Budget 2024: ಬಜೆಟ್ ಮೇಲಿನ ಚರ್ಚೆಗೆ 20 ಗಂಟೆಗಳು ನಿಗದಿ
ನವದೆಹಲಿ, ಜುಲೈ 23: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಮಯ ನಿಗದಿ ಮಾಡಲಾಗಿದೆ.
ಲೋಕಸಭೆ ಚುನಾವಣೆ ಮುಗಿದು, ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಂಡನೆಯಾಗುತ್ತಿರುವ ಪೂರ್ಣ ಪ್ರಮಾಣದ ಮೊದಲ ಬಜೆಟ್ ಇದು. ಆದ್ದರಿಂದ ಬಜೆಟ್ ಮೇಲೆ ಜನರಿಗೆ ಅಪಾರವಾದ ನಿರೀಕ್ಷೆ ಇದೆ.

ಆಗಸ್ಟ್ 12ರ ತನಕ ಲೋಕಸಭೆ ಬಜೆಟ್ ಅಧಿವೇಶನ ನಡೆಯಲಿದೆ. ಬಜೆಟ್ ಕುರಿತು ಚರ್ಚೆ ನಡೆಸಲು ಕಲಾಪ ಸಲಹಾ ಸಮಿತಿ ಸಭೆ (ಬಿಎಸಿ) ನಡೆಸಲಾಗಿದ್ದು, ರಾಜ್ಯಸಭೆ, ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಮಯವನ್ನು ನಿಗದಿಗೊಳಿಸಲಾಗಿದೆ.
ಕಲಾಪ ಸಲಹಾ ಸಮಿತಿಯಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಿದ್ದಾರೆ. ಸೋಮವಾರ ಸಮಿತಿ ಸಭೆಯನ್ನು ನಡೆಸಲಾಗಿದ್ದು, ಸುಗಮವಾಗಿ ಕಲಾಪ ನಡೆಸುವ ಕುರಿತು ಚರ್ಚೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಬಬಜೆಟ್ ಮೇಲಿನ ಚರ್ಚೆಗೆ ಸಮಯ ತೀರ್ಮಾನ ಮಾಡಲಾಗಿದ್ದು, ಯಾವ ಪಕ್ಷಕ್ಕೆ ಎಷ್ಟು ಸಮಯ ಎಂದು ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗಳು ನಡೆಯುವಾಗ ರೈಲ್ವೆ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಕುರಿತು ಪ್ರತ್ಯೇಕವಾಗಿ ಚರ್ಚೆಗಳು ನಡೆಯಲಿವೆ. ರಾಜ್ಯಸಭೆಯಲ್ಲಿ ನಾಲ್ಕು ಸಚಿವಾಲಯಗಳ ಕುರಿತು ಚರ್ಚಿಸಲು 4 ಗಂಟೆಗಳ ಸಮಯ ನಿಗದಿ ಮಾಡಲಾಗಿದೆ. ಆದರೆ ಯಾವ ಸಚಿವಾಲಯಗಳು ಎಂದು ಇನ್ನೂ ನಿಗದಿ ಮಾಡಬೇಕಿದೆ.
ಬಜೆಟ್ ಮೇಲೆ ಸುಮಾರು 20 ಗಂಟೆಗಳ ಕಾಲ ಚರ್ಚೆಗಳು ನಡೆಯಲಿವೆ. ಬಳಿಕ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ಸದನಗಳಿಗೆ ಪ್ರತಿಕ್ರಿಯೆಯನ್ನು ನೀಡಲಿದ್ದಾರೆ.
ಜುಲೈ 22ರಂದು ಕೇಂದ್ರದ ಬಜೆಟ್ ಅಧಿವೇಶನ ಆರಂಭವಾಗಿದೆ. ಆಗಸ್ಟ್ 12ರ ತನಕ ಅಧಿಕವೇಶನ ನಡೆಯಲಿದೆ. ಬಜೆಟ್ ಜೊತೆಗೆ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ.
ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿ ಬಜೆಟ್‌ಗೆ ಅನುಮೋದನೆ ಪಡೆದಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಬಳಿಕ ಬಜೆಟ್ ಮಂಡಿಸಲಾಗುತ್ತದೆ. 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗಲಿದೆ.
ನಿರ್ಮಲಾ ಸೀತಾರಾಮನ್ 2024ರ ಫೆಬ್ರುವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಸೇರಿ ಈವರೆಗೆ 6 ಬಾರಿ ಬಜೆಟ್ ಮಂಡಿಸಿದ್ದಾರೆ. ಮಂಗಳವಾರ ಅವರು ಮಂಡಿಸುತ್ತಿರುವುದು 7ನೇ ಬಜೆಟ್ ಆಗಿದೆ. ಈ ಮೂಲಕ ಹೊಸ ದಾಖಲೆ ಮಾಡಲಿದ್ದಾರೆ.
ಇದುವರೆಗೂ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ನಿರ್ಮಲಾ ಸೀತಾರಾಮನ್ ಈ ದಾಖಲೆಯನ್ನು ಮುರಿಯಲಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಅವರ ರಾಜ್ಯಸಭೆ ಅವಧಿಯೂ ಮುಕ್ತಾಯಗೊಳ್ಳಲಿದೆ.












Click it and Unblock the Notifications