವಾ ಸಂಪೂರ್ಣ ಮಾರ್ಗದರ್ಶನ ಹಾಗೂ ಬೆಂಬಲ ನೀಡಲಿದೆ.
ಒಟ್ಟಿನಲ್ಲಿ, ಲೇಆಫ್ ಎಂಬುದು ಎಂತಹದ್ದೇ ಕಠಿಣ ಸಂದರ್ಭವಾದರೂ, ನೌಕರರನ್ನುಅತ್ಯಂತ ಗೌರವಯುತವಾಗಿ ಹಾಗೂ ಮಾನವೀಯತೆಯಿಂದ ನಡೆಸಿಕೊಳ್ಳಬಹುದು ಎಂಬುದನ್ನ ಕ್ಯಾನ್ವಾ ಇಡೀ ಕಾರ್ಪೊರೇಟ್ ಜಗತ್ತಿಗೆ ತೋರಿಸಿಕೊಟ್ಟಿದೆ. ಇದೇ ಕಾರಣಕ್ಕೆ ಇಂದು ಕ್ಯಾನ್ವಾದ ಈ ನಿರ್ಧಾರ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಉದ್ಯೋಗ ಕಳೆದುಕೊಂಡವರ ಪಾಲಿಗೆ ಇದು ನಿಜಕ್ಕೂ ಡ್ರೀಮ್ ಲೇಆಫ್ ಆಗಿ ಪರಿಣಮಿಸಿದೆ.


Click it and Unblock the Notifications
