Budget 2025: ಬಜೆಟ್ ಅಧಿವೇಶನ, ಸರ್ವ ಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ
ನವದೆಹಲಿ, ಜನವರಿ 29: 2025ರ ಸಂಸತ್ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಶನಿವಾರ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರ ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆದಿದೆ.
ಬಜೆಟ್ ಅಧಿವೇಶನದ ಮೊದಲ ದಿನವಾದ ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಜನವರಿ 31 ರಿಂದ ಫೆಬ್ರವರಿ 13ರ ತನಕ ಬಜೆಟ್ ಅಧಿವೇಶನದ ಮೊದಲ ಭಾಗ ನಡೆಯಲಿದೆ.

ಫೆಬ್ರವರಿ 1ರ ಶನಿವಾರ ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಸತತ 8ನೇ ಬಾರಿಗೆ ನಿರ್ಮನಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಮೂಲಕ ಸತತವಾಗಿ 8 ಬಾರಿ ಬಜೆಟ್ ಮಂಡನೆ ಮಾಡಿದ ಮೊದಲ ಹಣಕಾಸು ಸಚಿವರು ಎಂಬ ಹೆಗ್ಗಳಿಕೆಯನ್ನು ಅವರು ಪಡೆಯಲಿದ್ದಾರೆ.
ಸರ್ವಪಕ್ಷಗಳ ಸಭೆ ಕರೆದ ಸರ್ಕಾರ: ಕೇಂದ್ರ ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಜನವರಿ 30ರಂದು ಸರ್ವಪಕ್ಷಗಳ ಸಭೆ ಕರೆದಿದೆ. ಸುಗಮವಾಗಿ ಬಜೆಟ್ ಅಧಿವೇಶನವನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರ ಪ್ರತಿಪಕ್ಷಗಳಿಗೆ ಮನವಿ ಮಾಡಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜು ಮಾತನಾಡಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಉತ್ತಮ, ಸಮತೋಲಿತ ಬಜೆಟ್ ಮಂಡಿಸಲಿದ್ದಾರೆ. ಪ್ರತಿಪಕ್ಷಗಳು ಬಜೆಟ್ ಅಧಿವೇಶನ ಯಶಸ್ವಿಯಾಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜನವರಿ 31 ರಿಂದ ಫೆಬ್ರವರಿ 13ರ ತನಕ ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪ ನಡೆಯಲಿದೆ. ಈ ಸಮಯದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸಂಸತ್‌ನಲ್ಲಿ ಉತ್ತರ ನೀಡಲಿದ್ದಾರೆ.
ಬಜೆಟ್ ಕುರಿತು ಚರ್ಚೆ ನಡೆಸಲು ಮಾರ್ಚ್ 10 ರಿಂದ 2ನೇ ಹಂತದ ಕಲಾಪ ಆರಂಭವಾಗಲಿದೆ. ಒಟ್ಟು ಎರಡು ಹಂತದಲ್ಲಿ ಬಜೆಟ್ ಅಧಿವೇಶನ 27 ದಿನಗಳ ಕಾಲ ನಡೆಯಲಿದೆ. ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಗದ್ದಲ ಮಾಡಿ, ಕಲಾಪಕ್ಕೆ ಅಡ್ಡಿ ಮಾಡಿದ್ದವು. ಆದ್ದರಿಂದ ಈಗ ಸುಗಮ ಕಲಾಪಕ್ಕೆ ಮನವಿ ಸಲ್ಲಿಕೆ ಮಾಡಲಾಗುತ್ತಿದೆ.
2024ರ ಫೆಬ್ರವರಿಯಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದರು. ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಜುಲೈ 23 ರಂದು ಪೂರ್ಣ ಪ್ರಮಾಣದ ಬಜೆಟ್ ಅನ್ನು ಪುನಃ ಮಂಡನೆ ಮಾಡಲಾಯಿತು.
ಬಿಜೆಪಿ 2024ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ದೇಶದ ಜನರಿಗೆ ಹಲವಾರು ಭರವಸೆಗಳನ್ನು ನೀಡಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ. ಅಲ್ಲದೇ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ಕೊಡುಗೆಗಳನ್ನು ನೀಡುವ ನಿರೀಕ್ಷೆ ಇದೆ.












Click it and Unblock the Notifications